Vijayapura: ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ರೊಚ್ಚಿಗೆದ್ದ ರೈತರು: ಕಲ್ಲೆಸೆತ
ಪ್ರತಿ ಟನ್ ಕಬ್ಬಿಗೆ SRP ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ, ಸಕ್ಕರೆ ಕಾರ್ಖಾನೆ ಕಚೇರಿ ಗ್ಲಾಸ್‌ಗಳು ಪುಡಿಪುಡಿಯಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಬಾಲಾಜಿ ಶುಗರ್ಸ್‌ನಲ್ಲಿ ನಡೆದಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಅ.29): ಪ್ರತಿ ಟನ್ ಕಬ್ಬಿಗೆ SRP ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ, ಸಕ್ಕರೆ ಕಾರ್ಖಾನೆ ಕಚೇರಿ ಗ್ಲಾಸ್‌ಗಳು ಪುಡಿಪುಡಿಯಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಬಾಲಾಜಿ ಶುಗರ್ಸ್‌ನಲ್ಲಿ ನಡೆದಿದೆ. ಶಾಂತಿಯುತವಾಗಿ ಶುರುವಾಗಿದ್ದ ಪ್ರತಿಭಟನೆ ಉಗ್ರ ಸ್ವರೂಪ ಪಡೆದು ಪೊಲೀಸರು ಪರದಾಡುವಂತಾಯ್ತು.
ಕಲ್ಲೂ ತೂರಾಟ, ಕೆಲಕಾಲ ಗಲಾಟೆ: ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಮುದ್ದೇಬಿಹಾಳ, ತಾಳಿಕೋಟೆ, ಬಸವನ ಬಾಗೇವಾಡಿ ತಾಲೂಕುಗಳ ಸಾವಿರಾರು ರೈತರು ಯರಗಲ್ಲ-ಮದರಿ ಬಳಿ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ, ಕಲ್ಲೆಸೆದು ಆಕ್ರೋಶ ಹೊರಹಾಕಿದ್ದಾರೆ. ಅಪಾರ ಸಂಖ್ಯೆಯಲ್ಲಿದ್ದ ರೊಚ್ಚಿಗೆದ್ದಿದ್ದ ಕಬ್ಬು ಬೆಳೆಗಾರ ರೈತರನ್ನು ತಡೆಯಲು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಹರಸಾಹಸ ಪಟ್ಟರು ಪ್ರಯೋಜನ ಆಗಲಿಲ್ಲ. ಪೊಲೀಸರ ಕೋಟೆ ಭೇದಿಸಿಕೊಂಡು ಕಾರ್ಖಾನೆ ಒಳಗೆ ನುಗ್ಗಿದ ರೈತರು ನೇರವಾಗಿ ಕಬ್ಬು ನುರಿಸುವ ಘಟಕದ ಬಳಿ ಹೋಗಿ ಅದನ್ನು ಬಂದ್ ಮಾಡುವಂತೆ ಆಗ್ರಹಿಸಿದರು.
2ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿ, ಶಕ್ತಿ ತುಂಬಿ: ಕಾಶಪ್ಪನವರ
ಕಬ್ಬಿನ ಜಲ್ಲೆಗಳ ತೂರಾಟ: ಒಂದು ಹಂತದಲ್ಲಿ ಕಬ್ಬಿನ ಗಣಿಕೆ ಮತ್ತು ಕಲ್ಲುಗಳನ್ನು ಯಂತ್ರದ ಕೊಠಡಿಯತ್ತ ಎಸೆದಾಗ ಕೊಠಡಿಯ ಗಾಜುಗಳು ಪುಡಿಯಾದವು. ಕೈಗೆ ಸಿಕ್ಕ ಕಬ್ಬುಗಳನ್ನ ತೆಗೆದುಕೊಂಡು ಕಂಡು ಕಂಡಲ್ಲಿ ಎಸೆಯುತ್ತಿದ್ದ ದೃಶ್ಯಗಳು ಪೊಲೀಸರನ್ನ ಕಂಗೆಡುವಂತೆ ಮಾಡಿದವು. ರೈತರನ್ನ ಪೊಲೀಸರು ತಡೆಯೋಕೆ ಯತ್ನಿಸಿದ್ರು ಪ್ರಯೋಜನವಾಗಲಿಲ್ಲ.
