Asianet Suvarna News Asianet Suvarna News

ಹೊಸ ವರ್ಷಕ್ಕೆ ಕರ್ನಾಟಕದ ಜನತೆಗೆ ಸಂತಸದ ಸುದ್ದಿ ನೀಡುತ್ತಾ ಬೊಮ್ಮಾಯಿ ಸರ್ಕಾರ?

ಯೂನಿಟ್‌ಗೆ 70 ಪೈಸೆಯಿಂದ 2 ರು.ವರೆಗೆ ಇಳಿಕೆ ಸಾಧ್ಯತೆ, ಗ್ರಾಹಕರ ಮೇಲಿನ ಹೊರೆ ಇಳಿಸಿ: ಸಚಿವ ಸುನೀಲ್‌ ಸೂಚನೆ,  ಗೃಹ ಬಳಕೆ ಜತೆ ವಾಣಿಜ್ಯ ಬಳಕೆಗೂ ದರ ಇಳಿಕೆ ಅನ್ವಯ, ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಬೆಲೆ ಇಳಿಕೆ ಮಂತ್ರ 

Electricity Tariff Reduction for the New Year in Karnataka grg
Author
First Published Dec 3, 2022, 10:45 AM IST

ಬೆಂಗಳೂರು(ಡಿ.03):  ಬೆಲೆ ಏರಿಕೆ ಜಮಾನಾ ನಡುವೆಯೇ ಹೊಸ ವರ್ಷದಲ್ಲಿ ರಾಜ್ಯದ ವಿದ್ಯುತ್‌ ಗ್ರಾಹಕರಿಗೆ ವಿದ್ಯುತ್‌ ದರ ಕಡಿತದ ಸಿಹಿ ಸುದ್ದಿ ನೀಡಲು ಇಂಧನ ಇಲಾಖೆ ಸಿದ್ಧತೆ ನಡೆಸಿದೆ. ಕಳೆದ ಆರು ತಿಂಗಳಲ್ಲಿ ಎರಡು ಬಾರಿ ವಿದ್ಯುತ್‌ ದರ ಹೆಚ್ಚಳ ಮಾಡಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದ ಇಲಾಖೆಯು ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ವಿದ್ಯುತ್‌ ದರ ಇಳಿಕೆಯತ್ತ ಗಮನ ಹರಿಸಿದೆ. ಈ ಸಂಬಂಧ ಬಳಕೆದಾರರ ಶುಲ್ಕ ಇಳಿಕೆ ಮಾಡುವ ಮೂಲಕ ಗ್ರಾಹಕರ ಮೇಲಿನ ಹೊರೆ ಇಳಿಕೆ ಮಾಡುವಂತೆ ಇಂಧನ ಸಚಿವ ವಿ. ಸುನೀಲ್‌ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಜನವರಿಯಿಂದ ಅನ್ವಯವಾಗುವಂತೆ ವಿದ್ಯುತ್‌ ಬಳಕೆ ಶುಲ್ಕ ಕಡಿಮೆ ಮಾಡುವ ಮೂಲಕ ಪ್ರತಿ ಯುನಿಟ್‌ಗೆ 70 ಪೈಸೆಯಿಂದ 2 ರು.ವರೆಗೆ ವಿದ್ಯುತ್‌ ದರ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದು ಕೇವಲ ಗೃಹ ಬಳಕೆ ಗ್ರಾಹಕರಿಗೆ ಸೀಮಿತವಲ್ಲ. ಎಚ್‌.ಟಿ., ಕೈಗಾರಿಕೆ, ವಾಣಿಜ್ಯ ಮತ್ತು ಎಲ್‌ಟಿ ಗ್ರಾಹಕರಿಗೂ ದರ ಇಳಿಕೆ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್‌ ಸಬ್ಸಿಡಿ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಗ್ರಿಡ್‌ ತೊರೆಯುತ್ತಿದ್ದರು. ಹೀಗಾಗಿ ಎಚ್‌.ಟಿ.ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕಾಗಿ ಕ್ರಾಸ್‌ ಸಬ್ಸಿಡಿಯನ್ನು ಸಡಿಲಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಪ್ರಸ್ತಾಪ ಸಲ್ಲಿಕೆಯಾಗಿದ್ದು, ಪ್ರತ್ಯೇಕ ಶುಲ್ಕ ಪದ್ಧತಿ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿರುವುದಾಗಿ ತಿಳಿದುಬಂದಿದೆ.

