Asianet Suvarna News Asianet Suvarna News

Mangaluru: ಮೀನುಗಾರಿಕಾ ಬಂದರಿನಲ್ಲಿ 'Eid' ಬ್ಯಾನರ್ ವಿವಾದ: ವ್ಯಾಪಾರ ಬಹಿಷ್ಕಾರದ ಎಚ್ಚರಿಕೆ!

ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅಳವಡಿಸಲಾದ ಬ್ಯಾನರ್ ಒಂದು ಭಾರೀ ವಿವಾದ ಸೃಷ್ಟಿಸಿದ್ದು, 'ಈದ್ ಮಿಲಾದ್' ರಜೆಯ ಹೆಸರಿನಲ್ಲಿ ಷರತ್ತುಗಳನ್ನು ವಿಧಿಸಿ ಬಹಿಷ್ಕಾರದ ಮಾದರಿಯಲ್ಲಿ ಎಚ್ಚರಿಕೆ ನೀಡಿರುವುದು ಇದೀಗ ಭಾರೀ ಗೊಂದಲಕ್ಕೆ ಕಾರಣವಾಗಿದೆ. ‌

Eid Banner Controversy at Fishing Port at Mangaluru gvd
Author
First Published Sep 25, 2023, 11:41 AM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಸೆ.25): ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅಳವಡಿಸಲಾದ ಬ್ಯಾನರ್ ಒಂದು ಭಾರೀ ವಿವಾದ ಸೃಷ್ಟಿಸಿದ್ದು, 'ಈದ್ ಮಿಲಾದ್' ರಜೆಯ ಹೆಸರಿನಲ್ಲಿ ಷರತ್ತುಗಳನ್ನು ವಿಧಿಸಿ ಬಹಿಷ್ಕಾರದ ಮಾದರಿಯಲ್ಲಿ ಎಚ್ಚರಿಕೆ ನೀಡಿರುವುದು ಇದೀಗ ಭಾರೀ ಗೊಂದಲಕ್ಕೆ ಕಾರಣವಾಗಿದೆ. ‌

ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಿನಲ್ಲಿ ಹಾಕಲಾದ ಬ್ಯಾನರ್ ಬಗ್ಗೆ ಅಪಸ್ವರ ಕೇಳಿ ಬಂದಿದ್ದು, ಈದ್ ಮಿಲಾದ್ ರಜೆ ದಿನ ಕಡ್ಡಾಯವಾಗಿ ಮೀನು ವ್ಯಾಪಾರ ಬಂದ್ ಗೆ ಸೂಚನೆ ನೀಡಿ ಬ್ಯಾನರ್ ಹಾಕಲಾಗಿದೆ. ಸೆ.28ರಂದು ಇಡೀ‌ ದಿನ ಮೀನು ವ್ಯಾಪಾರ ಮಾಡದಂತೆ ಸೂಚಿಸಿ ಬ್ಯಾನರ್ ಅಳವಡಿಕೆ ಮಾಡಿದ್ದು, ಮೀನು ವ್ಯಾಪಾರ ಮಾಡದೇ ಕಡ್ಡಾಯ ರಜೆ ಮಾಡುವಂತೆ ಸೂಚಿಸಲಾಗಿದೆ‌. ನಿಯಮ ಉಲ್ಲಂಘಿಸಿದ್ರೆ ಒಂದು ತಿಂಗಳು ಬಂದರಿನಲ್ಲಿ ವ್ಯಾಪಾರ ಬಹಿಷ್ಕಾರ ಮಾಡುವ ಎಚ್ಚರಿಕೆ ಜೊತೆಗೆ ಸಂಘದ ಸಹಕಾರದಿಂದ ವಂಚಿತರಾಗಬೇಕಾಗುತ್ತದೆ ಅಂತ ಎಚ್ಚರಿಕೆ ಬ್ಯಾನರ್ ಹಾಕಲಾಗಿದೆ. ಹಿಂದೂ ಮತ್ತು ಮುಸ್ಲಿಂ ಮೀನು ವ್ಯಾಪಾರಿಗಳ ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಿನಲ್ಲಿ ಬ್ಯಾನರ್ ಅಳವಡಿಕೆ ಆಗಿದೆ. 

