ಗೃಹ ಸಚಿವ ಪರಮೇಶ್ವರ್ ಒಡೆತನದ ತುಮಕೂರಿನ ಎಸ್.ಎಸ್.ಐ.ಟಿ ಇಂಜಿನಿಯರಿಂಗ್ ಕಾಲೇಜು ಮತ್ತು ಸಿದ್ಧಾರ್ಥ ವೈದ್ಯಕೀಯ ಕಾಲೇಜುಗಳ ಮೇಲೆ ಇ.ಡಿ. ದಾಳಿ ನಡೆಸಿದೆ. ಆರ್ಥಿಕ ಅಕ್ರಮದ ಶಂಕೆಯ ಮೇಲೆ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ದಾಳಿಯ ನಿಖರ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.

ತುಮಕೂರು (ಮೇ 21): ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇನ್‌ಫೋರ್ಸ್ಮೆಂಟ್ ಡೈರೆಕ್ಟೊರೇಟ್ (ಇಡಿ) ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

ಇಡಿಯು ದಾಳಿ ನಡೆಸಿರುವ ಸಂಸ್ಥೆಗಳು:
ಎಸ್.ಎಸ್.ಐ.ಟಿ (SSIT) ಇಂಜಿನಿಯರಿಂಗ್ ಕಾಲೇಜು, ತುಮಕೂರು
ಸಿದ್ಧಾರ್ಥ ಮೆಡಿಕಲ್ ಕಾಲೇಜು, ತುಮಕೂರಿನ ಹೆಗ್ಗೆರೆ ಬಳಿಯಲ್ಲಿದೆ

ಇಂದು (ಮೇ 21) ಬೆಳಗ್ಗೆಯಿಂದಲೇ ಇಡಿ ಅಧಿಕಾರಿಗಳು ಈ ಸಂಸ್ಥೆಗಳಿಗೆ ಆಗಮಿಸಿ ಪರಿಶೀಲನೆ ಪ್ರಕ್ರಿಯೆ ಆರಂಭಿಸಿದ್ದಾರೆ. ಕಾಲೇಜು ಆವರಣದಲ್ಲಿ ದಾಖಲೆಪತ್ರಗಳ ಪರಿಶೀಲನೆ ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ದಾಳಿಯ ಸತ್ಯಾಸತ್ಯತೆ ಹಾಗೂ ಕಾರಣಗಳು ಇನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ.

ಇಡಿ ದಾಳಿ ಹಿನ್ನೆಲೆ:
ಡಾ. ಜಿ. ಪರಮೇಶ್ವರ್ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ದಾಳಿಯನ್ನು ಅಕ್ರಮವಾಗಿ ಹಣಕಾಸು ವ್ಯವಹಾರ ಹಾಗೂ ಆಸ್ತಿ ವಿಚಾರವಾಗಿ ನಡೆದಿರುವ ಸಾಧ್ಯತೆ ಇದೆ.

ಕಳೆದ 3 ವರ್ಷಗಳ ಹಿಂದೆ ಐಟಿ ದಾಳಿ ಮಾಡಲಾಗಿತ್ತು. ಇದೀಗ ಪುನಃ ಇಡಿ ದಾಳಿಯನ್ನು ಮಾಡಲಾಗಿದೆ. ಒಟ್ಟು 30 ಇಡಿ ಅಧಿಕಾರಿಗಳು ದಾಳಿ ಮಾಡಿ, ಎಲ್ಲ ಬಾಗಿಲುಗಳನ್ನು ಕ್ಲೋಸ್ ಮಾಡಿಕೊಂಡು ಯಾರನ್ನೂ ಒಳಗೆ ಬಿಟ್ಟುಕೊಳ್ಳದಂತೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಕಾಲೇಜಿನ ಹಣಕಾಸು ವ್ಯವಹಾರಗಳು ಹಾಗೂ ಕಾಲೇಜು ದಾಖಲಾತಿಯಲ್ಲಿ ಏನಾದರೂ ವ್ಯತ್ಯಾಸ ಆಗಿರಬಹುದು ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ತಿಳಿದುಬಂದಿದೆ.