ಶನಿವಾರದಿಂದಲೇ ವಿದ್ಯುತ್‌ ದರ ಮತ್ತೆ ಏರಿಕೆ: 6 ತಿಂಗಳಲ್ಲಿ 2ನೇ ಬಾರಿ ದುಬಾರಿ

ಗ್ರಾಮೀಣ ಬಳಕೆಗಾರರಿಗೂ ರಿಯಾಯಿತಿ:

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟುರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 50 ಯುನಿಟ್‌ವರೆಗೆ ವಿದ್ಯುತ್‌ ಬಳಸುವ ಎಲ್‌ಟಿ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ವಿಧಿಸುತ್ತಿದ್ದ 4.15 ರು. ಶುಲ್ಕವನ್ನು 4.05 ರು.ಗೆ ಇಳಿಸಲು, 50 ರಿಂದ 200 ಯುನಿಟ್‌ವರೆಗಿನ ಬಳಕೆಗೆ ವಿಧಿಸುತ್ತಿದ್ದ ಎರಡು ಸ್ಲಾ್ಯಬ್‌ಗಳನ್ನು ಸರಾಸರಿ 5.4 ರು. (ಪ್ರತಿ ಯುನಿಟ್‌ಗೆ) ಮಾಡಲು ಚರ್ಚೆ ನಡೆಯುತ್ತಿದೆ. ಇದರಿಂದ ಪ್ರತಿ ಯುನಿಟ್‌ಗೆ ಸರಾಸರಿ 2 ರು.ವರೆಗೆ ವಿದ್ಯುತ್‌ ದರ ಇಳಿಕೆಯಾಗಲಿದೆ. 200 ಯುನಿಟ್‌ ಹಾಗೂ ಅದಕ್ಕಿಂತ ಹೆಚ್ಚಿನ ಬಳಕೆದಾರರಿಗೆ ಈಗಿರುವ 7.70 ರು. ಹಾಗೂ 8.20 ರು.ಗಳನ್ನು 7 ರು.ಗೆ ಇಳಿಸಲು ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ.

ಬಳಕೆದಾರರ ಶುಲ್ಕ ಇಳಿಕೆಗೆ ಕ್ರಮ: ಸಚಿವ ಸುನೀಲ್‌

ದರ ಇಳಿಕೆ ಸಂಬಂಧ ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಪತ್ರಿಕಾ ಹೇಳಿಕೆ ನೀಡಿದ್ದು, ‘ಈ ಬಾರಿ ವಿದ್ಯುತ್‌ ಶುಲ್ಕ ಪರಿಷ್ಕರಣೆ ವೇಳೆ ಜನಪರ ನಿಲುವು ತೆಗೆದುಕೊಳ್ಳಲು ಸೂಚಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸಾಕಷ್ಟು ಪೂರ್ವ ತಯಾರಿ ನಡೆಯುತ್ತಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಗ್ರಾಹಕ ಸ್ನೇಹಿ ದರ ನಿಗದಿಗೆ ಯತ್ನ ನಡೆಸಲಾಗುವುದು. ಬಳಕೆದಾರರ ಶುಲ್ಕ ಇಳಿಕೆ ಮಾಡುವ ಮೂಲಕ ಗ್ರಾಹಕರಿಗೆ ಹೊರೆ ಕಡಿಮೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios