ಬೆಂಗಳೂರು(ಮಾ.26): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಿದ್ದು, ಎರಡನೇ ಅಲೆಯ ತೀವ್ರತೆ ಕೆಲವೇ ದಿನಗಳಲ್ಲಿ ಗರಿಷ್ಠ ಮಟ್ಟಮುಟ್ಟುವ ಸಾಧ್ಯತೆ ಇದೆ. ಹೀಗಿದ್ದರೂ ಸರ್ಕಾರ ಹಾಗೂ ಸಾರ್ವಜನಿಕರು ಕೊರೋನಾ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ ಮುಂದುವರೆಸಿರುವುದರ ಪರಿಣಾಮ ಸದ್ಯದಲ್ಲೇ ರಾಜ್ಯಕ್ಕೆ ಕೊರೋನಾದ ಭಾರೀ ಗಂಡಾಂತರ ಕಾದಿದೆ.

ಎರಡನೇ ಅಲೆ ಭೀಕರತೆ ಸೃಷ್ಟಿಸುವ ಬಗ್ಗೆ ತಜ್ಞರು ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿ ತೋರಿಕೆಗೆ ಸರ್ಕಾರ ಸರಣಿ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಆದರೆ, ಈ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ವೇಳೆ ಸಾರ್ವಜನಿಕರು ಕೂಡ ಕೊರೋನಾಗೆ ಕ್ಯಾರೆ ಎನ್ನುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರಾಜ್ಯದಲ್ಲಿ ದೈನಂದಿನ ಸೋಂಕು 25 ಸಾವಿರ ಮುಟ್ಟುವ ದಿನ ದೂರವಿಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ನೆರೆ ರಾಜ್ಯಗಳ ರೀತಿಯಲ್ಲೇ ನಮ್ಮಲ್ಲೂ ಶಾಲಾ-ಕಾಲೇಜು ತರಗತಿಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಬೇಕು. ಲಕ್ಷಾಂತರ ಜನ ಸೇರುವ ಜಾತ್ರೆಗಳು, ಮಸೀದಿಗಳಲ್ಲಿನ ಸಾಮೂಹಿಕ ಪ್ರಾರ್ಥನೆ, ಹೊಸ ಸಿನಿಮಾಗಳ ಪ್ರಮೋಷನ್‌ಗಾಗಿ ನಡೆಯುವ ರೋಡ್‌ ಶೋ, ರಾಜಕೀಯ ಸಮಾವೇಶಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಆದರೂ, ಸರ್ಕಾರ ಇಂತಹ ಕ್ರಮ ಕೈಗೊಂಡಿಲ್ಲ.

ಇನ್ನು ಕೊರೋನಾ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಯನ್ನು ಪ್ರಕಟಿಸಿದ್ದರೂ ರಾಜ್ಯ ಸರ್ಕಾರ ಅವುಗಳ ಸಮರ್ಪಕ ಅನುಷ್ಠಾನದಲ್ಲಿ ಸೋತಿದೆ. ಅನ್ಯ ರಾಜ್ಯಗಳಿಂದ ಬಂದವರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಿಲ್ಲ. ಕೇರಳದಿಂದ ಬರುವವರಿಗೆ ಕಡ್ಡಾಯವಾಗಿದ್ದರೂ ನಾಮ್‌ಕೇವಾಸ್ತೆಗೆ ಪರಿಶೀಲನೆ ನಡೆಸುತ್ತಿದೆ. ಸಭೆ- ಸಮಾರಂಭ, ರಾಜಕೀಯ ಕಾರ್ಯಕ್ರಮಗಳಲ್ಲಿ ಜನ ಸೇರಲು ಹೇರಿರುವ ಮಿತಿ ಕೇವಲ ಆದೇಶಕ್ಕಷ್ಟೇ ಸೀಮಿತವಾಗಿದೆ.

ಸಾವಿರಾರು ಜನ ಸೇರಿ ಮದುವೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರೂ ಸರ್ಕಾರ ಗಮನ ನೀಡುತ್ತಿಲ್ಲ. ಸಿನಿಮಾ ಪ್ರಚಾರ, ಜಾತ್ರೆ, ರಾಜಕೀಯ ಕಾರ್ಯಕ್ರಮಗಳ ಹೆಸರಿನಲ್ಲಿ ಸಾವಿರಾರು ಮಂದಿ ಸೇರುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಇವೆಲ್ಲದರ ಪರಿಣಾಮ ಕೆಲವೇ ದಿನಗಳಲ್ಲಿ ಕೊರೋನಾ ಪ್ರಕರಣಗಳು ತಾರಕಕ್ಕೇರಲಿವೆ ಎಂದು ಎಚ್ಚರಿಸುತ್ತಾರೆ ತಜ್ಞರು.

ಸೋಂಕು ದ್ವಿಗುಣ ದರ ಇದೇ ರೀತಿ ಮುಂದುವರೆದರೆ ಒಂದರಿಂದ ಒಂದೂವರೆ ತಿಂಗಳ ಅವಧಿಯಲ್ಲಿ ದಿನವೊಂದಕ್ಕೆ ಬರೋಬ್ಬರಿ 25 ಸಾವಿರ ಪ್ರಕರಣಗಳವರೆಗೂ ವರದಿಯಾಗಲಿವೆ. ಪರಿಸ್ಥಿತಿ ಕೈ ಮೀರುವ ಮೊದಲೇ ಸರ್ಕಾರ ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ವಾರವೂ ಸೋಂಕು ಡಬಲ್‌:

ಬುಧವಾರ ಒಂದೇ ದಿನ ದೇಶದಲ್ಲಿ 53,476 ಪ್ರಕರಣ ವರದಿಯಾಗಿದ್ದು, ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ದಿನವೊಂದರ ಗರಿಷ್ಠ ಪ್ರಕರಣ ದಾಖಲಾಗಿದೆ. ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರಿ ಕೊರೋನಾ ಸಹ ಪತ್ತೆಯಾಗಿದೆ. ರಾಜ್ಯದಲ್ಲೂ ಪ್ರತಿ ವಾರ ಸೋಂಕು ಪ್ರಮಾಣ ದ್ವಿಗುಣಗೊಳ್ಳುತ್ತಿದೆ. ಮಾ.12 ರಂದು 833 ಪ್ರಕರಣ ವರದಿಯಾಗಿದ್ದರೆ ಮಾ.18ಕ್ಕೆ 1,488 ಕ್ಕೆ ಏರಿಕೆಯಾಗಿದೆ. ಮಾ.25ರ ವೇಳೆಗೆ 2,523ರಷ್ಟಾಗಿದೆ. ಪ್ರತಿ ವಾರವೂ ದಿನನಿತ್ಯ ವರದಿಯಾಗುವ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

10 ರಾಜ್ಯಗಳಲ್ಲಿ ಶಾಲಾ-ಕಾಲೇಜು ಬಂದ್‌:

ರಾಜ್ಯದ ನೆರೆ ರಾಜ್ಯಗಳು ಈಗಾಗಲೇ ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಅನುಸರಿಸುತ್ತಿದ್ದು ತೆಲಂಗಾಣ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ತರಗತಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ, ರಾಜ್ಯದಲ್ಲಿ 6ನೇ ತರಗತಿಯಿಂದ ಎಲ್ಲಾ ತರಗತಿಗಳಿಗೂ ಅವಕಾಶ ನೀಡಲಾಗಿದೆ. ವಿಚಿತ್ರವೆಂದರೆ ಹಲವೆಡೆ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೂ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪ ಕೇಳಿ ಬಂದಿದೆ.