ನೇಕಾರರ ಅಭಿವೃದ್ಧಿಗೆ ವಿಶೇಷ ನಿಗಮ ಸ್ಥಾಪನೆ: ಸಿಎಂ ಬೊಮ್ಮಾಯಿ ಭರವಸೆ
ರಾಜ್ಯದಲ್ಲಿ ನೇಕಾರರ ಅಭಿವೃದ್ಧಿಗಾಗಿ ವಿಶೇಷವಾದ ನೇಕಾರರ ನಿಗಮವನ್ನು ಸ್ಥಾಪಿಸುವ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಾಗಲಕೋಟೆ (ಫೆ.26): ರಾಜ್ಯದಲ್ಲಿ ನೇಕಾರರ ಅಭಿವೃದ್ಧಿಗಾಗಿ ವಿಶೇಷವಾದ ನೇಕಾರರ ನಿಗಮವನ್ನು ಸ್ಥಾಪಿಸುವ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಡಿ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. 51 ಕೋಟಿ ರೂ. ವೆಚ್ಚದಲ್ಲಿ 1.50 ಲಕ್ಷ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆಯನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ. ಮಗ್ಗ ಸ್ಥಾಪಿಸಲು 2 ಲಕ್ಷದವರೆಗೆ ಸಹಾಯಧನ, 5 ಹೆಚ್ ಪಿ ವರೆಗೆ ವಿದ್ಯುತ್ ವ್ಯವಸ್ಥೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಬೇಡಿಕೆಯಿದೆ. ರಾಜ್ಯದಲ್ಲಿ 25 ಜವಳಿ ಪಾರ್ಕ್ ಸ್ಥಾಪಿಸುವ ಯೋಜನೆಯಿದ್ದು, ಜವಳಿ ಪಾರ್ಕ್ ನ್ನು ಸ್ಥಾಪಿಸುವ ಸ್ಥಳದ ಪಟ್ಟಿಯಲ್ಲಿ ತೇರದಾಳವೂ ಇರಲಿದೆ ಎಂದರು.
ಸಸಾಲಟ್ಟಿ ಏತನೀರಾವರಿ ಯೋಜನೆ : ಸಸಾಲಟ್ಟಿ, ಕೆರೂರು, ರೇವಣಸಿದ್ಧೇಶ್ವರ, ಅನಿವಾಳ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿ, ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಸಸಾಲಟ್ಟಿ ಏತನೀರಾವರಿ ಯೋಜನೆಯನ್ನು 443 ಕೋಟಿ ರೂ. ವೆಚ್ಚದಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ ತೇರದಾಳ ತಾಲ್ಲೂಕು, ಬನಹಟ್ಟಿಯ 11 ಗ್ರಾಮಗಳಿಗೆ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.
Bagalkote: ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರೋ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆ ಅನುಷ್ಠಾನ : ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಧಾರಣೆ ನಿಗದಿಗೊಳಿಸಲು ಕ್ರಮ ಕೈಗೊಳ್ಳಲಾಯಿತು.ರೈತರಿಂದ ಭೂಸ್ವಾಧೀನಕ್ಕಾಗಿ ಏಕಸ್ವಾಮ್ಯದ ದರವನ್ನು ನಿಗದಿಪಡಿಸಲಾಗಿದ್ದು,ಅನುದಾನವನ್ನು ಈ ವರ್ಷ ಮೀಸಲಿರಿಸಿದೆ. ಯೋಜನೆಗೆ ಸಂಬಂಧಪಟ್ಟ ತೀರ್ಪು ಸಧ್ಯದಲ್ಲಿಯೇ ಬರಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಯೋಜನೆ ಅನುಷ್ಠಾನಗೊಳಿಸಲಾಗುವುದು, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಸರ್ಕಾರದ ಈ ನಿರ್ಣಯ ಶಕ್ತಿಯನ್ನು ತುಂಬಲಿದೆ ಎಂದರು.
