ಬೆಂಗಳೂರು(ಜ.04]: ರೈತರ ಸಾಲ ಮನ್ನಾ ಕುರಿತಂತೆ ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲ ಟೀಕೆಗೆ ಉತ್ತರ ಕೊಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬರುವ ಫೆ. 8 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತವನ್ನು ನಾಲ್ಕು ಕಂತುಗಳ ಬದಲು ಒಂದೇ ಕಂತಿನಲ್ಲಿ ಪಾವತಿಸುವ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಸಿದ್ದತೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಫೆ.8ರಂದು ಬಜೆಟ್‌ ಮಂಡನೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ. ಬಜೆಟ್‌ ಘೋಷಣೆ ವೇಳೆ ಸಾಲಮನ್ನಾ ಯೋಜನೆಯ ಸಂಪೂರ್ಣ ಮೊತ್ತ 46 ಸಾವಿರ ಕೋಟಿ ರು.ಗಳನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಚುಕ್ತಾ ಮಾಡುವ ಬಗ್ಗೆ ಪ್ರಕಟಿಸಲಾಗುವುದು. ರೈತರಲ್ಲಿ ಅವಿಶ್ವಾಸ ಮೂಡಿಸುವ ಪ್ರತಿಪಕ್ಷಗಳ ಹುನ್ನಾರಕ್ಕೆ ಆಸ್ಪದ ನೀಡಬಾರದು ಎಂಬ ಕಾರಣಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ರೈತರ ಸಾಲಮನ್ನಾ ಯೋಜನೆ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ವೈಜ್ಞಾನಿಕವಾಗಿ ಮಾಡಿಲ್ಲ ಎಂದು ಆರೋಪಿದ್ದಾರೆ. ಈಗಲಾದರೂ ಅವರಿಗೆ ರೈತರ ಬಗ್ಗೆ ಕಾಳಜಿ ಬಂದಿದ್ದರೆ ಗೌರವ ಸಲ್ಲಿಸುತ್ತೇನೆ. ಬಹುಶಃ ಅವರಿಗೆ ಸಾಲಮನ್ನಾದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರಬಹುದು. ಅವರಿಗೆ ಸರ್ಕಾರ ಯಾವ ರೀತಿಯಲ್ಲಿ ವೈಜ್ಞಾನಿಕವಾಗಿ ಸಾಲಮನ್ನಾ ಮಾಡಲಾಗುತ್ತಿದೆ ಎಂಬ ಸಮಗ್ರ ಮಾಹಿತಿಯುಳ್ಳ ಪ್ರತಿಯನ್ನು ಕಳುಹಿಸಿಕೊಡಲಾಗುವುದು’ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೆಸರು ಪ್ರಸ್ತಾಪಿಸಿದರೆ ಪರೋಕ್ಷವಾಗಿ ಆಕ್ಷೇಪಿಸಿದರು.

ಪ್ರಧಾನಿ ಹುದ್ದೆ ಉಳಿಯೋದು ಕಷ್ಟಎಂದು ಮೋದಿಗೆ ಹೇಳಿದ್ದೇನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ರೈತರಿಗೆ ಸಾಲ ಮನ್ನಾ ಎಂಬ ಲಾಲಿಪಾಪ್‌ ಕೊಡಲಾಗಿದೆ ಎಂದು ಮೋದಿ ಲೇವಡಿ ಮಾಡಿದ್ದಾರೆ. ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನೀವು ಉಳಿಯಬೇಕಾದರೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರಧಾನಿ ಹುದ್ದೆ ಉಳಿಯುವುದು ಕಷ್ಟ. ರೈತರನ್ನು ಕಡೆಗಣಿಸಬೇಡಿ ಎಂದು ಹೇಳಿದ್ದೇನೆ’ ಎಂದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಜನತೆ ಕೈ ಜೋಡಿಸಬೇಕು. 10-12 ಜೆಡಿಎಸ್‌ ನಾಯಕರನ್ನು ಲೋಕಸಭೆಗೆ ಕಳುಹಿಸಬೇಕು. ಉತ್ತರ ಕರ್ನಾಟಕದ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಬೇಕು. ಇಲ್ಲದಿದ್ದರೆ ಯೋಜನೆ ಸಾಕಾರವಾಗುವುದಿಲ್ಲ. ಈ ಸತ್ಯವನ್ನು ಜನತೆ ತಿಳಿದುಕೊಳ್ಳಬೇಕು. ಇದನ್ನು ಜನರು ತಿಳಿದುಕೊಳ್ಳದಿದ್ದರೆ ಬಿಜೆಪಿಯಿಂದ ಟೋಪಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೃದ್ಧಾಪ್ಯ ವೇತನ 2000 ರು.ಗೆ ಏರಿಕೆ

ಮುಂದಿನ ಬಜೆಟ್‌ನಲ್ಲಿ ಹಿರಿಯ ನಾಗರಿಕರ ವೃದ್ಧಾಪ್ಯ ವೇತನವನ್ನು ಒಂದು ಸಾವಿರ ರು.ನಿಂದ ಎರಡು ಸಾವಿರ ರು.ಗೆ ಹೆಚ್ಚಳ ಮಾಡುವ ಇಂಗಿತ ಇದೆ. ಅಲ್ಲದೇ, ವಿಧವಾ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸರ್ಕಾರ ಬೀಳಿಸಲಿ ಎಂದು ಪ್ಯಾರಿಸ್‌ಗೆ ಹೋಗಿದ್ದೆ

ಇತ್ತೀಚೆಗೆ ಬಿಜೆಪಿ ಮುಖಂಡರೊಬ್ಬರು ಸಹ ಸರ್ಕಾರ ಪತನವಾಗುವ ಬಗ್ಗೆ ಹೇಳಿಕೆ ನೀಡಿದ್ದರು. ಸರ್ಕಾರ ಪತನಗೊಳಿಸುವ ಪ್ರಯತ್ನ ಮಾಡಲಿ ಎಂಬ ಕಾರಣಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿದ್ದೆ. ನನ್ನಿಂದ ಸಮಸ್ಯೆಯಾಗಬಾರದು ಎಂದು ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದೆ. ಆದರೂ ಏನೂ ಮಾಡಲಿಲ್ಲ ಎಂದು ಮಾಜಿ ಸಚಿವ ಉಮೇಶ್‌ ಕತ್ತಿ ಉದ್ದೇಶಿಸಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ರಾಜ್ಯ ನಂ.1 ಮಾಡದಿದ್ರೆ ಪಕ್ಷದ ಕಚೇರಿಗೆ ಬೀಗ

ಮುಂದಿನ ಚುನಾವಣೆಯಲ್ಲಾದರೂ ನಾಡಿನ ಜನತೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಜೆಡಿಎಸ್‌ ಪಕ್ಷಕ್ಕೆ ಸ್ವಂತ ಶಕ್ತಿ ಕೊಡಬೇಕು. ಬಹುಮತ ನೀಡಿದರೆ ದೇಶದಲ್ಲಿಯೇ ರಾಜ್ಯವನ್ನು ನಂಬರ್‌ ಒನ್‌ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಜೆಡಿಎಸ್‌ ಪಕ್ಷದ ಕಚೇರಿಗೆ ಬೀಗ ಹಾಕುತ್ತೇನೆ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