ಸಕಲೇಶಪುರ(ಡಿ.10): ಮಾನವ ಮತ್ತು ಪ್ರಕೃತಿ ನಡುವಿನ ಹೋರಾಟ ಇಂದು ನಿನ್ನೆಯದಲ್ಲ. ದಿನ ಕಳೆದಂತೆ ಆಧುನಿಕತೆಗೆ ಮೈಯೊಡ್ಡಿದ ಮಾನವ, ತನ್ನ ಅನುಕೂಲತೆಗಾಗಿ ಆವಿಷ್ಕರಿಸಿದ ಎಲ್ಲವೂ ಪ್ರಕೃತಿಗೂ, ಮತ್ತು ಇತರ ಪ್ರಾಣಿ ಪಕ್ಷಿಗಳಿಗೂ ಹಾನಿಯನ್ನೇ ಉಂಟುಮಾಡಿವೆ.

ರೈಲು ನಿಜಕ್ಕೂ ಮಾನವ ಜನಾಂಗಕ್ಕೆ ಸಿಕ್ಕ ಅದ್ಭುತ ಕೊಡುಗೆ. ಆದರೆ ಅದೇ ರೈಲು ಆನೆಗಳನ್ನು ಬಲಿ ಪಡೆದಾಗ, ನಮ್ಮ ಆವಿಷ್ಕಾರ ಮತ್ತೊಬ್ಬರ ಜೀವವನ್ನೇ ಬಲಿಪಡೆಯುತ್ತಲ್ಲಾ ಅಂತಾ ನೋವಾಗುವುದು ಸುಳ್ಳಲ್ಲ.

ಹೌದು, ಸಕಲೇಶಪುರ ತಾಲೂಕಿನ ಕಾಕನಮನೆ ಬಳಿ ಇಂತದ್ದೇ ಘಟನೆಯೊಂದು ನಡೆದಿದ್ದು, ಆಹಾರ ಅರಸಿ ಕಾಡು ಬಿಟ್ಟು ನಾಡಿಗೆ ಬಂದ ಆನೆಯೊಂದು ರೈಲಿಗೆ ಸಿಲುಕಿ ಮೃತಪಟ್ಟಿದೆ.

ಕಾಕನಮನೆ ಗ್ರಾಮದ ರೈಲ್ವೇ ಕ್ರಾಸಿಂಗ್ ಬಳಿ ವೇಗವಾಗಿ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಆನೆಯೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಯ ಮೃತದೇಹವನ್ನು ಹಳಿಯಿಂದ ಎತ್ತುವ ಕಾರ್ಯ ಪೂರ್ಣಗೊಳಿಸಿದರು.

ಇನ್ನು ಆಲೂರು-ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಆಹಾರ ಅರಸಿ ನಾಡಿಗೆ ಬರುತ್ತಿರುವ ಆನೆಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಕಳೆದ ಜೂನ್‌ನಲ್ಲಿ ತಾಲೂಕಿನ ಯಡಕುಮರಿ ಗ್ರಾಮದಲ್ಲಿಯೂ ಆಹಾರ ಅರಸಿ ನಾಡಿಗೆ ಬಂದಿದ್ದ ಎರಡು ಮರಿ ಆನೆಗಳು ರೈಲಿಗೆ ಡಿಕ್ಕಿ ಹೊಡದು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.