* 3ನೇ ಅಲೆ: ಎಲ್ಲ ಜಿಲ್ಲೇಲೂ ಮಕ್ಕಳ ಕ್ವಾರಂಟೈನ್‌ ಕೇಂದ್ರ* ಆಸ್ಪತ್ರೆಗಳಲ್ಲಿ ಮಕ್ಕಳ ಆರೋಗ್ಯ ಕೇಂದ್ರ ಸ್ಥಾಪನೆ* ಮಕ್ಕಳ ಜತೆ ಪೋಷಕರೂ ಇರಲು ವ್ಯವಸ್ಥೆ: ಜೊಲ್ಲೆ

ಬೆಂಗಳೂರು(ಮೇ.19): ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ಕಂಡು ಬರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈಗಿರುವ ಆಸ್ಪತ್ರೆಗಳಲ್ಲಿ ಮಕ್ಕಳ ಆರೋಗ್ಯ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, 18 ವರ್ಷದೊಳಗಿನ ಮಕ್ಕಳ ಕ್ವಾರಂಟೈನ್‌ಗಾಗಿ ವಸತಿ ಶಾಲೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗುವ ಮಕ್ಕಳ ಜತೆ ಪೋಷಕರು ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೊರೋನಾದಿಂದ ಬಾಧಿತರಾದ ಮಕ್ಕಳನ್ನು ಗುರುತಿಸಲು ಮತ್ತು ಪುನರ್ವಸತಿ ಕಲ್ಪಿಸಲು ಸರ್ಕಾರ 1098 ಸಹಾಯವಾಣಿ ಆರಂಭಿಸಿದೆ. ಹಿರಿಯ ಐಎಎಸ್‌ ಅಧಿಕಾರಿ ಮೋಹನ್‌ ರಾಜ್‌ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮಕ್ಕಳಿಗೆ ಕೌಟುಂಬಿಕ ವಾತಾವರಣ ಒದಗಿಸುವುದು ಇಲಾಖೆ ಮತ್ತು ಸರ್ಕಾರದ ಕರ್ತವ್ಯವಾಗಿದೆ ಎಂದರು.

"

ಮೂರನೇ ಅಲೆಯ ವೇಳೆ ಚಿಕ್ಕಮಕ್ಕಳಿಗೆ ಹೆಚ್ಚಾಗಿ ಸೋಂಕು ಕಂಡು ಬರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಲಕ್ಷಣಗಳಿಲ್ಲದ ಕೋವಿಡ್‌ಪೀಡಿತ ಮಕ್ಕಳಿಗೆ ವಿಶೇಷ ಪೀಡಿಯಾಟ್ರಿಕ್‌ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ 30 ಜಿಲ್ಲೆಗಳಲ್ಲಿ ಪ್ರತ್ಯೇಕ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪನೆ, ಲಕ್ಷಣವುಳ್ಳ ಕೋವಿಡ್‌ ಸೋಂಕಿತ ಮಕ್ಕಳಿಗೆ ತಾಲೂಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್‌ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ವಿಶೇಷ ಆರೈಕೆ ಹಾಗೂ ಆರೈಕೆಗೆ ಇಲಾಖೆಯಿಂದ ವಿಶೇಷ ಆರೈಕೆದಾರರನ್ನು ನೇಮಕ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

ಲಕ್ಷಣಗಳಿಲ್ಲದ ಸೋಂಕಿತ ಮಕ್ಕಳಿಗೆ 30 ಜಿಲ್ಲೆಗಳಲ್ಲೂ ವಿಶೇಷ ಪೀಡಿಯಾಟ್ರಿಕ್‌ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿ ಚಿಕಿತ್ಸೆ ನೀಡಲಾಗುವುದು. ಲಕ್ಷಣವುಳ್ಳ ಮಕ್ಕಳಿಗೆ ಆಸ್ಪತ್ರೆಯಲ್ಲಿ ಕೋವಿಡ್‌ ಕೇಂದ್ರ ತೆರೆಯಲಾಗುವುದು.

- ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಅನಾಥ ಮಕ್ಕಳಿಗಾಗಿ ‘ಭಾಗ್ಯಲಕ್ಷ್ಮಿ’ ಮಾದರಿ ಯೋಜನೆ: ಜೊಲ್ಲೆ

ಕೋವಿಡ್‌ನಿಂದ ಅನಾಥರಾಗುವ ಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಮಾದರಿಯಲ್ಲೇ ಹೊಸ ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಅನಾಥವಾಗುವ ಮಕ್ಕಳಿಗೆ ದಾನಿಗಳಿಂದ ಶಿಕ್ಷಣ ವ್ಯವಸ್ಥೆ ಮಾಡಲಾಗುವುದು. ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳಲು ಮುಂದೆ ಬಂದರೆ ಅವರಿಗೆ ಸರ್ಕಾರ ಸಹಕಾರ ನೀಡುತ್ತದೆ. ಯಾವುದೇ ಮಠಾಧೀಶರು ನೇರವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅವಕಾಶ ಇಲ್ಲ. ಅವರು ಸರ್ಕಾರವನ್ನು ಸಂಪರ್ಕಿಸಿ ಕಾನೂನು ರೀತ್ಯ ದತ್ತು ಪಡೆಯಬೇಕು ಎಂದು ತಿಳಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona