Asianet Suvarna News Asianet Suvarna News

ಸಂದರ್ಶನ: ಬಿಜೆಪಿ ತೊರೆದಿದ್ದರ ಬಗ್ಗೆ ಪಶ್ಚಾತ್ತಾಪವಿಲ್ಲ, ಕರೆಯದಿದ್ದರೆ ಕಾಂಗ್ರೆಸ್‌ನಲ್ಲೇ ಇರುತ್ತಿದ್ದೆ -ಜಗದೀಶ ಶೆಟ್ಟರ್

 ಕಳೆದ ವಾರ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಆಡಳಿತಾರೂಢ ಕಾಂಗ್ರೆಸ್ ತೊರೆದು ಪ್ರತಿಪಕ್ಷ ಸ್ಥಾನದಲ್ಲಿರುವ ತಮ್ಮ ತವರು ಮನೆ ಬಿಜೆಪಿಗೆ ವಾಪಸಾದರು. ಇದನ್ನು ಕಾಂಗ್ರೆಸ್‌ ಪಕ್ಷದ ನಾಯಕರು ನಿರೀಕ್ಷಿಸಿರಲಿಲ್ಲ. ವದಂತಿ ದಟ್ಟವಾಗುವ ಮೊದಲೇ ಶೆಟ್ಟರ್ ಬಿಜೆಪಿ ಸೇರಿಯಾಗಿತ್ತು.  ಈ ಬಗ್ಗೆ ಜಗದೀಶ ಶೆಟ್ಟರ್‌ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ಮಾತನಾಡಿದ್ದು ಹೀಗೆ...

Face to face interview with Karnataka Former CM Jagadish shettar at bengaluru rav
Author
First Published Feb 1, 2024, 6:06 AM IST

ವಿಜಯ್ ಮಲಗಿಹಾಳ

ಬೆಂಗಳೂರು (ಫೆ.1): ಕಳೆದ ವಾರ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಆಡಳಿತಾರೂಢ ಕಾಂಗ್ರೆಸ್ ತೊರೆದು ಪ್ರತಿಪಕ್ಷ ಸ್ಥಾನದಲ್ಲಿರುವ ತಮ್ಮ ತವರು ಮನೆ ಬಿಜೆಪಿಗೆ ವಾಪಸಾದರು. ಇದನ್ನು ಕಾಂಗ್ರೆಸ್‌ ಪಕ್ಷದ ನಾಯಕರು ನಿರೀಕ್ಷಿಸಿರಲಿಲ್ಲ. ವದಂತಿ ದಟ್ಟವಾಗುವ ಮೊದಲೇ ಶೆಟ್ಟರ್ ಬಿಜೆಪಿ ಸೇರಿಯಾಗಿತ್ತು. ಈ ಮೂಲಕ ತಮ್ಮ ಒಂಬತ್ತು ತಿಂಗಳ ಬಿಜೆಪಿ ವನವಾಸ ಅಂತ್ಯಗೊಳಿಸಿದರು. ಕಳೆದ ಚುನಾವಣೆಯ ಕೊನೆಯ ಕ್ಷಣದಲ್ಲಿ ಶೆಟ್ಟರ್‌ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಬೇಸರಗೊಂಡು ಕಾಂಗ್ರೆಸ್ ಸೇರಿದ್ದರು. ಇದರ ಪರಿಣಾಮ ಬಿಜೆಪಿಗೂ ತಟ್ಟಿತು. ಹೀಗಾಗಿಯೇ ಬಿಜೆಪಿ ನಾಯಕರು ಈಗ ಲೋಕಸಭಾ ಚುನಾವಣೆಗೂ ಮೊದಲೇ ಶೆಟ್ಟರ್ ಅವರನ್ನು ವಾಪಸ್ ಕರೆತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶೆಟ್ಟರ್‌ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ಮಾತನಾಡಿದ್ದು ಹೀಗೆ...

ಒಂಬತ್ತು ತಿಂಗಳ ಬಳಿಕ ತವರು ಮನೆಗೆ ವಾಪಸ್ ಬಂದಿದ್ದೀರಿ? ಹೇಗನ್ನಿಸುತ್ತಿದೆ?