ವರ್ಷಕ್ಕೆ ಎಂಟು ಹಬ್ಬದ ದಿನ ಕಡ್ಡಾಯ ರಜೆ ಘೋಷಿಸುವ ಸಂಘ, ಈ ಬಾರಿ ಬ್ಯಾನರ್ ಅಳವಡಿಸಿ ಭಾರೀ ವಿವಾದ ಸೃಷ್ಟಿಸಿದೆ. ಸಾಮಾಜಿಕ ತಾಣಗಳಲ್ಲಿ ಬ್ಯಾನರ್ ವೈರಲ್ ಬೆನ್ನಲ್ಲೇ ಭಾರೀ ಅಪಸ್ವರ ಕೇಳಿ ಬಂದಿದ್ದು,'ಧಕ್ಕೆಯಲ್ಲಿ ದಂಡನೆ ವಿಧಿಸಲು ಶರಿಯತ್ ಕಾನೂನು ಜಾರಿಯಲ್ಲಿದೆಯಾ? ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅಕ್ರೋಶ ಹೊರ ಹಾಕಿದ್ದಾರೆ. ಇವರ ಬೆದರಿಕೆಯ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮೊಂದಿಗೆ ಇಡೀ ಹಿಂದೂ ಸಮಾಜ ಇದೆ' ಎಂದು ಶರಣ್ ಪಂಪ್ ವೆಲ್ ಪೋಸ್ಟ್ ಮಾಡಿದ್ದಾರೆ. ವ್ಯಾಪಾರ ಬಹಿಷ್ಕಾರದ ಬ್ಯಾನರ್ ವಿರುದ್ದ ವಿಎಚ್ ಪಿ-ಭಜರಂಗದಳ ಗರಂ ಆಗಿದೆ. ಬ್ಯಾನರ್ ಅಳವಡಿಸಿದವರ ವಿರುದ್ದ ಕಾನೂನು ಕ್ರಮಕ್ಕೆ ವಿಎಚ್ ಪಿ ಒತ್ತಾಯಿಸಿದೆ. 

ಮುಸ್ಲಿಮರು ಮತ ಹಾಕಿಲ್ಲವೆಂದು ಎಚ್‌ಡಿಕೆ ಎದೆಮುಟ್ಟಿ ಹೇಳ್ತಾರಾ?: ಸಚಿವ ಜಮೀರ್

ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ವಿಎಚ್ ಪಿ‌ ಮುಖಂಡ ಪ್ರದೀಪ್ ಸರಿಪಲ್ಲ ಹೇಳಿಕೆ ನೀಡಿದ್ದು, ಸರ್ಕಾರದ ಸುಪರ್ದಿಯಲ್ಲಿರುವ ಬಂದರಿನಲ್ಲಿ ಬ್ಯಾನರ್ ಹಾಕಿದ್ದಾರೆ. ನಿಯಮ ಉಲ್ಲಂಘಿಸಿದ್ರೆ ವ್ಯಾಪಾರ ಬಹಿಷ್ಕಾರದ ಎಚ್ಚರಿಕೆ ಕೊಟ್ಟಿದ್ದಾರೆ. ಈದ್ ಹಬ್ಬದ ಹೆಸರಿನಲ್ಲಿ ಹಿಂದೂ ವ್ಯಾಪಾರಿಗಳನ್ನ ಟಾರ್ಗೆಟ್ ಮಾಡಲಾಗಿದೆ.‌ ಚೌತಿಗೂ ಇದೆ ನಿಯಮ ಅನ್ವಯ ಅಂತಾದ್ರೆ‌ ಆವತ್ತು ಬ್ಯಾನರ್ ಯಾಕೆ ಹಾಕಿಲ್ಲ? ಈಗ ಇವರ ಹಬ್ಬಕ್ಕೆ ಬ್ಯಾನರ್ ಹಾಕುವ ಮೂಲಕ ಸರ್ವಾಧಿಕಾರಿ ಧೋರಣೆ. ಯಾರೂ ವ್ಯಾಪಾರ ಮಾಡಬಾರದು ಅಂತ ಬಹಿರಂಗವಾಗಿ ಹೇಳಲು ಇವರ್ಯಾರು. ಅದು ಸರ್ಕಾರಿ ಜಾಗ, ಅಲ್ಲಿ ಯಾರು ಬೇಕಾದರೂ ವ್ಯಾಪಾರ ಮಾಡಬಹುದು.‌ ಶರೀಯತ್ ಕಾನೂನಿನ ಮಾದರಿಯಲ್ಲಿ ಹೇರಿಕೆ ಮಾಡುವ ಕೆಲಸ ಆಗ್ತಿದೆ. ಸಂವಿಧಾನ ವಿರೋಧಿಯಾಗಿ ಮುಸ್ಲಿಂ ವ್ಯಾಪಾರಿಗಳು ವರ್ತಿಸ್ತಾ ಇದಾರೆ‌. ತಕ್ಷಣ ಪೊಲೀಸ್ ಇಲಾಖೆ ಬ್ಯಾನರ್ ತೆರವು ಮಾಡಿ‌ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.

ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಹಬ್ಬಕ್ಕೆ ರಜೆ ತೆಗೋತಿವಿ: ಬ್ಯಾನರ್ ಅಳವಡಿಕೆ ಬಗ್ಗೆ ಬಂದರು ಮೀನುಗಾರ ಸಂಘದ ಮುಖಂಡ ಅಶ್ರಫ್ ಹೇಳಿಕೆ ನೀಡಿದ್ದು, ಬ್ಯಾನರ್ ಹೊಸತಲ್ಲ, ಹಲವು ವರ್ಷಗಳಿಂದ ನಾವು ಬ್ಯಾನರ್ ಹಾಕ್ತಾ ಇದ್ದೆವು. ಇಲ್ಲಿನ ಎಲ್ಲಾ ವ್ಯಾಪಾರಸ್ಥರು ಒಟ್ಟಾಗಿ ಹಬ್ಬ ಆಚರಿಸ್ತಾ ಇದೀವಿ. ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಹಬ್ಬಕ್ಕೆ ರಜೆ ತೆಗೋತಿವಿ ಎಂದಿದ್ದಾರೆ. ಹಿಂದೂಗಳ ಮತ್ತು ಮುಸ್ಲಿಮರ ಹಬ್ಬಕ್ಕೆ ತಲಾ ಮೂರು ಹಾಗೂ ಕ್ರೈಸ್ತರ ಹಬ್ಬಕ್ಕೆ ಎರಡು ರಜೆ ತೆಗೋತಿವಿ. ಈ ಎಂಟು ರಜೆಯನ್ನ ಕಡ್ಡಾಯವಾಗಿ ಎಲ್ಲರೂ ಪಾಲನೆ ಮಾಡಲೇಬೇಕು.‌ಅ ರಜೆ ದಿನ ಯಾರೂ ಒಂದು ಬಾಕ್ಸ್ ಮೀನು ಕೂಡ ತೆಗೆಯಲು ಅವಕಾಶ ಇಲ್ಲ.‌ ಕೆಲವರು ಕದ್ದುಮುಚ್ಚಿ ರಜೆ ದಿನವೂ ರಾತ್ರಿ ವ್ಯಾಪಾರ ಮಾಡ್ತಾರೆ.‌ ಮೊನ್ನೆ ಚೌತಿ ದಿನ ರಜೆ ಇದ್ದರೂ ಕೆಲವರು ವ್ಯಾಪಾರ ಮಾಡಿದ್ದಾರೆ.‌ ಹೀಗಾಗಿ ಕಡ್ಡಾಯ ಪಾಲನೆಗೆ ನಾವು ಬ್ಯಾನರ್‌ ಹಾಕಿದ್ದೇವೆ. ಎಲ್ಲರೂ ಅವರ ಯೂನಿಯನ್ ಸದಸ್ಯರು, ಅದಕ್ಕೆ ದುಡ್ಡು ಕಟ್ತಾರೆ. ಹೀಗಾಗಿ ನಿಯಮ ಉಲ್ಲಂಘಿಸಿದ್ರೆ ದಂಡ ಪಾವತಿಸಲೇ ಬೇಕು. ಅದೊಂದು ಇಲ್ಲಿನ ಸಂಘಟನೆಯ ಶಿಸ್ತಿನ ನಿಯಮ. ಹಿಂದೂ ಸಂಘಟನೆಗಳಿಗೆ ಗೊಂದಲ‌ ಮೂಡಿಸೋದೇ ಅವರ ಕೆಲಸ. ಇಲ್ಲಿ ಎಲ್ಲಾ ಜಾತಿ ಧರ್ಮದವರು ಒಟ್ಟಾಗಿಯೇ‌ ಇದ್ದಾರೆ. ನಾವು ವ್ಯಾಪಾರಿಗಳು ಮೊದಲಿನಿಂದಲೂ ಒಟ್ಟಾಗಿಯೇ ಇದ್ದೇವೆ ಎಂದಿದ್ದಾರೆ.

