ಕಡುಬಡತನದಲ್ಲೂ ಎಸ್.ಎಸ್.ಎಲ್.ಸಿ.ಯಲ್ಲಿ 585 ಅಂಕ ಗಳಿಸಿ ಕಳಸ ತಾಲೂಕಿಗೆ ಪ್ರಥಮ ಬಂದ ಸಿಂಚನಾಳ ಸಾಧನೆ. ಟಾರ್ಪಲ್ ಶೆಡ್‌ನಲ್ಲಿ ವಾಸಿಸುತ್ತಾ, ತಾಯಿಯ ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿರುವ ಈಕೆಗೆ ಸೂಕ್ತ ವಸತಿಯಿಲ್ಲದೆ ಪರದಾಡುತ್ತಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಜೂ.26) : ಆ ವಿದ್ಯಾರ್ಥಿನಿ ತಾಲೂಕಿಗೆ ಟಾಪರ್ ,ಟಾರ್ಪಲ್ ಸುತ್ತಿರೋ ಶೆಡ್ ನಲ್ಲಿ ಮಳೆ ಬಂದ್ರೆ ನೀರೆಲ್ಲಾ ಒಳಗೆ , ಇರೋದು ಒಂದೇ ಒಂದು ಜೊತೆ ಯೂನಿಫಾರಂ. ಮೂರೇ ಮೂರು ಜೊತೆ ಬಟ್ಟೆ. ಇರೋಕೆ ಸೂರಿಲ್ಲ. ಟಾರ್ಪಲ್ ಸುತ್ತಿರೋ ಶೆಡ್ ನಲ್ಲಿ ಮಳೆ ಬಂದ್ರೆ ನೀರೆಲ್ಲಾ ಒಳಗೆನೇ. ಮಲಗೋದಲ್ಲ. ಕೂರೋಕು ಕಷ್ಟ. ಅಮ್ಮ ಉಸಿರು ಕಟ್ಟಿ ದುಡಿದ್ರೆ ಮಗಳ ಹೊಟ್ಟೆ ತುಂಬೋದು. ಅಪ್ಪನೂ ಇಲ್ಲ. ಆದರೆ, ಹೊಟ್ಟೆ-ಬಟ್ಟೆ ಕಟ್ಟಿ ಸಾಕಿದ ಅಮ್ಮನ ಹೋರಾಟದ ಬದುಕು ವ್ಯರ್ಥವಾಗಲು ಬಿಡಲಿಲ್ಲ ಮಗಳು.

ಸೋರುವ ಮನೆಯಲ್ಲೇ ಓದಿ ಟಾಪರ್ ಆಗಿರುವ ವಿದ್ಯಾರ್ಥಿನಿ ;

ಕಡುಬಡತನದ ನಡುವೆಯೂ ಉತ್ತಮವಾಗಿ ಓದಿದ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ.ಯಲ್ಲಿ 625ಕ್ಕೆ 585 ಅಂಕ ಪಡೆದು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿಗೆ ಪ್ರಥಮವಾಗಿ ಅಮ್ಮನ ಬೆವರಿನ ಋಣ ತೀರಿಸಿದ್ದಾಳೆ. ಕಳಸ ತಾಲೂಕಿನ ಬಾಳಗಲ್ ಸಮೀಪದ ಕಾಡಂಚಿನ ಕುಗ್ರಾಮ ಹುಲ್ಲೂರು ಕೋರಿ ಗ್ರಾಮದ ಸಿಂಚನಾ ಎಸ್.ಎಸ್.ಎಲ್.ಸಿ.ಯಲ್ಲಿ ತಾಲೂಕಿಗೆ ಪ್ರಥಮ ಬಂದು ಬೆಂಕಿಯಲ್ಲಿ ಅರಳಿದ ಹೂವಾಗಿದ್ದಾಳೆ. ಇದೀಗ, ಕಾರ್ಕಳದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರಿದ್ದಾಳೆ. ಆದರೆ, ಕಾರ್ಕಳದಲ್ಲಿ ಹಾಸ್ಟೆಲ್ ಕೂಡ ಸಿಕ್ಕಿಲ್ಲ. ನಿತ್ಯ ಓಡಾಡಲು ಕಷ್ಟವಾಗಿ ಪಿಜಿಯಲ್ಲಿ ಉಳಿದಿದ್ದಾಳೆ. ದಾನಿಗಳ ಸಹಾಯಕ್ಕಾಗಿ ದಾರಿ ಕಾಯ್ತಿದೆ ಈ ಬಡಕುಟುಂಬ.

ಹಾಸ್ಟೆಲ್ ಕೂಡ ಸಿಕ್ಕಿಲ್ಲ, ಪಿಜಿಯಲ್ಲಿ‌ ಉಳಿದಿರುವ ವಿದ್ಯಾರ್ಥಿನಿ

ಈಕೆಗೆ ತಂದೆ ಕೂಡ ಇಲ್ಲ. ಇರೋದು ಅಮ್ಮ ಒಬ್ಬಳೇ. ಆಕೆಯೇ ಅಪ್ಪ-ಅಮ್ಮ. ಬದುಕಿನ ಬಂಡಿಯ ನೊಗ ಹೊತ್ತಿರೋ ಅಮ್ಮನೇ ಈಕೆಯ ಬೆನ್ನೆಲುಬು. ಆಕೆ ನಿತ್ಯ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡಿದ್ರೆನೆ ರಾತ್ರಿ ಈಕೆಯ ಹೊಟ್ಟೆ ತುಂಬೋದು. ಇಡೀ ದಿನ ಬೆವರು ಹರಿಸಿ ಮಗಳು, ಕುಟುಂಬಕ್ಕೆ ಶಕ್ತಿಯಾಗಿರೋ ತಾಯಿ ರಾತ್ರಿ ನೆಮ್ಮದಿಯಾಗಿ ಮಲಗೋಕು ಆಗುತ್ತಿಲ್ಲ. ಕಾರಣ, ಇರೋಕೆ ಒಂದು ಸೂಕ್ತ ಸೂರಿಲ್ಲ. ಪ್ಲಾಸ್ಟಿಕ್ ಶೀಟ್ ಈ ಕುಟುಂಬದ ಬಿಲ್ಡಿಂಗ್. ಮಳೆ ಬಂದರೆ ಮಳೆರಾಯ ಕೂಡ ಇವರನ್ನ ತಬ್ಬುತ್ತಾನೆ. ವಾಯುದೇವನ ಅಬ್ಬರ ಜೋರಾದ್ರೆ ಎಲ್ಲಿ ಇರೋದಂದು ಸೂರು ಹಾರಿ ಹೋಗುತ್ತೋ ಅಂತ ಅಮ್ಮ-ಮಗಳ ಆತಂಕ ಹೆಚ್ಚುತ್ತೆ.ಈ ಕುಟುಂಬದ ಇನ್ನೊಂದು ಆತಂಕಕಾರಿ ವಿಷಯ ಅಂದ್ರೆ, ಇವ್ರಿಗೆ ಸೂರಿಲ್ಲ. ಕರೆಂಟ್ ಇಲ್ಲ. ರೇಷನ್ ಕಾರ್ಡ್ ಕೂಡ ಇಲ್ಲ. ವೋಟರ್ ಐಡಿ ಮಾತ್ರ ಕೊಟ್ಟಿದ್ದಾರೆ. ಆಧಾರ್ ಕಾರ್ಡ್ ಕೂಡ ಇದೆ. ಪಂಚಾಯಿತಿಗೆ ಮನೆಗಾಗಿ ಅರ್ಜಿ ಹಾಕಿದ್ದಾರೆ. ಆದರೆ, ಇನ್ನೂ ಮನೆ ಸಿಕ್ಕಿಲ್ಲ.

ಇಂದು ನಿನ್ನೆಯದಲ್ಲ ಇವರ ಬದುಕು ಕಳೆದ ಎರಡು ದಶಕಗಳಿಂದ ಈಗೇ ಇರೋದು. ಇವರ ಕಷ್ಟಕ್ಕೆ ಯಾವ ಸರ್ಕಾರಗಳು, ಜನಪ್ರತಿನಿಧಿಗಳು ನೆರವಿಗೆ ಬಂದಿಲ್ಲ. ಈಕೆಯ ಅಪ್ಪ ಇದ್ದಾಗ ಬದುಕು ಒಂದಷ್ಟು ಉತ್ತಮವಾಗಿತ್ತು. ಅಪ್ಪ ತೀರಿಕೊಂಡ ಬಳಿಕ ಇವರ ಮತ್ತಷ್ಟು ಬರಡಾಗಿದೆ. ಅತ್ತ ಸರ್ಕಾರದಿಂದಲೂ ಯಾವ ಸೌಲಭ್ಯವಿಲ್ಲ. ಇತ್ತ ಸಹಾಯಕ್ಕೆ ಅಂತ ಸ್ನೇಹಿತರೂ, ಸಂಬಂಧಿಕರೂ ಯಾರೂ ಇಲ್ಲ. ಹಾಗಾಗಿ, ಈ ಕುಟುಂಬ ಕಷ್ಟದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದು ಸರ್ಕಾರ ಅಥವ ದಾನಿಗಳ ನೆರವಿನ ದಾರಿ ಕಾಯ್ತಿದ್ದಾರೆ.