-ಇದು 30-40 ವರ್ಷಗಳಿಂದ ಇದ್ದು ಕಟ್ಟಿ ಬೆಳೆಸಿದ ಮನೆ. ಜನಸಂಘ, ಬಳಿಕ ಬಿಜೆಪಿ ಸ್ಥಾಪನೆಯಾದ ಕಾಲದಿಂದಲೂ ನಮ್ಮ ಕುಟುಂಬ ಇದರಲ್ಲಿದೆ. ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಆ ಕೇಡರ್‌ನಿಂದ ಬೆಳೆದು ಬಂದ ವ್ಯಕ್ತಿ ನಾನು. ಹೀಗಾಗಿ, ಈಗ ಬಿಜೆಪಿಗೆ ವಾಪಸ್ ಬಂದಿದ್ದರಿಂದ ಅತ್ಯಂತ ಖುಷಿಯಲ್ಲಿ ಇದ್ದೇನೆ. ನನ್ನಷ್ಟೇ ಖುಷಿ ಬಿಜೆಪಿ ಕೇಡರ್‌ನಲ್ಲೂ ಕಂಡು ಬಂದಿದೆ. ಪಕ್ಷದ ಅಸಂಖ್ಯಾತ ಮುಖಂಡರು, ಕಾರ್ಯಕರ್ತರು ನಾನು ವಾಪಸ್ ಬಂದಿದ್ದರಿಂದ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಯುವಕರಿಗೆ ವಿಜಯೇಂದ್ರ, ಹಿರಿಯರಿಗೆ ನಾನು ಸ್ಫೂರ್ತಿ - ಆರ್ ಅಶೋಕ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದು ನಿಮಗೆ ಅಷ್ಟೊಂದು ನೋವು ಉಂಟುಮಾಡಿತೆ?

-ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಲು ಹೇಳಿದಾಗ ಆಗ ನನಗೆ ಚುನಾವಣಾ ರಾಜಕೀಯದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಜನಸೇವೆಯ ಉದ್ದೇಶ ಇಟ್ಟುಕೊಂಡು ಸ್ಪರ್ಧಿಸಿ ಗೆಲುವು ಸಾಧಿಸಿದೆ. ನಂತರ ಆರು ಬಾರಿ ಶಾಸಕನಾದೆ. ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದೆ. ಕೊನೆಯದಾಗಿ ಏಳನೇ ಬಾರಿ ಸ್ಪರ್ಧಿಸಿ ಸಕ್ರಿಯ ರಾಜಕೀಯದಿಂದ ದೂರ ಇರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆ. ನನಗೆ ಹಟವೇನೂ ಇರಲಿಲ್ಲ. ಆದರೆ, ಯಾವುದೇ ಮುನ್ಸೂಚನೆ ನೀಡದೆ, ನಿರ್ದಿಷ್ಟ ಕಾರಣಗಳನ್ನು ಕೊಡದೆ ಟಿಕೆಟ್ ನಿರಾಕರಿಸಲಾಯಿತು. ಈ ವಿಷಯದಲ್ಲಿ ಪಕ್ಷದ ಕೆಲವು ವ್ಯಕ್ತಿಗಳ ನಡವಳಿಕೆ ನನಗೆ ತುಂಬಾ ನೋವು ಕೊಟ್ಟಿತು. ಹೀಗಾಗಿ, ಪಕ್ಷದಿಂದ ಹೊರಗೆ ಬಂದೆ. ಆ ನೋವಿಗೆ ಮತ್ತೊಂದು ರಾಷ್ಟ್ರೀಯ ಪಕ್ಷದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರೂ ಬಿಜೆಪಿ ತೊರೆದಿದ್ದರ ಪರಿಣಾಮ ಫಲಿತಾಂಶದ ಮೇಲೆ ಉಂಟಾಯಿತು.

ಕಾಂಗ್ರೆಸ್‌ನಲ್ಲಿ ನೀವು ಆರಾಮವಾಗಿ ಇರಲಿಲ್ಲವೇ? ಆ ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಂದಿರಾ?

- ಅಲ್ಲಿ ನಾನು ಆರಾಮವಾಗಿ ಇರಲಿಲ್ಲ ಎಂದು ಹೇಳುವುದಿಲ್ಲ. ನನ್ನ ಹಿರಿತನಕ್ಕೆ ತಕ್ಕಂತೆ ಗೌರವ, ಸ್ಥಾನಮಾನ ಎಲ್ಲವನ್ನೂ ಕೊಟ್ಟಿದ್ದರು. ಬಿಜೆಪಿ ತೊರೆದ ಬಳಿಕ ನನಗೆ ಬೇಕಾಗಿದ್ದ ಒಂದು ರಾಜಕೀಯ ವೇದಿಕೆ ನೀಡಿದ್ದರು. ಆದರೆ, ಕಾಂಗ್ರೆಸ್‌ನಲ್ಲಿದ್ದ ವೇಳೆ ನಾನು ಎಲ್ಲೇ ಪ್ರವಾಸ ಕೈಗೊಂಡರೂ ಅಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಭೇಟಿ ಮಾಡಿ ಬಿಜೆಪಿಗೆ ವಾಪಸ್ ಬನ್ನಿ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಮುಂದೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಯಡಿಯೂರಪ್ಪ ಅವರು ನಿಮಗೆ ಸಿಗುವ ಗೌರವ ಸಿಕ್ಕೇ ಸಿಗುತ್ತದೆ. ವಾಪಸ್‌ ಬನ್ನಿ ಎಂಬ ಒತ್ತಾಯ ಮಾಡಿದರು. ಪಕ್ಷದ ಹಿರಿಯರಿಂದಲೂ ಸಂದೇಶ ಬಂದ ಬಳಿಕ ನನ್ನ ಮನಸ್ಥಿತಿ ಬದಲಾಯಿಸಿಕೊಂಡು ವಾಪಸ್ ಬರಲು ತೀರ್ಮಾನಿಸಿದೆ.

ಈಗ ವಾಪಸ್ ಬಂದ ಮೇಲೆ ನಿಮಗೆ ಅಂದು ಬಿಜೆಪಿ ತೊರೆಯಬಾರದಿತ್ತು ಎಂಬ ಪಶ್ಚಾತ್ತಾಪ ಉಂಟಾಗಿದೆಯೇ?

-ಬಹಳಷ್ಟು ನೋವಿನಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದೆ. ಅಲ್ಲಿದ್ದಷ್ಟು ಕಾಲ ಆ ಪಕ್ಷವನ್ನು ಬಲಪಡಿಸಲು ನನ್ನ ಕೈಲಾದ ಪ್ರಯತ್ನ ಮಾಡಿದೆ. ಹೀಗಾಗಿ, ಇಲ್ಲಿಂದ ಅಲ್ಲಿಗೆ ಹೋದಾಗ ಅಥವಾ ಅಲ್ಲಿಂದ ಇಲ್ಲಿಗೆ ವಾಪಸ್ ಬಂದಾಗ ಪಶ್ಚಾತ್ತಾಪ ಉಂಟಾಗಿಲ್ಲ.

ಒಂದು ವೇಳೆ ನಿಮಗೆ ಮಂತ್ರಿ ಸ್ಥಾನ ನೀಡಿದ್ದರೆ ಅಥವಾ ಬೇರೊಂದು ಪ್ರಮುಖ ಜವಾಬ್ದಾರಿ ಸ್ಥಾನ ನೀಡಿದ್ದರೆ ಕಾಂಗ್ರೆಸ್ ತೊರೆದು ಬರುವ ಮನಸ್ಸು ಮಾಡುತ್ತಿದ್ದಿರಾ?

- ಹಾಗೆ ಮಂತ್ರಿ ಸ್ಥಾನ ಅಥವಾ ಬೇರೊಂದು ಪ್ರಮುಖ ಜವಾಬ್ದಾರಿ ನೀಡಿದ್ದರೆ ಅದು ಅಂದಿನ ನಿರ್ಧಾರವಾಗಿ ಇರುತ್ತಿತ್ತೇ ಹೊರತು ಅದರ ಬಗ್ಗೆ ಈಗ ಹೇಳಲು ಆಗುವುದಿಲ್ಲ. ನಾನು ಕಾಂಗ್ರೆಸ್‌ ಸಂಘಟನೆಯಲ್ಲಿ ಬಹಳ ಆಳವಾಗಿ ಇಳಿದಿದ್ದರೆ ಹೊರಗೆ ಬರುತ್ತಿದ್ದೆನೊ ಅಥವಾ ಇಲ್ಲವೊ ಗೊತ್ತಿಲ್ಲ. ಅಂಥ ಸಂದರ್ಭ ಬರಲಿಲ್ಲ.