ಬಿಎಸ್‌ವೈ ಭೇಟಿಯಾಗಿ ಆಶೀರ್ವಾದ ಪಡೆದ ನಿಖಿಲ್‌ ಕುಮಾರಸ್ವಾಮಿ: ಮಹತ್ವದ ಮಾತುಕತೆ

ಚೌತಿ ಹಬ್ಬಕ್ಕೆ ನಿಯಮ ಇದ್ದರೂ ನಮ್ಮ‌ವರು ಮೀನು ತೆಗೆದಿದ್ದಾರೆ: ವಿವಾದದ ಬಗ್ಗೆ ಹಸಿ ಮೀನುಗಾರರ ಸಂಘದ ಅಧ್ಯಕ್ಷ ಇಸ್ಮಾಯಿಲ್ ಹೇಳಿಕೆ ನೀಡಿದ್ದಾರೆ. ಚೌತಿ ಹಬ್ಬಕ್ಕೆ ನಿಯಮ ಇದ್ದರೂ ನಮ್ಮ‌ವರು ಮೀನು ತೆಗೆದಿದ್ದಾರೆ. ಹಾಗಾಗಿ ಎಲ್ಲರೂ ನಿಯಮ ಪಾಲಿಸಲಿ ಅಂತ ಬ್ಯಾನರ್ ಹಾಕಿದ್ದು. ಇದರಲ್ಲಿ ಜಾತಿ ಧರ್ಮ ಅಂತ ಏನೂ ಇಲ್ಲಿ ಇಲ್ಲ. ನಾವು ನಿಯಮ‌ ಉಲ್ಲಂಘಿಸಿದ್ರೆ ಇಲ್ಲಿಗೆ ಬರಬೇಡಿ ಅಂದಿಲ್ಲ. ಇಲ್ಲಿಗೆ ಬನ್ನಿ, ಆದರೆ ನಿಯಮ ಉಲ್ಲಂಘಿಸಿ ದವರು ಯಾರೂ ವ್ಯಾಪಾರ ಮಾಡಬೇಡಿ. ಮೊನ್ನೆ ಚೌತಿಗೆ ಮೀನು ತೆಗೆದ ಕಾರಣ ಬ್ಯಾನರ್ ಹಾಕಿ ಎಚ್ಚರಿಕೆ ನೀಡಲಾಗಿದೆ. ಈ ಹಿಂದೆ ರಜೆ ಇದೆ ಅಂತ ಬ್ಯಾನರ್ ಹಾಕ್ತಾ ಇದ್ದೆವು, ಆದರೆ ಈ ಬಾರಿ ಕಂಡೀಷನ್ ಹಾಕಿದ್ದೇವೆ.‌ ನಾನು ಮೊದಲೇ ಎಲ್ಲರಿಗೂ ಬಂದ್ ಮಾಡಿ ಅಂತ ಹೇಳಿದ್ದೆವು.‌ ಆದರೂ ಕೆಲವರು ಚೌತಿಗೆ ಮೀನು ತೆಗೆದು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಬ್ಯಾನರ್ ಹಾಕಿ ಎಚ್ಚರಿಕೆ ನೀಡಲಾಗಿದೆ. ಇದರಲ್ಲಿ ಯಾವುದೇ ಜಾತಿ ಭಾವನೆ ಇಲ್ಲ, ನಾವೆಲ್ಲ ಒಟ್ಟಾಗಿಯೇ ಇದ್ದೇವೆ ಎಂದಿದ್ದಾರೆ.

Follow Us:
Download App:
  • android
  • ios