ಇನ್ಫೋಸಿಸ್ ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ, ಹೊಸ ಮೊಬೈಲ್‌ ಅಪ್ಲಿಕೇಷನ್‌ನ ಪ್ರಚಾರ ರಾಯಭಾರಿಯಾಗುವಂತೆ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ ದೇವರಕೊಂಡಗೆ ಪತ್ರ ಬರೆಯಲಾಗಿದೆ. 

ಬೆಂಗಳೂರು : ಇಸ್ಫೋಸಿಸ್‌ ಫೌಂಡೇಶನ್‌ನ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್‌ ಸೃಷ್ಟಿಸಿ, ಹೊಸ ಮೊಬೈಲ್‌ ಅಪ್ಲಿಕೇಷನ್‌ನ ಪ್ರಚಾರ ರಾಯಭಾರಿಯಾಗುವಂತೆ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ ದೇವರಕೊಂಡ ಅವರಿಗೆ ಪತ್ರ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಇಸ್ಫೋಸಿಸ್‌ ಫೌಂಡೇಶ್‌ನಲ್ಲಿ ಕೆಲಸ ನಿರ್ವಹಿಸುವ ನಿವೃತ್ತ ಸೇನಾಧಿಕಾರಿ ಎಂ.ರಮೇಶ್‌ ಎಂಬುವವರು ಕೃಷ್ಣ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸುಧಾಮೂರ್ತಿ ಅವರ ಹೆಸರಿನಲ್ಲಿ ಕೃಷ್ಣ ನಕಲಿ ಲೆಟರ್‌ಹೆಡ್‌ ಸೃಷ್ಟಿಸಿದ್ದ. ಬಳಿಕ ಸುಧಾಮೂರ್ತಿ ಅವರ ಸಹಿಯನ್ನು ನಕಲು ಮಾಡಿ ಅದನ್ನು ತೆಲುಗು ನಟ ವಿಜಯ್‌ ದೇವರಕೊಂಡ ಅವರ ಹೈದರಾಬಾದ್‌ ವಿಳಾಸಕ್ಕೆ ಕಳುಹಿಸಿದ್ದಾನೆ. ಈ ನಕಲಿ ಲೆಟರ್‌ಹೆಡ್‌ನಲ್ಲಿ ಸುಧಾಮೂರ್ತಿ ಅವರ ಪ್ರಾಯೋಜಕತ್ವದಲ್ಲಿ ‘ಆಫರ್ಸ್‌ ನಿಯರ್‌ ಬೈ’ ಎಂಬ ಮೊಬೈಲ್‌ ಅಪ್ಲಿಕೇಷನ್‌ ನಿರ್ಮಿಸಿರುವುದಾಗಿ ಸುಳ್ಳು ವಿವರವನ್ನು ಆರೋಪಿ ನೀಡಿದ್ದ. ಜತೆಗೆ, ರಾಯಭಾರಿ ಆಗುವಂತೆ ಚಿತ್ರನಟನನ್ನು ಕೋರಿ ಸ್ಪೀಡ್‌ ಪೋಸ್ಟ್‌ ಮಾಡಿದ್ದ.

ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ನಟ ವಿಜಯ ದೇವರಕೊಂಡ ಅವರ ಕಚೇರಿ ಸಿಬ್ಬಂದಿ ಪೋಸ್ಟ್‌ ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಪತ್ರ ನೇರವಾಗಿ ಇಸ್ಫೋಸಿಸ್‌ ಫೌಂಡೇಶನ್‌ ಕಚೇರಿಗೆ ವಾಪಸ್‌ ಬಂದಿದೆ. ಇದರಿಂದ ಅಚ್ಚರಿಗೊಂಡ ಕಚೇರಿ ಸಿಬ್ಬಂದಿ ಕೂಡಲೇ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.