ಬಿಜೆಪಿಯಲ್ಲೇ ಹೆಚ್ಚೂ ಕಡಮೆ ನಾಲ್ಕು ದಶಕಗಳ ಕಾಲ ಇದ್ದ ನಿಮಗೆ ಕಾಂಗ್ರೆಸ್ಸಿನ ತತ್ವ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಯಿತೇ?

-ಜನಸಾಮಾನ್ಯರ ಕಲ್ಯಾಣಕ್ಕೆ ಶ್ರಮಿಸುವುದು ನನ್ನ ವೈಯಕ್ತಿಕ ಗುರಿ. ಇದಕ್ಕೆ ರಾಜಕೀಯ ಪಕ್ಷ ಒಂದು ವೇದಿಕೆ. ಕಾಂಗ್ರೆಸ್ಸಿನಲ್ಲಿ ಅವಕಾಶ ಕಡಮೆ ಆಗಿದ್ದರೂ ಗುರಿ ಸಾಧಿಸಲು ವೇದಿಕೆ ಇತ್ತು. ನಾನು ಬಸವಣ್ಣನ ತತ್ವಗಳ ಪಾಲನೆ ಮಾಡುವ ವ್ಯಕ್ತಿ. ಹೀಗಾಗಿ, ಕಾಂಗ್ರೆಸ್ಸಿನಲ್ಲಿಯೂ ನಾನು ನಾನಾಗಿಯೇ ಇದ್ದೆ.

ಒಟ್ಟಿನಲ್ಲಿ ಸುದೀರ್ಘ ಕಾಲ ಬಿಜೆಪಿಯಲ್ಲಿ ರಾಜ್ಯಭಾರ ಮಾಡಿದ್ದ ನಿಮಗೆ ಒಂಬತ್ತು ತಿಂಗಳ ವನವಾಸ ತಪ್ಪಲಿಲ್ಲ?

-ಇದನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಆದರೆ, ನಾನು ವನವಾಸ ಎಂದು ಹೇಳುವುದಿಲ್ಲ.

ನಿಮ್ಮನ್ನು ಬಿಜೆಪಿಗೆ ವಾಪಸ್ ಕರೆತರುವ ಪ್ರಯತ್ನ ಆರಂಭ‍ವಾಗಿದ್ದು ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕವೇ?

-ನಾನು ಕಾಂಗ್ರೆಸ್ ಸೇರಿ ಒಂದೆರಡು ತಿಂಗಳ ಬಳಿಕ ವಾಪಸ್ ಕರೆತರುವ ಪ್ರಯತ್ನ ಆರಂಭವಾಯಿತು. ಆದರೆ, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಅದಕ್ಕೆ ವೇಗ ದೊರಕಿತು. ಅನೇಕ ಮುಖಂಡರು ಪಕ್ಷದ ಸಭೆಗಳಲ್ಲಿ ನನ್ನ ಪರವಾಗಿ ವಾದ ಮಂಡಿಸಿದರು. ಹಿರಿಯ ನಾಯಕರಿಗೆ ಒತ್ತಾಯ ಮಾಡಿದರು.

ಸ್ವಂತ ಮನೆಗೆ ಅಥವಾ ಬಿಜೆಪಿಗೆ ವಾಪಸ್ ಬರಬೇಕು ಎಂಬ ನಿಟ್ಟಿನಲ್ಲಿ ನೀವಾಗಿಯೇ ಪ್ರಯತ್ನ ಮಾಡಲಿಲ್ಲವೇ?

-ಹೋದವರು ಹೋಗಲಿ ಬಿಡಿ ಎಂದು ಪಕ್ಷದ ಹಿರಿಯರು, ನಾಯಕರು ಸೇರಿದಂತೆ ಯಾರೂ ನನ್ನನ್ನು ಸಂಪರ್ಕಿಸದೇ ಇದ್ದಲ್ಲಿ ವಾಪಸ್ ಬರುತ್ತೇನೆ ಎಂದು ನಾನು ಯಾರ ಮನೆ ಬಾಗಿಲಿಗೂ ಹೋಗುತ್ತಿರಲಿಲ್ಲ. ಬಿಜೆಪಿ ಕಡೆಯಿಂದ ಪ್ರತಿಕ್ರಿಯೆ ಬಂದಿದ್ದರಿಂದ ನಾನು ಅದಕ್ಕೆ ಸ್ಪಂದಿಸಿದೆ.

ಹಾಗೊಂದು ವೇಳೆ ಬಿಜೆಪಿ ಪಾಳೆಯದಿಂದ ನಿಮಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರದೇ ಹೋಗಿದ್ದರೆ?

-ಗೌರವ ಪ್ರೀತಿಯಿಂದ ಕರೆದರೆ ಹೋಗಬೇಕು ಎಂಬುದು ಮನಸ್ಸಿನಲ್ಲಿತ್ತು. ಒಂದು ವೇಳೆ ಕರೆಯದೇ ಹೋಗಿದ್ದರೆ ನಾನು ಸುಮ್ಮನೆ ನನ್ನಷ್ಟಕ್ಕೆ ಕಾಂಗ್ರೆಸ್‌ನಲ್ಲಿ ಎಷ್ಟು ಸೇವೆ ಮಾಡಲು ಸಾಧ್ಯವೋ ಮಾಡಿಕೊಂಡು ಇರಲು ನಿರ್ಧರಿಸಿದ್ದೆ.

ನೀವು ಯಾವತ್ತೂ ಪಕ್ಷದ ಶಿಸ್ತಿನ ಗೆರೆ ದಾಟಿದವರಲ್ಲ. ದಿಢೀರ್ ಬೆಳವಣಿಗೆಯಲ್ಲಿ ಪಕ್ಷ ತೊರೆದು ಮತ್ತೆ ವಾಪಸ್ ಬಂದಿದ್ದೀರಿ? ಈ ಅನುಭವ ಹೇಗಿತ್ತು?

-ನಮ್ಮ ಜೀವನ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಇಂಥ ದಿನಗಳೂ ಬರುತ್ತವೆ ಎಂಬುದನ್ನು ನಾನು ಊಹಿಸಿರಲಿಲ್ಲ. ಅದೂ ಒಂದು ಅನುಭವ ಆಯಿತು. ಎಷ್ಟೋ ಸಮಸ್ಯೆಗಳು ಎದುರಾದಾಗಲೂ ನಾನು ಪಕ್ಷದಲ್ಲಿ ಶಿಸ್ತಿನ ಚೌಕಟ್ಟು ಮೀರಿ ಹೋಗಿರಲಿಲ್ಲ. ಪಕ್ಷಕ್ಕೆ ನಿಷ್ಠೆ ಹೊಂದಿದ್ದೆ. ನನ್ನಂಥವನಿಗೇ ಇಂಥ ಪರಿಸ್ಥಿತಿ ಬಂತಲ್ಲ ಎಂದು ಕಾಂಗ್ರೆಸ್‌ನಲ್ಲಿ ಇದ್ದಾಗ ಒಂದೆರಡು ಬಾರಿ ಅನಿಸಿತ್ತು.

ನೀವು ಬಿಜೆಪಿಗೆ ಬಂದಾಯಿತು. ನಿಮ್ಮ ವಿಷಯದಲ್ಲಿ ಮತ್ತೆ ಅಂಥ ತಪ್ಪು ಮರುಕಳಿಸುವುದಿಲ್ಲ ಎಂಬ ವಿಶ್ವಾಸವಿದೆಯೇ?