ಕೃಷಿ ಮತ್ತು ನೇಕಾರಿಕೆಗೆ ಹೆಚ್ಚಿನ ಒತ್ತು : ಈ ವರ್ಷ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿದರದ ಸಾಲವನ್ನು 5 ಲಕ್ಷಕ್ಕೆ ಏರಿಕೆ, ಆವರ್ತ ನಿಧಿ ಹೆಚ್ಚಿಸುವ ಮೂಲಕ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಯ ಗುರಿಯನ್ನು ಸರ್ಕಾರ ಹೊಂದಿದೆ .ರೈತ ಹೆಣ್ಣುಮಕ್ಕಳಿಗೆ 1000 ರೂ. ನೀಡುವ ಗೃಹಿಣಿ ಶಕ್ತಿ ಯೋಜನೆ ರೂಪಿಸಲಾಗಿದೆ.ದುಡಿಯುವ ವರ್ಗಕ್ಕೆ ಮನ್ನಣೆ ನೀಡಲಾಗಿದೆ. ಈ ಪ್ರದೇಶದಲ್ಲಿ ಕೃಷಿ ಮತ್ತು ನೇಕಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯಡಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುವುದು. ಸಮಗ್ರ ಬಾಗಲಕೋಟೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ನೀರಾವರಿ ಯೋಜನೆಗಳಿಗೆ ಕಾಯಕಲ್ಪ : ಈ ಭಾಗದ ಜನರು ಪ್ರಮಾಣಿಕ ಹಾಗೂ ಕಾಯಕವನ್ನು ನಂಬಿರುವ ಜನ. ಸ್ವಾತಂತ್ರ್ಯಾನಂತರ ಬಾಗಲಕೋಟೆ ಮತ್ತು ಬಿಜಾಪುರ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಯಿತು.ಕುಡಿಯುವ ನೀರಿನ ವಿಚಾರದಲ್ಲ ಈ ಜಿಲ್ಲೆಗಳಿಗೆ ಅನ್ಯಾಯವಾಗಿರುವುದು ನಿಜ. ಈ ಹಿನ್ನಡೆಯನ್ನು ಸರಿಪಡಿಸಿ, ಈ ಪ್ರದೇಶವೂ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಉದ್ದೇಶದಿಂದ ಇಂದಿನ ಎಲ್ಲ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಭಾಗದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಮುಳವಾಡಿ, ಚಿಮ್ಮಲಗಿ , ಗುತ್ತಿಬಸವಣ್ಣ ಏತನೀರಾವರಿ ಯೋಜನೆಗಳು ಸ್ಕೀಂ ಬಿ ಎಂದು ನೆನೆಗುದಿಗೆ ಬಿದ್ದಿದ್ದವು , ಅವುಗಳನ್ನು ಕಾರ್ಯಗತಗೊಳಿಸಲಾಯಿತು ಎಂದರು.
ಏಷ್ಯಾನೆಟ್ ಸುವರ್ಣ ಕನ್ನಡಪ್ರಭ ಜೊತೆ ರಾಜ್ಯದ ಜನ ಗುರುತಿಸಿದ ಕರ್ನಾಟಕದ 7 ಅದ್ಭುತ ಘೋಷಿಸಿದ ಸಿಎಂ ಬೊಮ್ಮಾಯಿ!
ದುಡಿಯುವ ವರ್ಗಕ್ಕೆ ಬೆಂಬಲ: ಸ್ತ್ರೀಸಾಮರ್ಥ್ಯ ಯೋಜನೆಯಡಿ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಹಣಸಹಾಯ, ಯೋಜನೆಗಳು, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ಮೂಲಕ ಸ್ವಯಂ ಉದ್ಯೋಗ ನೀಡಲಾಗುತ್ತಿದ್ದು, ಸುಮಾರು 3 ಲಕ್ಷ ಮಹಿಳೆಯರು ಇದರ ಅನುಕೂಲತೆ ಪಡೆಯುತ್ತಿದ್ದಾರೆ. ಇದೇ ರೀತಿಯ ಯೋಜನೆಯನ್ನು ಪ್ರತಿ ಗ್ರಾಮ ಎರಡು ಯುವಶಕ್ತಿ ಸಂಘದ ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಎಸ್ ಸಿ ಎಸ್ ಟಿ ಜನರಿಗೆ 75 ಯೂನಿಟ್ ಉಚಿತ ವಿದ್ಯುತ್, ಭೂಮಿ ಖರೀದಿಗೆ ಸಹಾಯಧನ, ಅಂಬೇಡ್ಕರ್ ರವರ ಹೆಸರಿನಲ್ಲಿ 100 ಹಾಸ್ಟೆಲ್, 50 ಕನಕದಾಸ ಹಾಸ್ಟೆಲ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ಸಚಿವ ಗೋವಿಂದ ಕಾರಜೋಳ, ಶಾಸಕ ಸಿದ್ದು ಸವದಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.