ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿ ಸ್ಥಗಿತ: ನಾಲ್ಕು ತಿಂಗಳಾದರೂ ಪುನಾರಂಭ ಇಲ್ಲ!
ಗೃಹಜ್ಯೋತಿ ಯೋಜನೆಗೆ ಅರ್ಜಿಗಳ ಮಹಾಪೂರ ಹರಿದು ಬರುತ್ತಿದೆ. ಇದರ ಮಧ್ಯೆಯೇ ಹೆಸ್ಕಾಂ ವಿದ್ಯುತ್ ಬಿಲ್‌ನ್ನು ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳಿಂದ ಪಾವತಿಸುವ ವ್ಯವಸ್ಥೆ ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದೆ. ಸುಲಭವಾಗಿ ಬಿಲ್ ಪಾವತಿ ಮಾಡುವ ಮಾರ್ಗ ಬಂದ್ ಆಗಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜೂ.29) : ಗೃಹಜ್ಯೋತಿ ಯೋಜನೆಗೆ ಅರ್ಜಿಗಳ ಮಹಾಪೂರ ಹರಿದು ಬರುತ್ತಿದೆ. ಇದರ ಮಧ್ಯೆಯೇ ಹೆಸ್ಕಾಂ ವಿದ್ಯುತ್ ಬಿಲ್‌ನ್ನು ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳಿಂದ ಪಾವತಿಸುವ ವ್ಯವಸ್ಥೆ ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದೆ. ಸುಲಭವಾಗಿ ಬಿಲ್ ಪಾವತಿ ಮಾಡುವ ಮಾರ್ಗ ಬಂದ್ ಆಗಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ.
ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಸೇರಿದಂತೆ ವಿವಿಧ ಆನ್‌ಲೈನ್ ಪೇಮೆಂಟ್ ಆ್ಯಪಗಳಿಂದ ಗ್ರಾಹಕರು ತಾವಿದ್ದ ಸ್ಥಳದಿಂದ ಕ್ಷಣಾರ್ಧದಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಏಪ್ರಿಲ್ ತಿಂಗಳಿನಿಂದಲೇ ಈ ಆ್ಯಪ್‌ಗಳಲ್ಲಿ ಬಿಲ್ ಪಾವತಿ ಸಾಧ್ಯವಾಗುತ್ತಿಲ್ಲ.
ಹೆಸ್ಕಾಂ ಸಿಬ್ಬಂದಿಗೆ ಗ್ರಾಮದೊಳಗೆ ಬಹಿಷ್ಕಾರ; ಶಿಡೇನೂರು ಗ್ರಾಮಸ್ಥರಿಂದ ಎಚ್ಚರಿಕೆ ಬ್ಯಾನರ್!
ವಿದ್ಯುತ್ ಬಿಲ್ ಪಾವತಿಸುವುದಕ್ಕಾಗಿ ಹುಬ್ಬಳ್ಳಿ-ಧಾರವಾಡ ಒನ್ ಸೆಂಟರ್ ಅಥವಾ ಹೆಸ್ಕಾಂ ಕಚೇರಿಗೆ ಹೋಗಿ ಸರದಿಯಲ್ಲಿ ನಿಂತು ಪಾವತಿಸಬೇಕು. ಇಲ್ಲವೇ ಹೆಸ್ಕಾಂ ಸಿಬ್ಬಂದಿ ತಮ್ಮ ಮನೆಗಳಿಗೆ ಬರುವವರೆಗೂ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯಿಂದ ಅಲೆದಾಡುವ ಕಾಟ ತಪ್ಪಲಿದೆ. ಹೆಸ್ಕಾಂನವರು ಕೂಡಲೇ ಆನ್‌ಲೈನ್ ಪೇಮೆಂಟ್ ಶುರು ಮಾಡಬೇಕು ಎಂದ ಗ್ರಾಹಕರು ಒತ್ತಾಯಿಸುತ್ತಿದ್ದಾರೆ.
ಒಪ್ಪಂದ ಮುಕ್ತಾಯ:
ಈ ಮೊದಲು ಬ್ಯಾಂಕ್ ಆಫ್ ಬರೋಡಾ ಜೊತೆಗೆ ಹೆಸ್ಕಾಂ ನಿಗದಿತ ಅವಧಿಗೆ ಒಪ್ಪಂದ ಮಾಡಿಕೊಂಡು ಆನ್‌ಲೈನ್ ಬಿಲ್ ಪಾವತಿಗೆ ಅವಕಾಶ ಕಲ್ಪಿಸಿತ್ತು. ಆದರೆ, ಒಪ್ಪಂದದ ಅವಧಿ ಅಂತ್ಯಗೊಂಡಿದೆ. ಬಳಿಕ ಚುನಾವಣಾ ನೀತಿ ಸಂಹಿತೆ ಬಂದ ಕಾರಣ ಟೆಂಡರ್ ಕರೆಯಲು ಆಗಿರಲಿಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ತಿಂಗಳಿಂದ ಆನ್‌ಲೈನ್ ಆ್ಯಪ್‌ಗಳ ಮೂಲಕ ಪೇಮೆಂಟ್ ಸ್ಥಗಿತಗೊಂಡಿದೆ. ಬ್ಯಾಂಕ್ ತನ್ನ ಒಪ್ಪಂದ ವಿಸ್ತರಿಸಲು ಆಸಕ್ತಿ ತೋರಲಿಲ್ಲ ಎಂದು ಹೆಸ್ಕಾಂ ತಿಳಿಸುತ್ತದೆ.
