ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮೇ.12): ಲಾಕ್‌ಡೌನ್‌ ಘೋಷಣೆಯಾಗುತ್ತಿದಂತೆ ತಂಡೋಪ ತಂಡವಾಗಿ ಹಾಸ್ಟೆಲ್‌ ಮತ್ತು ಪಿ.ಜಿ.ಗಳನ್ನು ಖಾಲಿ ಮಾಡಿಕೊಂಡು ನಗರವನ್ನು ತೊರೆದು ಹೋದವರು, ಇದೀಗ ಲಾಕ್‌ಡೌನ್‌ ವಿನಾಯಿತಿ ಬೆನ್ನಲ್ಲೆ ಮತ್ತೆ ನಗರದತ್ತ ಮುಖ ಮಾಡುತ್ತಿದ್ದಾರೆ. ಆದರೆ, ಹಾಸ್ಟಲ್‌ ಮತ್ತು ಪಿ.ಜಿ. ಮಾಲಿಕರು ಮಾತ್ರ ಉಳಿದುಕೊಳ್ಳಲು ಅವಕಾಶ ನೀಡದ ಪರಿಣಾಮ ಅನೇಕ ಉದ್ಯೋಗಿಗಳು ಕಂಗಾಲಾಗಿದ್ದು, ನಿರಾಶ್ರಿತರಾಗುವ ಭೀತಿಯಲ್ಲಿದ್ದಾರೆ.

ನಗರದ ಬಹುತೇಕ ಖಾಸಗಿ ಮತ್ತು ಸರ್ಕಾರಿ ಕಚೇರಿ, ಕಂಪನಿ, ಕಾರ್ಖಾನೆಗಳು ಮತ್ತೆ ಕಾರ್ಯಾರಂಭಿಸಿದ್ದು, ಉದ್ಯೋಗಕ್ಕೆ ಮರಳುವಂತೆ ಸಿಬ್ಬಂದಿಗೆ ಮೇಲಿಂದ ಮೇಲೆ ಸೂಚನೆ ನೀಡಲಾಗುತ್ತಿದೆ. ಕೆಲಸಕ್ಕೆ ಆಗಮಿಸದಿದ್ದರೆ ಉದ್ಯೋಗದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಪಿಜಿ ಮತ್ತು ಹಾಸ್ಟಲ್‌ಗಳಲ್ಲಿ ಉಳಿಯಲು ಮಾಲಿಕರು ಅವಕಾಶ ನೀಡುತ್ತಿಲ್ಲ. ಹೀಗಾಗಿ, ಏನು ಮಾಡಬೇಕು ಎಂಬುದು ತಿಳಿಯದೆ ಲಕ್ಷಾಂತರ ಮಂದಿ ಉದ್ಯೋಗಿಗಳು ಕಂಗಾಲಾಗಿದ್ದಾರೆ.

ಹಸಿದವರ ಹೊಟ್ಟೆ ತುಂಬಿಸುತ್ತಿರುವ ಆನ್‌ಲೈನ್‌ ಫುಡ್‌ ಡೆಲಿವರಿ ಬಾಯ್ಸ್!

ಪರೀಕ್ಷೆ ಮಾಡಿಸಿಕೊಂಡವರಿಗಷ್ಟೇ ಅವಕಾಶ:

ಹೊರ ದೇಶ ಮತ್ತು ರಾಜ್ಯದಿಂದ ಬರುವವರಿಗೆ 14 ದಿನ ಕಡ್ಡಾಯ ಕ್ವಾರಂಟೈನ್‌ಗೆ ಸರ್ಕಾರ ಸೂಚಿಸಿದೆ. ಆದರೆ, ಹೊರ ಜಿಲ್ಲೆಗಳಿಂದ ನಗರಕ್ಕೆ ಬರುವವರನ್ನು ಹೇಗೆ ಏನು ಎಂಬುದರ ಬಗ್ಗೆ ಈವರೆಗೆ ಯಾವುದೇ ಮಾರ್ಗಸೂಚಿ ನೀಡಿಲ್ಲ. ಬಿಬಿಎಂಪಿ ಮಾರ್ಗಸೂಚಿ ನೀಡುವವರೆಗೂ ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದಾರೆ ನಗರದ ಕೆಲವು ಪಿಜಿ ಮಾಲಿಕರು. ಇನ್ನು ಕೆಲವರು ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಂಡು ಪರೀಕ್ಷಾ ವರದಿ ತೆಗೆದುಕೊಂಡು ಬಂದರೆ ಮಾತ್ರ ಅವಕಾಶ ನೀಡಲಾಗುವುದು ಎನ್ನುತ್ತಿದ್ದಾರೆ.

