ರೈತರನ್ನೇ ಉದ್ಯಮಿಗಳಾಗಿಸಲು 5 ಎಕ್ಸ್‌ಪೋರ್ಟ್ ಲ್ಯಾಬ್: ಸಚಿವ ಬಿ.ಸಿ.ಪಾಟೀಲ್
ಮಧ್ಯವರ್ತಿಗಳು, ವ್ಯಾಪಾರಸ್ಥರ ನಡುವೆ ಸಿಲುಕಿ ರೈತರು ಬಡವರಾಗುತ್ತಿದ್ದಾರೆ. ರೈತರೇ ಉದ್ಯಮಿಗಳಾಗಲು ರಾಜ್ಯದಲ್ಲಿ 5 ಹೊಸ ರಫ್ತು ಪ್ರಯೋಗಾಲಯ (ಎಕ್ಸ್‌ಪೋರ್ಟ್ ಲ್ಯಾಬ್) ಆರಂಭಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಬೆಂಗಳೂರು (ಆ.21): ಮಧ್ಯವರ್ತಿಗಳು, ವ್ಯಾಪಾರಸ್ಥರ ನಡುವೆ ಸಿಲುಕಿ ರೈತರು ಬಡವರಾಗುತ್ತಿದ್ದಾರೆ. ರೈತರೇ ಉದ್ಯಮಿಗಳಾಗಲು ರಾಜ್ಯದಲ್ಲಿ 5 ಹೊಸ ರಫ್ತು ಪ್ರಯೋಗಾಲಯ (ಎಕ್ಸ್‌ಪೋರ್ಟ್ ಲ್ಯಾಬ್) ಆರಂಭಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಅಪೆಡಾ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಮತ್ತು ರಫ್ತುದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಮಹಾರಾಷ್ಟ್ರ ಪ್ರಥಮ, ಗುಜರಾತ್ ದ್ವಿತೀಯ ಹಾಗೂ ಕರ್ನಾಟಕ 3 ನೇ ಸ್ಥಾನದಲ್ಲಿವೆ. ರಾಜ್ಯವು ಮೊದಲನೇ ಸ್ಥಾನಕ್ಕೆ ಗಳಿಸಬೇಕು. ಇದಕ್ಕೆ ಸಹಕಾರಿಯಾಗಿ ನಮ್ಮಲ್ಲಿ ಕೃಷಿಗೆ ಪೂರಕವಾದ 10 ವಿಭಿನ್ನ ವಲಯಗಳಿವೆ. ರಫ್ತಿಗೆ ಪ್ರೋತ್ಸಾಹ ನೀಡಲು ವಿಜಯಪುರದ ಇಂಡಿ, ಹಾವೇರಿಯ ಹನುಮನಮಟ್ಟಿ, ಚಿಕ್ಕಬಳ್ಳಾಪುರದ ವರದಗೆರೆ, ಮೈಸೂರಿನ ನಾಗೇನಹಳ್ಳಿ ಮತ್ತು ಶಿರಸಿಯ ಬನವಾಸಿಯಲ್ಲಿ 5 ರಫ್ತು ಲ್ಯಾಬ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಇರಬೇಕಿತ್ತು: ಸಚಿವ ಬಿ.ಸಿ.ಪಾಟೀಲ್
11 ಲಕ್ಷ ರೈತರ ಸಮಾವೇಶ: ರಾಜ್ಯದಲ್ಲಿ 1100 ರೈತ ಉತ್ಪಾದಕ ಸಂಸ್ಥೆಗಳಿದ್ದು ಒಟ್ಟು 11 ಲಕ್ಷ ರೈತರು ಸಂಘಟಿತರಾಗಿದ್ದಾರೆ. 2023 ಕ್ಕೆ 10 ಸಾವಿರ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಾಗಿದೆ. 11 ಲಕ್ಷ ರೈತರನ್ನೂ ಒಂದೆಡೆ ಸೇರಿಸಿ ಬೃಹತ್ ಸಮಾವೇಶ ಮಾಡುವ ಉದ್ದೇಶವಿದೆ. ಆದರೆ ಅನುಕೂಲದ ದೃಷ್ಟಿಯಿಂದ ವಿಭಾಗವಾರು 5 ಕಡೆ ಸಮಾವೇಶ ಹಮ್ಮಿಕೊಳ್ಳಲಾಗುವುದು. ಪ್ರಗತಿಪರ ರೈತರಿಂದ ಉಪನ್ಯಾಸ ಏರ್ಪಡಿಸಲಾಗುವುದು ಎಂದು ಪ್ರಕಟಿಸಿದರು.
ಅದಾನಿ, ಅಂಬಾನಿ, ಟಾಟಾ, ಬಿರ್ಲಾರಂತಹ ಉದ್ಯಮಿಗಳಗೆ ಅನ್ನ ನೀಡುವ ಶಕ್ತಿ ಇಲ್ಲ. ಇಂತಹ ಶಕ್ತಿ ಇರುವ ರೈತರು ಸಂಘಟಿತರಾಗಬೇಕು. ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ, ಬ್ರಾಂಡಿಂಗ್ ಮೂಲಕ ರಫ್ತು ಮಾಡಲು ಮುಂದಾಗಬೇಕು. ಇದರಿಂದ ಮಧ್ಯವರ್ತಿಗಳು, ವ್ಯಾಪಾರಸ್ಥರ ಹಾವಳಿಯನ್ನು ತಡೆಗಟ್ಟಬಹುದು. ರೈತರು ಮತ್ತು ರಫ್ತುದಾರರ ನಡುವೆ ಸೇತುವೆಯಂತೆ ಕೆಪೆಕ್ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಾಯ ದ್ವಿಗುಣಕ್ಕೆ ಆದ್ಯತೆ: ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ್ ಮಾತನಾಡಿ, ರೈತರು ಬೆಳೆ ಬೆಳೆಯುವುದಕ್ಕೆ ಮಾತ್ರ ಸೀಮಿತವಾಗದೆ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುವತ್ತ ಗಮನ ಹರಿಸಬೇಕು. ಇದಕ್ಕಾಗಿ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿದ್ದು ಏಕ ಗವಾಕ್ಷಿ ಯೋಜನೆ ಮೂಲಕ ರೈತರನ್ನು ರಫ್ತುದಾರರನ್ನಾಗಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಸರ್ವರ ಪ್ರಯತ್ನ, ಸರ್ವರ ಅಭಿವೃದ್ಧಿಯ ಸಂದೇಶ ಸಾರಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಕೃಷಿ ರಫ್ತಿಗೆ ರಾಜ್ಯದಲ್ಲಿರುವ ಅವಕಾಶ, ಅಗತ್ಯತೆ, ಯೋಜನೆ, ರಫ್ತುದಾರರ ಅನುಭವ, ರಫ್ತಿನಲ್ಲಿ ಎಫ್‌ಪಿಒಗಳು ಎದುರಿಸುತ್ತಿರುವ ಸವಾಲು, ರಫ್ತಿನಲ್ಲಿ ವಿವಿಧ ನಿಗಮ-ಮಂಡಳಿಗಳ ಪಾತ್ರ ಮತ್ತಿತರ ವಿಷಯಗಳ ಬಗ್ಗೆ ತಜ್ಞರಿಂದ ತಾಂತ್ರಿಕ ಕಾರ್ಯಾಗಾರ ನಡೆಯಿತು. ಕೃಷಿ ಇಲಾಖೆ ಆಯುಕ್ತ ಶರತ್ ಕುಮಾರ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಎಂ.ವಿ.ವೆಂಕಟೇಶ್, ಬೆಂಗಳೂರು ಕೃಷಿ ವಿವಿ ಉಪ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ತೋಟಗಾರಿಕಾ ನಿರ್ದೇಶಕ ನಾಗೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.