ಮುಂಗಾರು ಐದು ದಿನ ಮುಂಚಿತವಾಗಿ, ಮೇ ೨೭ಕ್ಕೆ ಕೇರಳ ತಲುಪುವ ನಿರೀಕ್ಷೆ. ಜೂನ್ ಮೊದಲ ವಾರದಲ್ಲಿ ದಕ್ಷಿಣ ಕನ್ನಡಕ್ಕೆ ಆಗಮಿಸಿ, ನಂತರ ರಾಜ್ಯಾದ್ಯಂತ ಹರಡಲಿದೆ. ೧೬ ವರ್ಷಗಳ ನಂತರ ಮೊದಲ ಬಾರಿಗೆ ಮುಂಗಾರು ಬೇಗನೆ ಆರಂಭವಾಗುತ್ತಿದ್ದು, ಬಿಸಿಲಿನಿಂದ ಬಳಲುತ್ತಿರುವ ಜನರಿಗೆ ಮತ್ತು ಕೃಷಿಗೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಗುವ ನಿರೀಕ್ಷೆ ಇದೆ.

ಬೆಂಗಳೂರು (ಮೇ 11): ರಾಜ್ಯದ ಜನರು ಉರಿಯುವ ಬಿಸಿಲಿನಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ, ಹವಾಮಾನ ಇಲಾಖೆಯಿಂದ ಒಂದು ತಂಪಾದ ಸುದ್ದಿಯು ಬಂದಿದೆ. ಈ ಬಾರಿ ಮುಂಗಾರು 5 ದಿನ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂಬುದಾಗಿ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ,ಪ್ರತಿ ವರ್ಷ ಜೂನ್ 1ರಂದು ನೈರುತ್ಯ ಮಾರುತ (Southwest Monsoon) ಕೇರಳ ತೀರ ಪ್ರವೇಶಿಸುವುದಾಗಿತ್ತು. ಆದರೆ ಈ ಬಾರಿ ಅದು ಮೇ 27ರಂದೇ ಕೇರಳ ತೀರಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ 16 ವರ್ಷಗಳ ನಂತರ ಮೊದಲ ಬಾರಿಗೆ ಮುಂಗಾರು ಬೇಗ ಆರಂಭವಾಗುತ್ತಿದೆ. ಕೊನೆಯ ಬಾರಿ ಈ ರೀತಿಯ ಮುಂಗಾರು ಮಳೆಯ ಪ್ರವೇಶ 2009ರ ಮೇ 23ರಂದು ದಾಖಲಾಗಿತ್ತು. ಈ ವರ್ಷದ ಮುಂಗಾರು ಕೂಡ ಜೂನ್ ಆರಂಭದಲ್ಲಿಯೇ ಕರ್ನಾಟಕ ಹಾಗೂ ಇತರೆ ದಕ್ಷಿಣ ರಾಜ್ಯಗಳಿಗೆ ಪ್ರವೇಶ ಮಾಡಬಹುದು ಎಂಬ ನಿರೀಕ್ಷೆಯಿದೆ.

ಈ ಮುಂಗಾರು ವೇಗವಾಗಿ ಹರಡಿದರೆ, ಕೃಷಿಕರು ಮತ್ತು ಸಾಮಾನ್ಯ ಜನತೆ ಬಹುಮಟ್ಟಿಗೆ ಬಿಸಿಲಿನಿಂದ ರಕ್ಷಣೆಯಾಗಬಹುದು. ದೀರ್ಘಾವಧಿಯ ಬಿಸಿಲು ಮತ್ತು ಉಷ್ಣತೆಯ ತೀವ್ರತೆಗೆ ಬಳಲಿರುವ ಜನತೆಗೆ ಇದು ನಿಜಕ್ಕೂ ತಂಪಾದ ಸುದ್ದಿಯಾಗಿದೆ. ರಾಜ್ಯದ ರೈತರಿಗೆ ಕೃಷಿ ಕಾರ್ಯಗಳನ್ನು ಮಾಡುವುದಕ್ಕೆ ಅನುಕೂಲ ಆಗಲಿದೆ. ಶೀಘ್ರವಾಗಿ ಬಿತ್ತನೆ ಕಾರ್ಯಗಳನ್ನು ಕೂಡ ಆರಂಭಿಸಬಹುದು. ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ರೈತರಿಗೆ ಒದಗಿಸಬಹುದಾದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ಸಂಗ್ರಹಣೆ ಮಾಡಿಕೊಳ್ಳುತ್ತಿದ್ದು, ಸಮರ್ಪಕ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಹವಾಮಾನ ಇಲಾಖೆ ಸೂಚನೆಯಂತೆ:

ಮೇ 27: ಕೇರಳ ತೀರ ಪ್ರವೇಶ ಸಾಧ್ಯತೆ
ಜೂನ್ ಮೊದಲ ವಾರ: ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಡೆಗೆ ಮುಂಗಾರು ಸಾಗಣೆ
ನಂತರ ಮಧ್ಯ ಮತ್ತು ಉತ್ತರ ಕರ್ನಾಟಕದತ್ತ ಚಲನೆ

ಕೃಷಿ ಜೊತೆಗೆ ಕುಡಿಯುವ ನೀರಿಗೂ ಅನುಕೂಲ:
ಈ ವರ್ಷ ಮುಂಗಾರು ಮೊದಲೇ ಆರಂಭವಾದರೆ, ಕೃಷಿ ಚಟುವಟಿಕೆಗಳ ಆರಂಭವಾಗಲಿದ್ದು, ಉತ್ತಮ ಬೆಳೆಯ ನಿರೀಕ್ಷೆಯನ್ನು ಮಾಡಬಹುದು. ಈ ಬೆಳೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಸುಗಮವಾಗಲಿದೆ ಎಂಬ ನಂಬಿಕೆ ಇದೆ. ಇನ್ನು ಕಳೆದ ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಆವರಿಸಿದ್ದ ಬರಗಾಲದಿಂದ ಕಾವೇರಿ ನದಿಯ ಒಡಲು ಬರಿದಾಗಿದ್ದರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿತ್ತು. ಜೊತೆಗೆ, ಕಾವೇರಿ ಕೊಳ್ಳದ ಮತ್ತು ಕಾವೇರಿ ನದಿ ನೀರು ಆಶ್ರಯಿಸಿದ ಪ್ರದೇಶಗಳಲ್ಲಿ ಬೆಳೆಗಳಿಗೆ ನೀರಿಲ್ಲದೇ ಒಣಗಿ ಹೋಗಿದ್ದವು. ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮುಂಗಾರು ಮಳೆ ಬೇಗನೇ ಆರಂಭವಾಗಿ ಉತ್ತಮವಾಗಿ ಮಳೆಯಾದಲ್ಲಿ ರೈತರು ಮತ್ತು ನಾಡಿನ ಜನತೆಗೆ ಶುಭ ಸುದ್ದಿಯಾಗಲಿದೆ.

ಆಂಧ್ರಪ್ರದೇಶದಲ್ಲಿ ಮಳೆ: 
ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂದಿನ ಮೂರು ದಿನಗಳವರೆಗೆ ತೆಲುಗು ರಾಜ್ಯಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಗೆ ಹವಾಮಾನ ಅನುಕೂಲಕರವಾಗಿದೆ ಎಂದು ತಿಳಿದುಬಂದಿದೆ. ಈ ವರ್ಷ ಮೇ 27 ರಂದು ನೈಋತ್ಯ ಮಾನ್ಸೂನ್ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಐಎಂಡಿ ಘೋಷಿಸಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ವಾಡಿಕೆಗಿಂತ ಶೇ.105 ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ, ಅಂಡಮಾನ್ ಸಮುದ್ರದ ಮೇಲೆ ಮತ್ತು ಕೇರಳದ ಬಳಿ ದೊಡ್ಡ ಮೋಡದ ಹೊದಿಕೆ ಗೋಚರಿಸುತ್ತಿದೆ. ಇದು ಮಾನ್ಸೂನ್ ಬೇಗ ಆರಂಭವಾಗಲು ಸಹಾಯ ಮಾಡುತ್ತದೆ.