ಇದೀಗ ನೀತಿ ಸಂಹಿತೆಯೂ ಇಲ್ಲ. ಹೀಗಾಗಿ ಮತ್ತೆ ಟೆಂಡರ್ ಕರೆದು ಬೇರೆ ಏಜೆನ್ಸಿಗೆ ಕೊಡಲಾಗಿದೆಯಂತೆ. ಶೀಘ್ರದಲ್ಲೇ ಮತ್ತೆ ಆ್ಯಪ್‌ಗಳ ಮೂಲಕ ಪೇಮೆಂಟ್ ಮಾಡುವ ಸೌಲಭ್ಯ ಲಭ್ಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ವರ್ಗ ತಿಳಿಸುತ್ತದೆ.
ಈಗಿನ ಏಜೆನ್ಸಿಗೂ ಹಾನಿ?
ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹೀಗೆ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಹೆಸ್ಕಾಂನಲ್ಲಿ ಬರೋಬ್ಬರಿ 55 ಲಕ್ಷಕ್ಕೂ ಅಧಿಕ ಗ್ರಾಹಕರಿದ್ದಾರೆ. ಇದರಲ್ಲಿ 38ರಿಂದ 40 ಲಕ್ಷ ಜನರು ಗೃಹ ಬಳಕೆದಾರರಿದ್ದಾರೆ. ಇವರೆಲ್ಲರೂ ಇದೀಗ ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸುಮಾರು 14 ಲಕ್ಷವರೆಗೆ ಗ್ರಾಹಕರು ಇದರಡಿ ಹೆಸರು ನೋಂದಾಯಿಸಿಕೊಂಡಿದ್ದುಂಟು. ಸರಿಸುಮಾರು 40 ಲಕ್ಷ ಗ್ರಾಹಕರು ಮುಂದಿನ ತಿಂಗಳಷ್ಟೇ ಬಿಲ್ ಪಾವತಿಸುವುದು. ಆಗಸ್ಟ್‌ನಿಂದ ಇವರು ಪಾವತಿಸುವುದಿಲ್ಲ. ಸರ್ಕಾರವೇ ಉಚಿತ ವಿದ್ಯುತ್ ಪೂರೈಕೆ ಮಾಡಲಿದೆ.
ಇನ್ನುಳಿದ 15 ಲಕ್ಷ ಗ್ರಾಹಕರು ಸಣ್ಣ ಕೈಗಾರಿಕೆಗಳು, ವಾಣಿಜ್ಯ ಕೇಂದ್ರ ಹೊಂದಿರುವಂತಹ ಗ್ರಾಹಕರು. ಇವರ ಬಿಲ್‌ಗಳು ಸಾವಿರಗಟ್ಟಲೇ ಇರುತ್ತದೆ. ಹೀಗಾಗಿ ಸಹಜವಾಗಿ ಇವರು ಆ್ಯಪ್‌ಗಳ ಮೂಲಕ ಬಿಲ್ ಪಾವತಿಗೆ ಮುಂದಾಗುವುದಿಲ್ಲ. ಹೆಸ್ಕಾಂ ಕಚೇರಿಗಳಿಗೆ ಆಗಮಿಸಿಯೇ ಬಿಲ್ ಪಾವತಿಸುವವರ ಸಂಖ್ಯೆಯೇ ಜಾಸ್ತಿ. ಹೀಗಾಗಿ ಹೊಸ ಏಜೆನ್ಸಿ ನಷ್ಟಅನುಭವಿಸುವ ಸಾಧ್ಯತೆ ಇದೆ.
ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳ ಮೂಲಕ ಪೇಮೆಂಟ್ ಪ್ರಾರಂಭಕ್ಕೆ ಹೆಸ್ಕಾಂ ಮತ್ತೆ ಕ್ರಮ ಕೈಗೊಂಡಿದ್ದು, ಗೃಹಜ್ಯೋತಿ ಯೋಜನೆ ಪ್ರಾರಂಭವಾದ ಬಳಿಕ ಇದು ಎಷ್ಟರ ಮಟ್ಟಿಗೆ ಬಳಕೆಯಾಗುತ್ತದೆ? ಒಪ್ಪಂದ ಮಾಡಿಕೊಂಡಿರುವ ಏಜೆನ್ಸಿಗೆ ಇದರಿಂದ ಯಾವ ರೀತಿ ಲಾಭವಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ ಎನ್ನುವುದು ಹೆಸ್ಕಾಂ ಅಧಿಕಾರಿಗಳÜ ಅಂಬೋಣ..
ಗೃಹಜ್ಯೋತಿ ಜಾರಿಗೂ ಮುನ್ನ ವಿದ್ಯುತ್ ಬೆಲೆ ಏರಿಕೆ ಶಾಕ್! ಬಿಲ್ ದುಪ್ಪಟ್ಟು ಬರಲು ಇಲ್ಲಿದೆ ಕಾರಣ
ಒಪ್ಪಂದ ಮುಕ್ತಾಯವಾಗಿದ್ದರಿಂದ ಆ್ಯಪ್‌ಗಳ ಮೂಲಕ ಪೇಮೆಂಟ್ ಸ್ಥಗಿತವಾಗಿತ್ತು. ಇದೀಗ ಹೊಸ ಏಜೆನ್ಸಿಗೆ ಜವಾಬ್ದಾರಿ ನೀಡಲಾಗಿದೆ. ಶೀಘ್ರದಲ್ಲೇ ಪ್ರಾರಂಭವಾಗಲಿದೆ.
- ಜಗದೀಶ ಬೆಳಗಲಿ, ಕಾರ್ಯನಿರ್ವಾಹಕ ಎಂಜಿನಿಯರ್, ಮಾಹಿತಿ ತಂತ್ರಜ್ಞಾನ ವಿಭಾಗ, ಹೆಸ್ಕಾಂ