ವೆಂಕಟೇಶ ಕಲಿಪಿ

ಬೆಂಗಳೂರು(ಜು.27): ವೈವಾಹಿಕ ವ್ಯಾಜ್ಯಗಳಲ್ಲಿ ಅಪರಾಧ ಎಸಗದಿದ್ದರೂ ಹಾಗೂ ನಿರ್ದಿಷ್ಟಆರೋಪಗಳು ಇಲ್ಲದಿದ್ದರೂ ಕೇವಲ ಕಿರುಕುಳ ನೀಡುವ ದುರುದ್ದೇಶದಿಂದ ಪತಿ ಮತ್ತು ಆತನ ಸಂಬಂಧಿಕರ ವಿರುದ್ಧ ಪತ್ನಿ ಸುಳ್ಳು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದ ಸಂದರ್ಭದಲ್ಲಿ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಅತ್ಯಂತ ಎಚ್ಚರದಿಂದ ಈ ವಿಷಯವನ್ನು ಪರಿಗಣನೆಗೆ (ಕಾಗ್ನಿಜೆನ್ಸ್‌) ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ಅಸ್ಮಾ ಖಾನುಂ, ತಂದೆ ಜಫ್ರುಲ್ಲಾ, ಸಹೋದರ ಮಹಮ್ಮದ್‌ ಸಲ್ಮಾನ್‌ ಮತ್ತು ಅಸ್ಮಾ ಪತಿ ಫಿರೋಜ್‌ ಪಾಷಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು.

ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ಮತ್ತು ದೋಷಾರೋಪ ಪಟ್ಟಿ, ಸಾಕ್ಷಿಗಳ ಹೇಳಿಕೆ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಪೀಠ, ‘ಪ್ರಕರಣದ ದೂರುದಾರಳಾದ ಫರ್ಹತ್‌ಉನ್ನೀಸಾ ತನ್ನ ದೂರಿನಲ್ಲಿ ಪತಿಯ ಸಂಬಂಧಿಕರಾದ ಅರ್ಜಿದಾರರ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸಾಕ್ಷ್ಯಾಧಾರ ಇಲ್ಲ. ಕೇವಲ ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡಿ ಕ್ರಿಮಿನಲ್‌ ಕೇಸಿನಲ್ಲಿ ಪತಿಯ ಸಂಬಂಧಿಕರನ್ನು ಸಿಲುಕಿಸಲಾಗಿದೆ’ ಎಂದು ಅಭಿಪ್ರಾಯಪಟ್ಟಿತು.

‘ವೈವಾಹಿಕ ವ್ಯಾಜ್ಯಗಳಲ್ಲಿ, ಕಾಗ್ನಿಜೆನ್ಸ್‌ ತೆಗೆದುಕೊಳ್ಳುವಾಗ (ದೂರುದಾರರು ಸ್ವಯಂಕೃತ ಹೇಳಿಕೆ ದಾಖಲಿಸಿಕೊಳ್ಳುವಾಗ) ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ಯಾವುದೇ ನಿರ್ದಿಷ್ಟಅಪರಾಧ ಕೃತ್ಯ ಎಸಗದಿದ್ದರೂ ಹಾಗೂ ಆರೋಪಗಳು ಇಲ್ಲದಿದ್ದಾಗ ಪತಿ ಮತ್ತವರ ಸಂಬಂಧಿಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಕಿರುಕುಳ ನೀಡುವ ಪ್ರಯತ್ನ ಮಾಡಿದ ಸಂದರ್ಭದಲ್ಲಿ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಜಾಗರೂಕತೆಯಿಂದ ಇರಬೇಕು’ ಎಂದು ಆದೇಶಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ನಗರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಬಾಕಿಯಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಿತು.

ಪ್ರಕರಣವೇನು?:

ಫರ್ಹತ್‌ಉನ್ನೀಸಾ ಎಂಬಾಕೆ ತನ್ನ ಪತಿಯಾದ ಮಹಮ್ಮದ್‌ ಜಹೀರ್‌, ಆತನ ಸಹೋದರಿ ಅಸ್ಮಾ ಖಾನ್‌, ತಂದೆ ಜಫ್ರುಲ್ಲಾ, ಸಹೋದರ ಮಹಮ್ಮದ್‌ ಸಲ್ಮಾನ್‌ ಮತ್ತು ಅಸ್ಮಾಖಾನುಂ ಪತಿ ಫಿರೋಜ್‌ ಪಾಷಾ ವಿರುದ್ಧ ಕೌಟುಂಬಿಕ ದೌರ್ಜನ್ಯ, ಜೀವ ಬೆದರಿಕೆ, ಮಾರಾಕಾಸ್ತ್ರಗಳಿಂದ ಹಲ್ಲೆ ಮತ್ತು ವರದಕ್ಷಿಣೆ ಕಿರುಕುಳ ಆರೋಪಗಳಡಿ ನಗರದ ಗಂಗಮ್ಮ ಗುಡಿ ಠಾಣೆಗೆ 2015ರ ಸೆ.21ರಂದು ದೂರು ನೀಡಿದ್ದರು. ನಗರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಪತ್ನಿಯ ದೂರಿನ ಸಾರಾಂಶವೇನು?

‘ಮಹಮ್ಮದ್‌ ಜಹೀರ್‌ ಜೊತೆಗೆ ನಾನು 2012ರ ಜುಲೈ 1ರಂದು ಮದುವೆಯಾಗಿದ್ದೇನೆ. ವಿವಾಹ ವೇಳೆ ಗಂಡನಿಗೆ ನನ್ನ ಸಹೋದರರು ವರದಕ್ಷಿಣೆ ಹಣ ನೀಡಿದ್ದರು. ನಂತರ ಪತಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡು ಕಿರುಕುಳ ನೀಡತೊಡಗಿದರು. ಅದಕ್ಕೆ ಪತಿಯ ತಾಯಿ ಪ್ರಚೋದನೆ ಕೊಡುತ್ತಿದ್ದರು. ಇದೇ ವಿಚಾರದಲ್ಲಿ ಮಸೀದಿಯಲ್ಲಿ ಗುರು-ಹಿರಿಯರೊಂದಿಗೆ ಸಭೆ ನಡೆಸಿ, ನನಗೆ ಕಿರುಕುಳ ನೀಡದಂತೆ ಸಲಹೆ ಮಾಡಿದರು. ಇದರ ನಂತರ ನನ್ನ ಪೋಷಕರ ಕೋರಿಕೆ ಮೇರೆಗೆ ಜಾಲಹಳ್ಳಿಯಲ್ಲಿ ಪ್ರತ್ಯೇಕ ಮನೆ ಮಾಡಿ ವಾಸ ಮಾಡತೊಡಗಿದೆವು. ಆದರೆ ಪ್ರತ್ಯೇಕ ವಾಸದ ನಂತರವೂ ಪತಿ ಮತ್ತು ಆತನ ಸಂಬಂಧಿಕರು ವರದಕ್ಷಿಣೆಗಾಗಿ ಕಿರುಕುಳ ನೀಡತೊಡಗಿದರು. ಗರ್ಭಿಣಿಯಾದಾಗಲೂ ಪತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು. ಪೊಲೀಸರಿಗೆ ಕರೆ ಮಾಡಿದಾಗ ಅಂದು ಆಸ್ಪತ್ರೆಗೆ ಸೇರಿಸಿದರೇ ಹೊರತು ಪ್ರಕರಣ ದಾಖಲಿಸಲಿಲ್ಲ. ಇದರಿಂದ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ ಮೇಲೆ ಅದನ್ನು ಆಧರಿಸಿ ಗಂಗಮ್ಮ ಗುಡಿ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದರು’ ಎಂದು ಫರ್ಹತ್‌ಉನ್ನೀಸಾ ದೂರಿನಲ್ಲಿ ಆರೋಪಿಸಿದ್ದರು.