ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಉತ್ತರ ಕರ್ನಾಟಕದ ಹಳ್ಳಿಗಳಿಗೆ ಈಗ ಮಹಾ ಪ್ರವಾಹ ಭೀತಿ
ನೆರೆ ರಾಜ್ಯದಿಂದ ಹರಿದುಬರುತ್ತಿದೆ ಭಾರಿ ನೀರು, ಬೆಳಗಾವಿಯಲ್ಲಿ 25 ಸೇತುವೆಗಳು ಮುಳುಗಡೆ
ಬೆಂಗಳೂರು(ಆ.14): ನೆರೆಯ ಮಹಾರಾಷ್ಟ್ರದ ಪಶ್ಚಿಮಘಟ್ಟಪ್ರದೇಶದಲ್ಲಿ ಶನಿವಾರ ಕೂಡ ಮಳೆ ಅಬ್ಬರ ಮುಂದುವರಿದಿರುವುದರಿಂದ ಉತ್ತರ ಕರ್ನಾಟಕದ ಕೃಷ್ಣಾ, ಘಟಪ್ರಭಾ ನದಿಗಳ ಮಟ್ಟ ಏರಿದ್ದು ನದಿ ತೀರ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಘಟಪ್ರಭಾ ನದಿಯ ಅಬ್ಬರದಿಂದಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಕೆಲವು ಪ್ರದೇಶಗಳು ಮುಳುಗಡೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 25ಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿವೆ. ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳಿಂದ ಘಟಪ್ರಭಾ ನದಿಗೆ 45 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. ಗೋಕಾಕ್ ನಗರದ ಕುಂಬಾರಗಲ್ಲಿ, ತಾಲೂಕಿನ ತಳಕಟನಾಳ ಗ್ರಾಮಕ್ಕೆ ನೀರು ನುಗ್ಗಿದ್ದು, ಸರ್ಕಾರಿ ಶಾಲೆ ನಡುಗಡ್ಡೆಯಾಗಿದೆ. ಇದರಿಂದಾಗಿ ಶಾಲೆಯಲ್ಲಿನ ಸಾಮಗ್ರಿಗಳನ್ನು ಮೊದಲ ಮಹಡಿಗೆ ಸ್ಥಳಾಂತರ ಮಾಡಲಾಗಿದೆ.
ಮಹಾರಾಷ್ಟ್ರದಿಂದ 2 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಕೃಷ್ಣಾ ನದಿಗೆ ಬರುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕಿನ ಹಲವು ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಅಲ್ಲದೆ, ಆಲಮಟ್ಟಿಯಲ್ಲಿರುವ ಅಣೆಕಟ್ಟೆಗೆ 1.86 ಲಕ್ಷ ಕ್ಯುಸೆಕ್ ನೀರು ಬರುತ್ತಿದ್ದು, 2.25 ಲಕ್ಷ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಒಂದು ವೇಳೆ ಮಹಾರಾಷ್ಟ್ರದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಂದರೆ ಎರಡೂ ಜಿಲ್ಲೆಗಳ ನಾಲ್ಕು ತಾಲೂಕುಗಳ ಬಹುತೇಕ ಗ್ರಾಮಗಳು ಮುಳುಗಡೆಯಾಗಲಿವೆ.
ಕೃಷ್ಣಾ ನದಿಗೆ 2.30 ಲಕ್ಷ ಕ್ಯುಸೆಕ್: ಮತ್ತೆ ಪ್ರವಾಹ ಆತಂಕ
ನಾರಾಯಣಪುರದಲ್ಲಿ ಎಚ್ಚರಿಕೆ:
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಶನಿವಾರ ಮಧ್ಯಾಹ್ನ 2.20 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದೆ. ಹೀಗಾಗಿ ನದಿ ಪಾತ್ರದಲ್ಲಿ ಇಳಿಯದಂತೆ ಮೀನುಗಾರರಿಗೆ, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಬಿರುಕು:
ಇನ್ನು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕೆಮ್ಮಣ್ಣುಗುಂಡಿಗೆ ತೆರಳುವ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೊಂಡೆಖಾನ್ ಹಳ್ಳದ ಬಳಿ ಕಾಂಕ್ರೀಟ್ ರಸ್ತೆ ಬಿರುಕುಬಿಟ್ಟಿದ್ದು, ಮಳೆ ಹೀಗೆಯೇ ಮುಂದುವರಿದರೆ ರಸ್ತೆ ಮತ್ತಷ್ಟುಕುಸಿಯುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರವಾಹ ಎದುರಿಸಲು ಸನ್ನದ್ಧರಾಗಲು ಅಧಿಕಾರಿಗಳಿಗೆ ಸೂಚನೆ
ಅಥಣಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ ್ಮಣ ಸವದಿ ಮತ್ತು ಶಾಸಕ ಮಹೇಶ್ ಕುಮಟಳ್ಳಿ ನೇತೃತ್ವದಲ್ಲಿ ಶನಿವಾರ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುಂಬರುವ ದಿನಗಳಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತಾಲೂಕು ಆಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಮೊದಲ ಹಂತದಲ್ಲಿ ಮುಳುಗಡೆಯಾಗಲಿರುವ ಗ್ರಾಮಗಳ ಸ್ಥಳಾಂತರದ ಕುರಿತು ಚರ್ಚಿಸಲಾಯಿತು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ಸೇರಿದಂತೆ ಇನ್ನಿತರ ನದಿಗಳಲ್ಲಿ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. 1.70 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಈ ನೀರು ಒಂದೆರಡು ದಿನಗಳಲ್ಲಿ 3 ಲಕ್ಷ ಕ್ಯೂಸೆಕ್ ದಾಟಿದರೆ ಅಪಾಯದ ಮಟ್ಟಮೀರಿ ಹರಿಯಲು ಆರಂಭವಾಗುತ್ತದೆ. ಆಗ ಅನಿವಾರ್ಯವಾಗಿ ತಾಲೂಕಿನ ಜನವಾಡ, ಸತ್ತಿ, ಹುಲಗಬಾಳ, ಕರ್ಲಟ್ಟಿ, ದೊಡವಾಡ, ಸಪ್ತಸಾಗರ, ಇನ್ನಿತರ ಗ್ರಾಮಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಅದಕ್ಕಾಗಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣ, ರೆಡ್ಡಿ ಹಟ್ಟಿಆರ್.ಸಿ. ಸೆಂಟರ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ಅಗತ್ಯಬಿದ್ದರೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿ ದನಕರುಗಳಿಗೆ ಮೇವು, ಜನರಿಗೆ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ, ಪ್ರವಾಹ ಎದುರಾದರೆ ಜನರನ್ನ ಸಂರಕ್ಷಿಸಲು ಬೋಟ್‌ಗಳ ವ್ಯವಸ್ಥೆಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಕಳೆದ ಬಾರಿ ಆಗಿರುವ ದೋಷಗಳನ್ನು ಅಧಿಕಾರಿಗಳು ಈ ಬಾರಿ ತಿದ್ದಿಕೊಂಡು ಬರಿ ಪಾರದರ್ಶಕ ಮತ್ತು ಕಾನೂನು ಚೌಕಟ್ಟಿನಲ್ಲಿ ಸಂತ್ರಸ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕಳೆದ ಬಾರಿ ಮನೆ ಕಳೆದುಕೊಂಡವರಿಗೆ ಸರಿಯಾಗಿ ಪರಿಹಾರ ದೊರಕಿಲ್ಲ. ಕೆಲವು ಗುತ್ತಿಗೆದಾರರಿಗೆ, ರೈತರಿಗೆ ಹಣ ಸಂದಾಯವಾಗಿಲ್ಲ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಇರುವುದಕ್ಕೆ ಕಾರಣವಾಗಿದೆ. ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ನಂತರ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗಳ ಕುರಿತು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೀಡಿದ ಜವಾಬ್ದಾರಿಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆ ಕುಸಿತ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ
ಈ ವೇಳೆ ತಹಸೀಲ್ದಾರ ಸುರೇಶ ಮುಂಜೆ, ಡಿವೈಎಸ್ಪಿ ಶ್ರೀಪಾದ್ ಜಾಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಮುಖರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೋಳ, ಜಿಪಂ ಎಂಜಿನಿಯರಿಂಗ್ ವಿಭಾಗದ ವೀರಣ್ಣ ವಾಲಿ, ಲೋಕೋಪಯೋಗಿ ಇಲಾಖೆಯ ಜೆ.ಎಸ್. ಹಿರೇಮಠ, ಪಶುಸಂಗೋಪನಾ ಇಲಾಖೆಯ ಡಾ. ಹುಂಡೇಕಾರ, ಸಿಡಿಪಿಒ ಅಶೋಕ ಕಾಂಬಳೆ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ್ ಪಾಟೀಲ, ಆರೋಗ್ಯ ಇಲಾಖೆಯ ಡಾ. ಬಸಗೌಡ ಕಾಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನೀರಾವರಿ ಇಲಾಖೆ ಅಧಿಕಾರಿಳಿಗೆ ನೋಟಿಸ್ ನೀಡಿ
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ಮತ್ತು ಕೃಷ್ಣಾ ನದಿ ಪ್ರವಾಹ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಗೈರುಹಾಜರು ಇರುವ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನೋಟಿ ನೀಡುವಂತೆ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಸೂಚನೆ ನೀಡಿದರು. ಅಥಣಿಯಲ್ಲಿರುವ ಕಚೇರಿಗಳಲ್ಲಿ 7 ಜನ ಅಧಿಕಾರಿಗಳಿದ್ದಾರೆ. ಅವರಲ್ಲಿ ಒಬ್ಬರೂ ಈ ಸಭೆಗೆ ಬಂದಿಲ್ಲ. ಅವರೆಲ್ಲರಿಗೂ ನೋಟಿಸ್ ಜಾರಿ ಮಾಡಲು ತಹಸೀಲ್ದಾರ್ ಸುರೇಶ್ ಮುಂಜೆ ಅವರಿಗೆ ಸೂಚಿಸಿದರು.