ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!
* ಶಿವಮೊಗ್ಗದ ಮದುವೆಯಲ್ಲಿ ಪಾಲ್ಗೊಂಡ 16 ಮಂದಿಗೆ ಕೊರೋನಾ ದೃಢ
* ಕ್ಲಸ್ಟರ್‌ಗಳಲ್ಲಿ ಸೋಂಕು ರೂಪಾಂತರಿ ವೈರಸ್‌ಗೆ ನಾಂದಿ: ತಜ್ಞರ ಎಚ್ಚರಿಕೆ
* ರಾಜ್ಯಾದ್ಯಂತ ಹೆಚ್ಚಾದ ಮದುವೆ ಮತ್ತಿತರ ಶುಭ ಕಾರ್ಯಗಳು
ಬೆಂಗಳೂರು(ಜು.10): ರಾಜ್ಯಾದ್ಯಂತ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಜನರ ಸಾಮೂಹಿಕ ಸೇರುವಿಕೆ ಹಾಗೂ ಕೊರೋನಾ ಕುರಿತು ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು, ಕೊರೋನಾ ಮಾರ್ಗಸೂಚಿ ಪಾಲಿಸದಿದ್ದರೆ ಅತಿ ಶೀಘ್ರದಲ್ಲೇ ಮತ್ತೆ ಸೋಂಕು ಉಲ್ಬಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಕ್ಲಸ್ಟರ್ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ 4 ಮಂದಿ ಸೇರಿ 16 ಮಂದಿಗೆ ಸೋಂಕು ದೃಢಪಟ್ಟಿದೆ. ಇಂತಹ ಕ್ಲಸ್ಟರ್ ಸೋಂಕುಗಳು ರೂಪಾಂತರಿ ವೈರಸ್ ಹುಟ್ಟಿ ಹಾಕಲು ಸಹ ಕಾರಣವಾಗಬಹುದು. ಹೀಗಾಗಿ ಜನರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ರಾಜ್ಯಾದ್ಯಂತ ಮದುವೆ ಮತ್ತಿತರ ಶುಭ ಕಾರ್ಯಗಳು ಹೆಚ್ಚಾಗಿವೆ. 100 ಮಂದಿ ಸೇರಲು ಮಾತ್ರ ಅವಕಾಶವಿದ್ದರೂ ಸ್ಥಳೀಯ ಆಡಳಿತದ ಕಣ್ಣು ತಪ್ಪಿಸಿ ಹೆಚ್ಚು ಮಂದಿ ಸೇರುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಗಳು ಸಹ ನಿಗಾ ವಹಿಸುತ್ತಿಲ್ಲ. ಶಿವಮೊಗ್ಗದಲ್ಲಿ ಜೂ.27, 28 ರಂದು ನಡೆದ ಮದುವೆಯಲ್ಲಿ ಭಾಗವಹಿಸಿದ್ದ 16 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಂಗಳೂರಿನವರೇ 4 ಮಂದಿ ಸೋಂಕಿಗೆ ಒಳಗಾಗಿದ್ದು, ಇವರ ತಪಾಸಣೆಯಿಂದ ಶಿವಮೊಗ್ಗದ ಕ್ಲಸ್ಟರ್ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ವೈರಸ್: ಇಲ್ಲಿದೆ ಜು.9ರ ಅಂಕಿ-ಸಂಖ್ಯೆ
ಜಿನೋಮ್ ಪರೀಕ್ಷೆ ನಡೆಸಬೇಕು:
ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಜಿನೊಮಿಕ್ ಸೀಕ್ವೆನ್ಸಿಂಗ್ ನೋಡಲ್ ಅಧಿಕಾರಿ ವಿ.ರವಿ, ಶಿವಮೊಗ್ಗ ಪ್ರಕರಣ ಕ್ಲಸ್ಟರ್ ಸೋಂಕಿನ ರೀತಿ ಕಾಣುತ್ತಿದೆ. ರಾಜ್ಯಾದ್ಯಂತ ಸೋಂಕು ಇಳಿಕೆಯಾಗಿದ್ದು, ಇನ್ನು ಮುಂದೆ ಪತ್ತೆಯಾಗುವ ಪ್ರತಿ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು. ಶೀಘ್ರ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಬೇಕು. ಶಿವಮೊಗ್ಗ ಕ್ಲಸ್ಟರ್ ಸೋಂಕಿನ ಮಾದರಿಗಳನ್ನು ಜಿನೊಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು. ಇಂತಹ ಕ್ಲಸ್ಟರ್ ಸೋಂಕು ರೂಪಾಂತರಿ ಕೊರೋನಾ ಹುಟ್ಟಿಕೊಳ್ಳಲು ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್. ಮಂಜುನಾಥ್, ಮದುವೆ ಮತ್ತಿತರ ಜನ ಸೇರುವ ಕಾರ್ಯಕ್ರಮಗಳ ಬಗ್ಗೆ ಸ್ಥಳೀಯ ಆಡಳಿತಗಳು ನಿಗಾ ವಹಿಸಬೇಕು. ಅನ್‌ಲಾಕ್ ಬಳಿಕ ಜನ ಎಚ್ಚರ ತಪ್ಪಿದಂತೆ ಕಾಣುತ್ತಿದೆ. ನಿತ್ಯದ ಚಟುವಟಿಕೆ ಹಾಗೂ ಉದ್ಯೋಗ ಅವಕಾಶಗಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಅನ್‌ಲಾಕ್ ಮಾಡಲಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.