ಚಿತ್ರದುರ್ಗ(ಮೇ.02): ಚಳ್ಳಕೆರೆ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹಿರಿಯೂರಿನ ವಿವಿ ಸಾಗರದಿಂದ ಕುಡಿಯುವ ನೀರು ಪೂರೈಸುವಂತೆ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಮೌಖಿಕವಾಗಿ ನೀಡಿದ ಆದೇಶ ಉಲ್ಲಂಘಿಸಿದ ಕಾರಣ, ಭದ್ರಾ ಮೇಲ್ದಂಡೆ ಯೋಜನೆಯ ಅಧೀಕ್ಷಕ ಎಂಜಿನಿಯರ್‌ ಕೆ.ಎಂ.ಶಿವಪ್ರಕಾಶ್‌ರನ್ನು ಅಮಾನತು ಮಾಡಲಾಗಿದೆ.

ವಿವಿ ಸಾಗರ ಜಲಾಶಯದಿಂದ ಚಳ್ಳಕೆರೆಗೆ ಕುಡಿಯಲೆಂದು 0.25 ಟಿಎಂಸಿ ನೀರು ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿತ್ತು. ಆದರೆ, ಏ.28ರಂದು ಶಾಸಕಿ ಪೂರ್ಣಿಮಾ ಜಲಾಶಯಕ್ಕೆ ಆಗಮಿಸಿ, ನೀರು ನಿಲ್ಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರು. ವಿಷಯ ತಿಳಿದ ಜಾರಕಿಹೊಳಿ ಯಾವುದೇ ಕಾರಣಕ್ಕೂ ನೀರು ನಿಲ್ಲಿಸಬಾರದು ಎಂದು ದೂರವಾಣಿ ಮೂಲಕ ಸೂಚಿಸಿದ್ದರು.

ಸಚಿವರು ಸೂಚಿಸಿದ್ದಾರೆ ನೀರು ನಿಲ್ಲಿಸಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳಿದರೂ, ಸ್ವತಃ ಪೂರ್ಣಿಮಾ ತಾವೇ ಡಿಸ್‌ಜಾಜ್‌ರ್‍ ಗೇಟ್‌ ಬಂದ್‌ ಮಾಡಲು ಮುಂದಾಗಿದ್ದರು. ಕೊನೆಗೆ ಅಸಹಾಯಕಾರದ ಶಿವಪ್ರಕಾಶ್‌, ನೀರು ನಿಲ್ಲಿಸಲು ಸಹಕರಿಸಿದ್ದರು. ಇದರಿಂದ ಎಂಜಿನಿಯರ್‌ರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.