ಸಾಲ ಮನ್ನಾಕ್ಕೆ ಸಿಎಂಗೆ ರೈತರ ಬೇಡಿಕೆ: ದೇಶದಲ್ಲೇ ಮಾದರಿಯಾಗುವಂತೆ ಕೃಷಿಕರಿಗೆ ಯೋಜನೆ ತನ್ನಿ!
ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗುಂತಹ ಕಾರ್ಯಕ್ರಮಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಬೆಂಗಳೂರು (ಫೆ.12): ‘ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ಒದಗಿಸಬೇಕು. ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ 5 ಲಕ್ಷ ರು. ಪ್ರೋತ್ಸಾಹಧನ ನೀಡುವುದು ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗುಂತಹ ಕಾರ್ಯಕ್ರಮಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಬಜೆಟ್ ಸಿದ್ದತೆ ಪೂರ್ವಭಾವಿಯಾಗಿ ವಿಧಾನಸೌಧದಲ್ಲಿ ರೈತ ಸಂಘಟನೆಗಳ ಮುಖಂಡರ ಜೊತೆ ನಡೆಸಿದ ಸಭೆಯಲ್ಲಿ ಬಿಜೆಪಿ ಸರ್ಕಾರ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು.
ಹೊಸ ವಿದ್ಯುತ್ ಸಂಪರ್ಕ ಪಡೆಯುವ ರೈತರ ಪಂಪ್‌ಸೆಟ್‌ಗಳಿಗೆ ತಗಲುವ ಎಲ್ಲ ವೆಚ್ಚವನ್ನು ಸರ್ಕಾರವೇ ಬರಿಸಬೇಕು ಎಂದು ಆಗ್ರಹಿಸಿದರು. ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ, ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು. ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು. ಸಣ್ಣ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಬೇಕು. ಬಿಜೆಪಿ ಸರ್ಕಾರ ತಂದಿರುವ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಎಲ್ಲ ರೈತರ ಪಂಪ್‌ಸೆಟ್‌ಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ರೈತರಿಗೂ 10 ಎಚ್‌ಪಿ ಪಂಪ್‌ಸೆಟ್ ವರೆಗೆ ಉಚಿತ ವಿದ್ಯುತ್ ನೀಡಬೇಕು ಒತ್ತಾಯಿಸಿದರು.
ಉಡುಪಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಡಿಕೆ: ಮಾಹಿತಿ ಇಲ್ಲ ಎಂದ ಸಚಿವ ಗುಂಡೂರಾವ್
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಕೃಷಿ ಕ್ಷೇತ್ರ ಇಂದು ದಿಕ್ಕು ತಪ್ಪಿದೆ. ವ್ಯವಸಾಯವನ್ನು ಉಳಿಸಲು ಬಜೆಟ್‌ನಲ್ಲಿ ಹೆಚ್ಚಿನ ಒತ್ತು ಕೊಡಬೇಕು. ರೈತರ ಪರ ಬಜೆಟ್ ನೀಡಬೇಕು. ಬರಕ್ಕೆ ಶಾಶ್ವತವಾಗಿ ಪರಿಹಾರ ಸಿಗಬೇಕಾದರೆ ಸಣ್ಣ ನೀರಾವರಿಗೆ ಒತ್ತು ಕೊಡಬೇಕು. ಇದಕ್ಕಾಗಿ 10 ವರ್ಷದ ಕಾರ್ಯಯೋಜನೆಯನ್ನು ಘೋಷಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಧನಕ್ಕೆ ಬೇಡಿಕೆ: ಕೃಷಿ ಅವಲಂಬಿಸಿರುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ.ಹೀಗಾಗಿ ರೈತ ಯುವಕರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಐದು ಲಕ್ಷ ರು. ಪ್ರೋತ್ಸಾಹ ಧನ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಸಭೆಯಲ್ಲಿ ಪಶುಸಂಗೋಪನೆ ಸಚಿವ ವೆಂಕಟೇಶ್, ಮುಖ್ಯಮಂತ್ರಿಗಳ ಸಲಹೆಗಾರ ಬಿ. ಆರ್ ಪಾಟೀಲ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್, ರೈತ ಮುಖಂಡರಾದ ಎಚ್.ಆರ್ ಬಸವರಾಜಪ್ಪ, ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರಾದ ಸುನಂದಾ ಜಯರಾಂ ಸೇರಿ ವಿವಿಧ ರೈತ ಸಂಘಟನೆಗಳ 218 ಮಂದಿ ಮುಖಂಡರು ಇದ್ದರು.
ಅಯೋಧ್ಯೆ, ಕಾಶಿ, ಮಥುರಾ ದೇಶದ ಬಹುಸಂಖ್ಯಾತರ ಅಸ್ಮಿತೆ: ಕೇಂದ್ರ ಸಚಿವ ನಾರಾಯಣಸ್ವಾಮಿ
ಗ್ಯಾರಂಟಿಗಳ ಜಾರಿ ಬಗ್ಗೆ ಮೆಚ್ಚುಗೆ: ಸಭೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಗೆ ರೈತ ಮುಖಂಡರು, ರೈತ ಪ್ರತಿನಿಧಿಗಳು ಅಪಾರ ಮೆಚ್ಚುಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು. ಗ್ಯಾರಂಟಿ ಯೋಜನೆಗಳು ರೈತ ಮಹಿಳೆಯರ ಮತ್ತು ರೈತ ಕುಟುಂಬಗಳ ಆರ್ಥಿಕ ಶಕ್ತಿ-ಚೈತನ್ಯವನ್ನು ಹೆಚ್ಚಿಸಿವೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸಿದ್ದೀರಿ. ಇಡೀ ರಾಜ್ಯದ ಜನರಿಗೆ ಇದರ ಅನುಕೂಲವಾಗುತ್ತಿದೆ. ಕೆಲ ಟೀಕೆಗಳು ಬರುತ್ತಿವೆ. ಇದಕ್ಕೆ ಅಂಜುವ ಅಗತ್ಯವಿಲ್ಲ ಎಂದು ರೈತ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.