ತಲೆನೋವಾದ ನಿರ್ವಹಣೆ:

ಸರ್ಕಾರ ಹಾಗೂ ಬಿಬಿಎಂಪಿ ಸೂಚಿಸುವಂತೆ ಮಾರ್ಗಸೂಚಿಯಂತೆ ಪಿಜಿ, ಹಾಸ್ಟೆಲ್‌ನಲ್ಲಿ ನಿಯಮಿತವಾಗಿ ತ್ಯಾಜ್ಯ ಹಾಗೂ ಸ್ವಚ್ಛತೆ ನಿರ್ವಹಿಸುವುದು ಮಾಲಿಕರು ಅಥವಾ ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ. ಕೊಠಡಿಗಳಲ್ಲಿ ಹೆಚ್ಚು ಮಂದಿ ಇರುವುದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಸಾರ್ವಜನಿಕ ಆರೋಗ್ಯ ಮಾನದಂಡದ ಪ್ರಕಾರ 110 ಚದರ ಅಡಿ ಲಿವಿಂಗ್‌ ಸ್ಪೇಸ್‌ನಲ್ಲಿ ಇಬ್ಬರು ಮಾತ್ರ ಇರಬೇಕು ಎಂಬುದು ಸೇರಿದಂತೆ ಹಲವಾರು ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಈ ಎಲ್ಲವನ್ನು ನಿರ್ವಹಣೆ ಅಸಾಧ್ಯ ಎಂಬ ಕಾರಣಕ್ಕೆ ಅವಕಾಶ ನೀಡುತ್ತಿಲ್ಲ.

ಪಿಜಿ ಮತ್ತು ಹಾಸ್ಟಲ್‌ಗಳಿಗೆ ವಾಪಸ್‌ ಆಗುವವರನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ನಿರಾಕರಿಸಿದ ದೂರು ಕೇಳಿ ಬಂದರೆ ಅಂತಹ ಪಿಜಿಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ, ಪಿಜಿ ಮತ್ತು ಹಾಸ್ಟಲ್‌ಗಳಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಬೇಕು

- ವಿಜಯೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ

ಸೋಂಕು ತಡೆಗೆ 2 ತಿಂಗಳು ಸ್ವಯಂ ದಿಗ್ಬಂಧನ ಹಾಕಿದ ಗ್ರಾಮಸ್ಥರು

ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಹಾಸ್ಟಲ್‌ ಮತ್ತು ಪಿಜಿ ಆರಂಭಿಸುವುದಕ್ಕೆ ಅವಕಾಶ ನೀಡಿಲ್ಲ. ಹಾಗಾಗಿ, ಆರಂಭಿಸಿಲ್ಲ. ಸರ್ಕಾರದ ಆದೇಶ ಮೀರಿ ಹಾಸ್ಟಲ್‌, ಪಿಜಿ ಆರಂಭಿಸಿ ಏನಾದರೂ ಅನಾಹುತ ಉಂಟಾದರೆ ಪಿಜಿ ಮತ್ತು ಹಾಸ್ಟಲ್‌ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಿಜಿ ಬಂದ್‌ ಮಾಡಲಾಗಿದೆ.

-ಮೇಘನಾ, ಪಿಜಿ ಮಾಲಿಕರು, ಬಸವೇಶ್ವರ ನಗರ