-ನೋಡಿ ಇದು ರಾಜಕಾರಣ. ಈಗಂತೂ ಪ್ರೀತಿ ವಿಶ್ವಾಸದಿಂದ ಕರೆದಿದ್ದಾರೆ. ಬಂದಿದ್ದೇನೆ. ನನಗೆ ಗೌರವ ಸಿಗುತ್ತಿದೆ. ಅದಕ್ಕೆ ನನಗೆ ಸಮಾಧಾನವಿದೆ. ಮುಂದಿನದರ ಬಗ್ಗೆ ನಾನು ಈಗ ಯೋಚನೆ ಮಾಡಿಲ್ಲ. ಅದನ್ನು ನಿರೀಕ್ಷಿಸುವುದೂ ಇಲ್ಲ.

ಅಂತಿಮವಾಗಿ ಬಿಜೆಪಿ ಮತ್ತು ಶೆಟ್ಟರ್ ನಡುವೆ ಯಾರ ಸೋಲು, ಗೆಲುವಾಯಿತು?

-ಇದರಲ್ಲಿ ಸೋಲು ಗೆಲುವಿನ ಪ್ರಶ್ನೆ ಉದ್ಭವಿಸುವುದಿಲ್ಲ. ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯೂ ಅಲ್ಲ. ಇದು ನಮ್ಮ ಮನೆ. ಮನೆಯೊಳಗಿನ ಬೆಳವಣಿಗೆ. ಯಾರು ಸೋತರು, ಯಾರು ಗೆದ್ದರು ಎಂಬುದು ಬರುವುದಿಲ್ಲ.

ಲೋಕಸಭಾ ಚುನಾವಣೆ ಎದುರಾಗದೇ ಇದ್ದಿದ್ದರೆ ನೀವು ಬಿಜೆಪಿಗೆ ವಾಪಸ್ ಬರುವುದು ಮರೀಚಿಕೆ ಆಗುತ್ತಿತ್ತೇ? ಚುನಾವಣೆ ಸಲುವಾಗಿ ನಿಮ್ಮನ್ನು ಪ್ರೀತಿಯಿಂದ ಕರೆತಂದಿಲ್ಲವೇ?

-ಚುನಾವಣೆ ವ್ಯವಸ್ಥೆಯೇ ಹಾಗಿದೆ. ಚುನಾವಣೆ ಬಂದಾಗ ಸಹಜವಾಗಿಯೇ ಚಟುವಟಿಕೆಗಳು ಹೆಚ್ಚಾಗುತ್ತವೆ. ಚುನಾವಣೆ ಎಂದಲ್ಲ. ನನ್ನನ್ನು ಕರೆತರಲು ಹಲವು ತಿಂಗಳುಗಳ ಹಿಂದಿನಿಂದಲೇ ಪ್ರಯತ್ನ ನಡೆದಿದೆ.

ಈ ಲೋಕಸಭಾ ಚುನಾವಣೆ ಮೂಲಕ ನೀವು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ವಲಸೆ ಹೋಗುತ್ತೀರಂತೆ?

-ನಾನು ಬೇಷರತ್ತಾಗಿ ಪಕ್ಷ ಸೇರುತ್ತಿದ್ದೇನೆ. ನೀವು ಯಾವ ಜವಾಬ್ದಾರಿ ಕೊಡುತ್ತೀರೊ ಅದಕ್ಕೆ ನಾನು ತಯಾರಿದ್ದೇನೆ ಎಂಬ ಮಾತನ್ನು ವರಿಷ್ಠರಿಗೆ ಹೇಳಿದ್ದೇನೆ. ಲೋಕಸಭಾ ಚುನಾವಣೆ ಸ್ಪರ್ಧಿಸಬೇಕು ಎಂದರೆ ಅದಕ್ಕೂ ಸಿದ್ಧ. ಬೇಡ ಬೇರೆ ಜವಾಬ್ದಾರಿ ಕೊಡುತ್ತೇವೆ ಎಂದರೆ ಅದಕ್ಕೂ ತಯಾರಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಯಾವ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದೇನೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರತಿನಿಧಿಸುವ ಧಾರವಾಡ ಲೋಕಸಭಾ ಕ್ಷೇತ್ರದಿಂದಲೇ ನೀವು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೀರಿ ಎಂಬ ಮಾತು ಕೇಳಿಬರುತ್ತಿದೆ?

