ಮಂಗಳೂರು, [ಡಿ.04]: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಅವರನ್ನು ಎನ್‌ಕೌಂಟರ್‌ ಮಾಡುವಂತೆ ಒತ್ತಾಯಿಸುವ ಆಡಿಯೋವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿ ಎಂದು ಹೇಳಿಕೊಂಡಿರುವ ಅನಾಮಧೇಯ ವ್ಯಕ್ತಿಯೊಬ್ಬರು ಜಾಲತಾಣಗಳಲ್ಲಿ 2.45 ನಿಮಿಷದ ಈ ಆಡಿಯೋವನ್ನು ಹರಿಯಬಿಟ್ಟಿದ್ದಾರೆ.

ಜನಾರ್ದನ ಪೂಜಾರಿ ಆರ್‌ಎಸ್‌ಎಸ್‌ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ಕಳೆದ 10 ವರ್ಷದಿಂದ ನಾನು ಹೇಳಿಕೆ ಕೊಡುತ್ತಿರುವಾಗ ಯಾರೂ ನಂಬುತ್ತಿರಲಿಲ್ಲ. 

ಆರ್‌ಎಸ್‌ಎಸ್‌ ಪ್ರಭಾಕರ ಭಟ್ಟರನ್ನು ಕರೆಸಿ ಉದ್ಘಾಟನೆ ಮಾಡಿಸುವಾಗಲೇ ಎಲ್ಲರೂ ಆಲೋಚನೆ ಮಾಡಬೇಕಿತ್ತು. ಇಂತಹ ಮನುಷ್ಯನಿಗೆ ನಮ್ಮ ದೇಶದಲ್ಲಿ ಇರಲು ಬಿಡಬಾರದು. ಇವನನ್ನು ಎನ್‌ಕೌಂಟರ್‌ ಮಾಡಿ ಕೊಲ್ಲಬೇಕು ಎಂಬಿತ್ಯಾದಿ ಮಾತುಗಳಿವೆ.

ದ.ಕ. ಮುಸ್ಲಿಂ ಒಕ್ಕೂಟ ಆಕ್ಷೇಪ

ಇದೇ ವೇಳೆ ಜನಾರ್ದನ ಪೂಜಾರಿ ಹೇಳಿಕೆಗೆ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.  ಅಯೋಧ್ಯೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಂದರ್ಭ ಜನಾರ್ದನ ಪೂಜಾರಿ ಅವರು ಮಂದಿರ ಪರವಾಗಿ ಹೇಳಿಕೆ ನೀಡಿರುವುದು ಒಂದು ಸಮುದಾಯದ ಪರ ಹಾಗೂ ಇನ್ನೊಂದರ ವಿರುದ್ಧ ಮಾತನಾಡಿದಂತಾಗಿದೆ ಎಂದು ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್‌ ಅಶ್ರಫ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.