Asianet Suvarna News Asianet Suvarna News

ಡಿಕೆಶಿಗೆ 75 ಕೋಟಿ ಕಂಟಕ: ಸಚಿವರಾಗಿದ್ದಾಗ ಅಕ್ರಮ ಆಸ್ತಿ ಗಳಿಕೆ ಆರೋಪ

ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭ ಡಿ.ಕೆ.ಶಿವಕುಮಾರ್‌ ಮತ್ತು ಅವರ ಕುಟುಂಬ ಸದಸ್ಯರು ಆದಾಯಕ್ಕೂ ಮೀರಿ 74.93 ಕೋಟಿ ಆಸ್ತಿ ಗಳಿಸಿದ್ದಾರೆಂದು ಆರೋಪ 

Enforcement Directorate Issued Summons to DK Shivakumar For Illegal Property Case grg
Author
First Published Sep 17, 2022, 8:25 AM IST

ಡೆಲ್ಲಿ ಮಂಜು

ನವದೆಹಲಿ(ಸೆ.17):   ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮತ್ತೆ ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆಯ ಕಂಟಕ ಎದುರಾಗಿದೆ. ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭ ಡಿ.ಕೆ.ಶಿವಕುಮಾರ್‌ ಮತ್ತು ಅವರ ಕುಟುಂಬ ಸದಸ್ಯರು ಆದಾಯಕ್ಕೂ ಮೀರಿ 74.93 ಕೋಟಿ ಆಸ್ತಿ ಗಳಿಸಿದ್ದಾರೆಂದು ಆರೋಪಿಸಿ ಸಿಬಿಐ 2020ರಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆ ಆರಂಭಿಸಿರುವ ಇ.ಡಿ., ಸೆ.19ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ತಿಹಾರ್‌ ಜೈಲಿನಲ್ಲಿ ಬಂಧಿಯಾಗಿರುವ ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಪ್ರಕರಣವನ್ನೇ ಡಿ.ಕೆ.ಶಿವಕುಮಾರ್‌ ಅವರ ಪ್ರಕರಣ ಹೋಲುತ್ತಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏನಿದು ಪ್ರಕರಣ?:

2017ರಲ್ಲಿ ದೆಹಲಿಯ ಫ್ಲಾಟ್‌ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್‌ ಸಲ್ಲಿಕೆಯಾಗಿದೆ. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರು ತಿಹಾರ್‌ ಜೈಲಿಗೆ ಹೋಗಿ ಬಂದಿದ್ದರು. ಪ್ರಸ್ತುತ ದೆಹಲಿಯ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸೆ.27ರಂದು ಮತ್ತೆ ವಿಚಾರಣೆ ನಿಗದಿಯಾಗಿದೆ.

ಡಿಕೆಶಿಗೆ ಇ.ಡಿ ಸಮನ್ಸ್‌; ಭಾರತ ಏಕತಾ ಯಾತ್ರೆ, ಅಧಿವೇಶನದ ವೇಳೆ ಕಿರುಕುಳ ಎಂದ ಕಾಂಗ್ರೆಸ್‌ ಅಧ್ಯಕ್ಷ

ಈ ನಡುವೆ, 2020ರ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡು ದೆಹಲಿ, ಮುಂಬೈ, ಬೆಂಗಳೂರು ಸೇರಿ 14 ಕಡೆ ದಾಳಿಸಿ ನಡೆಸಿ, ಹೆಚ್ಚು ಕಡಿಮೆ .57 ಲಕ್ಷ ಹಣ, ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಸಿಬಿಐ ಕೂಡ ಪ್ರಕರಣದ ತನಿಖೆ ನಡೆಸುತ್ತಿದೆ. ಏಪ್ರಿಲ್‌ 2013ರಿಂದ ಏಪ್ರಿಲ್‌ 2018ರ ಅವಧಿಯಲ್ಲಿ ಮಂತ್ರಿಯಾಗಿದ್ದಾಗ ಡಿ.ಕೆ.ಶಿವಕುಮಾರ್‌ ಮತ್ತು ಕುಟುಂಬ ಸದಸ್ಯರು ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿದ್ದಾರೆ. .74.93 ಕೋಟಿಯಷ್ಟುಆಸ್ತಿಯನ್ನು ಆದಾಯಕ್ಕೂ ಮೀರಿ ಹೊಂದಿದ್ದಾರೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ನಮೂದಿಸಿತ್ತು. ಈ ಪ್ರಕರಣ ಸಂಬಂಧ ಸಿಬಿಐ ವಿಚಾರಣೆಗೂ ಡಿಕೆಶಿ ಹಾಜರಾಗಿದ್ದರು. ಇದೀಗ ಆ ಎಫ್‌ಐಆರ್‌ ಆಧಾರದಲ್ಲಿ ಇ.ಡಿ. ಕೂಡ ಪ್ರಕರಣ ದಾಖಲು ಮಾಡಿಕೊಂಡು, ಡಿ.ಕೆ.ಶಿವಕುಮಾರ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಜೈನ್‌ ಕೇಸ್‌ ಹೋಲಿಕೆ:

ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸತ್ಯೇಂದ್ರ ಜೈನ್‌ ಅವರ ಪ್ರಕರಣಕ್ಕೂ ಡಿ.ಕೆ. ಶಿವಕುಮಾರ್‌ ಅವರ ಪ್ರಕರಣಕ್ಕೂ ಹೋಲಿಕೆ ಇದೆ ಎನ್ನುತ್ತಿದೆ ವಕೀಲರ ವಲಯ. 2015ರಿಂದ 2017ರ ಅವಧಿಯಲ್ಲಿ ಜೈನ್‌ ಸಚಿವರಾಗಿದ್ದಾಗ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐನ ಎಸಿಬಿ ವಿಭಾಗ ಪ್ರಕರಣ ದಾಖಲಿಸಿತ್ತು. ವಿಚಾರಣೆ ಕೂಡ ನಡೆಸಿತ್ತು. ಅಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಕೂಡಲೇ ಇಸಿಐಆರ್‌ ದಾಖಲಿಸಿಕೊಂಡ ಇ.ಡಿ. 2020ರ ಮೇ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಜೈನ್‌ಗೆ ಸಮನ್ಸ್‌ ನೀಡಿತ್ತು. ಆ ಬಳಿಕ 2022ರ ಮೇ 30 ರಂದು ಸತ್ಯೇಂದ್ರ ಜೈನ್‌ ಅವರನ್ನು ಬಂಧಿಸಿದ್ದು, ಕಳೆದ ಮೂರು ತಿಂಗಳಿಂದ ಅವರು ತಿಹಾರ್‌ ಜೈಲಿನಲ್ಲಿ ಕಾಲಕಳೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಜೈನ್‌ ಅವರ ಪತ್ನಿ, ಅವರ ಸಹಚರರನ್ನು ಕೂಡ ಬಂಧಿಸಿದ್ದ ಇ.ಡಿ. .4.81 ಕೋಟಿ ಮೌಲ್ಯದ ಆಸ್ತಿಯನ್ನು ಕೂಡ ಮುಟ್ಟುಗೋಲು ಹಾಕಿಕೊಂಡಿದೆ.

ಸಮನ್ಸ್‌ ಏಕೆ?

- 2020ರ ಅಕ್ಟೋಬರ್‌ನಲ್ಲಿ ಬೆಂಗಳೂರು ಸೇರಿ 14 ಕಡೆ ಸಿಬಿಐ ಶೋಧ ಕಾರ‍್ಯ ನಡೆಸಿತ್ತು
- ಸಚಿವರಾಗಿದ್ದಾಗ ಡಿಕೆಶಿ ಅಕ್ರಮ ಆಸ್ತಿ ಗಳಿಸಿದ ಸಂಬಂಧ ಸಿಬಿಐ ಕೇಸ್‌ ದಾಖಲಿಸಿತ್ತು
- ಡಿಕೆಶಿ, ಕುಟುಂಬದಿಂದ 74.93 ಕೋಟಿ ರು. ಅಕ್ರಮ ಆಸ್ತಿ ಗಳಿಕೆ: ಸಿಬಿಐ ಎಫ್‌ಐಆರ್‌
- ಇದೇ ಪ್ರಕರಣ ಆಧರಿಸಿ ಈಗ ಇ.ಡಿ.ಯಿಂದಲೂ ಎಫ್‌ಐಆರ್‌. ಡಿಕೆಶಿಗೆ ಸಮನ್ಸ್‌ ಜಾರಿ
 

Follow Us:
Download App:
  • android
  • ios