-ಲೋಕಸಭಾ ಚುನಾವಣೆ ಸ್ಪರ್ಧಿಸುವ ಬಗ್ಗೆ ಅಥವಾ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ನಾನು ಪಕ್ಷದ ವರಿಷ್ಠರ ಜತೆ ಚರ್ಚೆಯನ್ನೇ ನಡೆಸಿಲ್ಲ. ಎಲ್ಲವೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ.

ಹಿಂದೆ ಪಕ್ಷ ತೊರೆಯುವಾಗ ಪ್ರಹ್ಲಾದ್ ಜೋಶಿ ವಿರುದ್ಧವೇ ಆರೋಪ ಮಾಡಿದ್ದಿರಿ. ಈಗ ಎಲ್ಲವೂ ಸರಿ ಹೋಯಿತೆ? ನೀವಿಬ್ಬರೂ ಮುಖಾಮುಖಿ ಮಾತನಾಡಿದಿರಾ?

-ಹಿಂದೆ ಆಗಿದ್ದರ ಬಗ್ಗೆ ನಾನು ಆಗಲೇ ಮಾತನಾಡಿದ್ದೇನೆ. ಈಗ ನಾನು ಮತ್ತೆ ಪಕ್ಷಕ್ಕೆ ಬಂದಿದ್ದೇನೆ. ಕಳೆದ ವಾರದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ವೇಳೆ ಮುಖಾಮುಖಿಯಾಗಿದ್ದೆವು. ವೇದಿಕೆ ಮೇಲೆ ಸಿಕ್ಕಿದ್ದರು. ರಾಜಕಾರಣದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶತ್ರುಗಳೂ ಇಲ್ಲ ಎಂಬ ಗಾದೆ ಮಾತೇ ಇದೆ. ಮುಂದಿನ ದಿನಗಳಲ್ಲಿ ಪರಸ್ಪರ ಮಾತನಾಡುತ್ತೇವೆ. ರಾಜಕಾರಣದಲ್ಲಿ ಎಲ್ಲವೂ ಹೀಗೆಯೇ ಎಂದು ಹೇಳುವುದಕ್ಕೆ ಆಗುವುದಿಲ್ಲ. ಬದಲಾವಣೆ ಆಗುತ್ತಲೇ ಇರುತ್ತದೆ.

ಜಗದೀಶ ಶೆಟ್ಟರ್‌ ಬಿಜೆಪಿಗೆ: ಕಾಂಗ್ರೆಸ್‌ಗೆ ಹಾನಿಯಿಲ್ಲ: ಸಚಿವ ಡಾ.ಶರಣಪ್ರಕಾಶ ಪಾಟೀಲ್

ಈ ಒಂಬತ್ತು ತಿಂಗಳ ಅವಧಿಯಲ್ಲಿ ಬಿಜೆಪಿಯಲ್ಲಿ ಏನಾದರೂ ಬದಲಾವಣೆ ಆಗಿದೆ ಎಂದು ಅನಿಸುತ್ತಿದೆಯೇ?

-ಒಂದಿಷ್ಟು ಮೈನಸ್ ಅಂಶಗಳು ಇದ್ದವು. ಹಿಂದೆಯೂ ಹೇಳುತ್ತಿದ್ದೆ. ಅವುಗಳನ್ನು ಒಂದೊಂದಾಗಿ ಸರಿಪಡಿಸುವಂಥ ಕೆಲಸ ಆಗುತ್ತಿದೆ.

ನೀವು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಇದ್ದು ವಾಪಸ್ ಬಂದಿದ್ದೀರಿ. ಆಡಳಿತ ವೈಖರಿ ಬಗ್ಗೆ ಸಮಾಧಾನ ಇದೆಯೇ?

-ಸರ್ಕಾರದ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಸಮರ್ಪಕವಾಗಿ ಅನುಷ್ಠಾನವಾಗಿರುವ ಬಗ್ಗೆ ಅನುಮಾನವಿದೆ. ಸರ್ಕಾರದ ವರ್ಚಸ್ಸು ಕಡಮೆಯಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಸಚಿವರು ಮತ್ತು ಪಕ್ಷದ ನಾಯಕರ ಪರ ವಿರೋಧದ ಹೇಳಿಕೆಗಳಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ.

Follow Us:
Download App:
  • android
  • ios