ಬೆಂಗಳೂರು[ಫೆ.10]: ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುವ ರಾಜ್ಯ ಸರ್ಕಾ​ರದ ಯೋಜ​ನೆಗೆ ವಿರೋಧ ವ್ಯಕ್ತವಾದ ಹಿನ್ನೆ​ಲೆ​ಯಲ್ಲಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ಗಳಲ್ಲಿ ಆಂಗ್ಲ ಮಾಧ್ಯಮ ಹಾಗೂ ಕೇಂದ್ರೀಯ ಪಠ್ಯಕ್ರಮ ಅಳವಡಿಸುವ ಮೂಲಕ ಪರೋ​ಕ್ಷ​ವಾಗಿ ತನ್ನ ಯೋಜ​ನೆ​ಯನ್ನು ಜಾರಿ​ಗೊ​ಳಿ​ಸಲು ರಾಜ್ಯ ಸರ್ಕಾರ ಮುಂದಾ​ಗಿ​ದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಒಂದು ಸಾವಿರ ‘ಕರ್ನಾಟಕ ಪಬ್ಲಿಕ್‌ ಶಾಲೆ’ಗಳನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಶಾಲೆಗಳಿಗೆ ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಪ್ರತ್ಯೇಕ ಸಂಘಟನೆ ಹಾಗೂ ಮಾರ್ಗಸೂಚಿಗಳನ್ನು ನಿಗದಿಪಡಿಸುವುದಾಗಿ ತಿಳಿಸಿದ್ದಾರೆ. ಅಂದರೆ ಮುಂದಿನ ದಿನಗಳಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಕೇಂದ್ರೀಯ ಪಠ್ಯಕ್ರಮಗಳನ್ನು ಒಳಗೊಂಡ ಪಠ್ಯಕ್ರಮಗಳನ್ನು ಬೋಧಿಸುವ ಚಿಂತನೆ ಸರ್ಕಾರ ಹೊಂದಿದೆ.

ಇದ​ರರ್ಥ ಈ ಕರ್ನಾ​ಟಕ ಪಬ್ಲಿಕ್‌ ಶಾಲೆ​ಗಳು ಅಂತಿ​ಮ​ವಾಗಿ ಇಂಗ್ಲಿಷ್‌ ಮಾಧ್ಯ​ಮ ಶಾಲೆ​ಗಳೇ ಆಗ​ಲಿವೆ. ಆಂಗ್ಲ ಮಾಧ್ಯಮ ತರಗತಿಗಳ ಆರಂಭಕ್ಕೆ ಕನ್ನಡದ ಬಹುತೇಕ ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು ಮಾತ್ರವಲ್ಲ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ವಿರೋಧವಿರುವ ಕಾರ​ಣ​ದಿಂದಲೇ ಇಂಗ್ಲಿಷ್‌ ಮಾಧ್ಯ​ಮ​ವನ್ನು ಪರೋ​ಕ್ಷ​ವಾಗಿ ಆರಂಭಿ​ಸಲು ಸರ್ಕಾರ ಮುಂದಾ​ಗಿದೆ ಎಂದು ವ್ಯಾಖ್ಯಾ​ನಿ​ಸ​ಲಾ​ಗು​ತ್ತಿ​ದೆ.

ರಾಜ್ಯ ಸರ್ಕಾ​ರವು 2019-20ನೇ ಸಾಲಿನಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಕಡೆ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದಾಗಿ ಹೇಳಿತ್ತು. ಆದರೆ, ಬಜೆ​ಟ್‌​ನಲ್ಲಿ ಈ ವಿಷ​ಯ​ವನ್ನು ಪ್ರಸ್ತಾ​ಪಿ​ಸಿಲ್ಲ. ಇದರ ಬದ​ಲಾಗಿ, ಪೂರ್ವ ಪ್ರಾಥಮಿಕ ಶಿಕ್ಷಣದಿಂದ 12ನೇ ತರಗತಿವರೆಗೂ ಒಂದೇ ಸೂರಿನಡಿ ಶಿಕ್ಷಣ ನೀಡುವುದಕ್ಕಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ಬಜೆಟ್‌ನಲ್ಲಿ ಹೇಳಿದೆ.

ಸದ್ಯಕ್ಕೆ ಈ ಕರ್ನಾಟಕ ಪಬ್ಲಿಕ್‌ ಶಾಲೆಗಳ ಪಠ್ಯ​ಕ್ರಮ ಯಾವ ರೀತಿ ಇರ​ಲಿದೆ, ಇಲ್ಲಿ ಸಿಬಿ​ಎ​ಸ್‌​ಇ ಪಠ್ಯಕ್ರಮ ಬೋಧಿಸುತ್ತಾರೋ ಅಥವಾ ರಾಜ್ಯ ಪಠ್ಯ​ಕ್ರ​ಮವೇ ಇರು​ತ್ತ​ದೆಯೋ ಎಂಬ ಬಗ್ಗೆ ಇಲಾ​ಖೆಯ ಅಧಿ​ಕಾ​ರಿ​ಗಳು ಸ್ಪಷ್ಟ​ವಾಗಿ ಏನೂ ಹೇಳು​ತ್ತಿಲ್ಲ. ಆದರೆ, ಈ ಶಾಲೆಗಳಿಗೆ ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಪ್ರತ್ಯೇಕ ಸಂಘಟನೆ ಹಾಗೂ ಮಾರ್ಗಸೂಚಿಗಳನ್ನು ನಿಗದಿಪಡಿಸುತ್ತೇವೆ ಎಂದು ಹೇಳುತ್ತಾರೆ. ಜತೆಗೆ, ಉತ್ತಮ ಗುಣ​ಮ​ಟ್ಟದ ಪಠ್ಯ​ಕ್ರ​ಮವೂ ಇರು​ತ್ತದೆ ಎಂದು ಹೇಳು​ವ ಮೂಲಕ ಇಂಗ್ಲಿಷ್‌ ಮಾಧ್ಯ​ಮದಲ್ಲೇ ಈ ಶಾಲೆ​ಗಳು ಇರುವ ಸಾಧ್ಯ​ತೆ​ಯತ್ತ ಬೊಟ್ಟು ಮಾಡು​ತ್ತಾರೆ.

ಸಾವಿರಕ್ಕೆ ಹೆಚ್ಚಿಸುವ ಗುರಿ:

ಸದ್ಯ 275 ‘ಕರ್ನಾಟಕ ಪಬ್ಲಿಕ್‌ ಶಾಲೆ’ಗಳು ರಾಜ್ಯದಲ್ಲಿ ಅನುಷ್ಠಾನದ ಹಂತದಲ್ಲಿದ್ದು, ಇವುಗಳನ್ನೇ ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಸುಸಜ್ಜಿತ ಬೋಧನಾ ಕೊಠಡಿಗಳನ್ನು ಒಳಗೊಂಡ ಮೂಲ ಸೌಕರ್ಯ ಈ ಶಾಲೆಗಳಲ್ಲಿರುತ್ತದೆ. ಈ ಶಾಲೆಗಳಿಗೆ ವಿಷಯವಾರು ಶಿಕ್ಷಕರನ್ನು ನೀಡುವ ಮೂಲಕ ಪ್ರತಿ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ. ಫಲಿತಾಂಶ ಸುಧಾರಣೆಗೆ, ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಹೀಗಾಗಿ ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿದೆ.