ಬೆಂಗಳೂರು[ಅ.10]: ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಜೆಡಿಎಸ್‌ ಪಕ್ಷ ಗುರುವಾರ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಕೋರಿದ್ದಾರೆ.

ನೆರೆಸಂತ್ರಸ್ತರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಜೆಡಿಎಸ್‌ ಹಾಗೂ ರೈತ ಸಂಘ ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಕಡೆಗೆ ಸಾಗುವ ಶೇಷಾದ್ರಿ ಹಾಗೂ ಅರಮನೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಜನರು ಬೇರೆ ಮಾರ್ಗಗಳ ಮೂಲಕ ಸಂಚರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

‘6 ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ ಪತನದ ಭವಿಷ್ಯ’

ಜೆಡಿಎಸ್‌ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾರಥ್ಯದಲ್ಲಿ ಪಕ್ಷದ ಶಾಸಕರು ಸೇರಿದಂತೆ ಸುಮಾರು ಐದು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ಆನಂದ ರಾವ್‌ ವೃತ್ತದಲ್ಲಿ ರಾರ‍ಯಲಿ ಹೊರಟು ಶೇಷಾದ್ರಿ ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಲಿದೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಹಣ ಬಿಡುಗಡೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸಿವೆ ಎಂದು ಆರೋಪಿಸಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ರೈತ ಸಂಘ ಪ್ರತಿಭಟನಾ ಜಾಥ ಆಯೋಜಿಸಿದೆ. ಬೆಳಗ್ಗೆ 11ಕ್ಕೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಐದು ಸಾವಿರ ರೈತರು ಮೆರವಣಿಗೆಯಲ್ಲಿ ಹೊರಟು ಆನಂದರಾವ್‌ ವೃತ್ತದ ಮೇಲ್ಸೆತುವೆ ಮಾರ್ಗವಾಗಿ ಫ್ರೀಡಂ ಪಾರ್ಕ್ಗೆ ಬರಲಿದ್ದಾರೆ. ಈ ಎರಡು ಜಾಥಾಗಳ ಕಾರಣ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಲಿದೆ.

ಈ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಫ್ರೀಡಂ ಪಾರ್ಕ್ ಸುತ್ತಲ ಪ್ರದೇಶದಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ

ವಿಧಾನ ಮಂಡಲದ ಅಧಿವೇಶನದಲ್ಲಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧ ಸುತ್ತಮುತ್ತ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಆಯುಕ್ತ ಭಾಸ್ಕರ್‌ ರಾವ್‌ ಆದೇಶಿಸಿದ್ದಾರೆ.

ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು, ಸಚಿವರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ. ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿ ಉಂಟಾಗದಂತೆ ಗುರುವಾರ ಬೆಳಗ್ಗೆಯಿಂದ ಶನಿವಾರ ಸಂಜೆವರೆಗೆ ಮುನ್ನೆಚ್ಚರಿಕೆಯಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

'ಕುಮಾರಸ್ವಾಮಿ ಆಲೂಗೆಡ್ಡೆಯಿಂದ ಶ್ರೀಮಂತರಾದವರು'

ಅದರಂತೆ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮಾರಕಾಸ್ತ್ರಗಳ ಸಾಗಾಟ, ಪ್ರತಿಭಟನೆ, ಧರಣಿ ಹಾಗೂ ರಾರ‍ಯಲಿಗಳನ್ನು ನಿರ್ಬಂಧಿಸಲಾಗಿದೆ. ಕಾನೂನು ಉಲ್ಲಂಘಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.