ಕೆನಾಲ್ ಇಳಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತರು ಜಸ್ಟ್ ಮಿಸ್: ಕೆಲವು ರೈತರು ಕಬ್ಬು ಸಾಗಿಸುವ ಕ್ಯಾನಲಗೆ ಧುಮುಕಿ ಅಪಾಯ ಮೈಮೇಲೆಳೆದುಕೊಳ್ಳಲು ಯತ್ನಿಸಿದರು. ರೈತರ ಆಕ್ರೋಶ ಅರಿತ ಸಿಬ್ಬಂದಿ ಕೂಡಲೇ ಕಬ್ಬು ನುರಿಸುವ ಯಂತ್ರ ಬಂದ್ ಮಾಡಿ ಸಂಭವನೀಯ ಅನಾಹುತ ತಪ್ಪಿಸಿದರು. ಕಬ್ಬು ನುರಿಸುವ ಯಂತ್ರ ಶುರುವಿದ್ದಲ್ಲಿ ರೈತರು ಒಳಗೆ ಸಿಲುಕಿ ಅಪಾಯ ಉಂಟಾಗುವ ಪರಿಸ್ಥಿತಿ ಇತ್ತು.
ಭದ್ರತೆ ನೀಡಲು ಪೊಲೀಸರ ಹರಸಾಹಸ: ಕೆಲ ರೈತರು ಕಾರ್ಖಾನೆ ಆವರಣದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಆಯ್ದು ಕಬ್ಬು ತುಂಬಿಕೊಂಡು ನಿಂತಿದ್ದ ವಾಹನ ಮತ್ತು ಕಾರ್ಖಾನೆಯ ಕಟ್ಟಡಗಳತ್ತ ಎಸೆದು ಆಕ್ರೋಶ ಹೊರ ಹಾಕಿದರು. ಡಿಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಆನಂದ ವಾಘ್ಮೋಡೆ ನೇತೃತ್ವದಲ್ಲಿ ಮುದ್ದೇಬಿಹಾಳ, ತಾಳಿಕೋಟೆ ಮತ್ತು ಡಿಆರ್ ಪೊಲೀಸರು ಭದ್ರತೆ ಒದಗಿಸಲು ಹರಸಾಹಸ ಪಟ್ಟರು.
ರೈತರ ಜೊತೆಗೆ ಮಾತುಕತೆಗೆ ಬಾರದ ಆಡಳಿತ ಮಂಡಳಿ: ರೈತರ ಇಷ್ಟೊಂದು ಆಕ್ರೋಶಕ್ಕೆ ಏನ್ ಕಾರಣ ಅನ್ನೋದನ್ನ ನೋಡೋದಾದ್ರೆ, ಆಡಳಿತ ಕಚೇರಿ ಎದುರು ರೈತರು ಪ್ರತಿಭಟನೆಗೆ ಕುಳಿತಾಗ ಮಾತುಕತೆ ಆಡಳಿತ ಮಂಡಳಿಯವರು ಬಂದಿಲ್ಲ. ಇದರಿಂದ ರೈತರು ಆಕ್ರೋಶಗೊಂಡಿದ್ದರು. ಎಷ್ಟೆ ಬಾರಿ ಮನವಿ ಮಾಡಿದ್ರು ಆಡಳಿತ ಮಂಡಳಿ ರೈತರ ಮಾತಿಗೆ ಖ್ಯಾರೆ ಎಂದಿಲ್ಲವಂತೆ. ಇದರಿಂದ ಪ್ರತಿಭಟನೆ ವಿಕೋಪಕ್ಕೆ ಹೋಯ್ತು ಎನ್ನಲಾಗ್ತಿದೆ.
ವಿಶ್ವ ವಿಖ್ಯಾತ ಗೋಳಗುಮ್ಮಟದಲ್ಲಿ ಕನ್ನಡಾಭಿಮಾನದ ಕೋಟಿ ಕಂಠ ಗಾಯನ!
ಕಬ್ಬಿನ ದರ ಹೆಚ್ಚಿಸಲು ರೈತರ ಆಗ್ರಹ: ಸರ್ಕಾರ ಟನ್ ಕಬ್ಬಿಗೆ 3200 ದರ ನಿಗದಿ ಪಡಿಸಿದೆ. ಬಾಲಾಜಿಯವರು ಕಟಾವು ಮತ್ತು ಸಾಗಣೆ ವೆಚ್ಚ ಮುರಿದುಕೊಂಡು 2502 ರೂ ಕೊಡುತ್ತಾರೆ. 3800 ರೂ ಕೊಡಬೇಕು ಅನ್ನೋದು ರೈತರ ಬೇಡಿಕೆಯಾಗಿದೆ. ಆದರೆ ಎಫ್ಆರ್ಪಿ ದರ ನಿಗದಿ ಪಡಿಸುವುದು ಸರ್ಕಾರವೇ ಹೊರತು ಕಾರ್ಖಾನೆಯವರಲ್ಲ ಈ ವಿಷಯದಲ್ಲಿ ನಾವು ಅಸಹಾಯಕರು ಎಂದು ಕಾರ್ಖಾನೆಯವರು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.