ನವದೆಹಲಿ (ಡಿ.04):  ಅಕ್ರಮ ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಬೆಂಗಳೂರು ಸೇರಿದಂತೆ 26 ಕಡೆ ಏಕಕಾಲಕ್ಕೆ ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ನಡೆಸಿದೆ. ತಮಿಳುನಾಡು, ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ, ದೆಹಲಿ, ಕೇರಳದ ವಿವಿಧೆಡೆ ದಾಳಿ ನಡೆದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪಿಎಫ್‌ಐನ ಬ್ಯಾಂಕ್‌ ಖಾತೆಗಳಿಗೆ 120 ಕೋಟಿ ರು. ಹಣ ಸಂದಾಯವಾಗಿದ್ದು, ಅದರ ಮೂಲಗಳನ್ನು ಇ.ಡಿ. ಜಾಲಾಡುತ್ತಿದೆ.

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆ ನಡೆದ ದಂಗೆಯಲ್ಲಿ ಪಿಎಫ್‌ಐ ಪಾತ್ರವಿದೆ ಮತ್ತು ಆ ದಂಗೆ ನಡೆಸಲು ಪಿಎಫ್‌ಐ-ಭೀಮ್‌ ಆರ್ಮಿ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ನಡೆದಿದೆ ಎಂಬುದೂ ಸೇರಿದಂತೆ ಪಿಎಫ್‌ಐ ವಿರುದ್ಧ ಇರುವ ಹಲವಾರು ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಇ.ಡಿ. ಒಟ್ಟಿಗೇ ತನಿಖೆ ನಡೆಸುತ್ತಿದೆ. ಆ ತನಿಖೆಗೆ ಸಾಕ್ಷ್ಯ ಕಲೆಹಾಕಲು ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವ ರೋಷನ್ ಬೇಗ್ ಅರೆಸ್ಟ್

ಪಿಎಫ್‌ಐ ಸಂಘಟನೆಯ ಅಧ್ಯಕ್ಷ ಒ.ಎಂ.ಅಬ್ದುಲ್‌ ಸಲಾಮ್‌ಗೆ ಸೇರಿದ ದೆಹಲಿ ಕಚೇರಿ, ಕೇರಳ ಘಟಕದ ಅಧ್ಯಕ್ಷ ನಾಸಿರುದ್ದೀನ್‌ ಏಳಮರಮ್‌ ಕಚೇರಿ ಹಾಗೂ ಬೆಂಗಳೂರಿನಲ್ಲಿರುವ ಪಿಎಫ್‌ಐ ಕಚೇರಿ ಸೇರಿದಂತೆ 26 ಕಡೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇ.ಡಿ. ದಾಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಪಿಎಫ್‌ಐ, ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನರ ಗಮನ ಬೇರೆಡೆ ಸೆಳೆಯುವ ದುರುದ್ದೇಶದಿಂದ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

2006ರಲ್ಲಿ ಕೇರಳದಲ್ಲಿ ಆರಂಭವಾದ ಪಿಎಫ್‌ಐ ಸಂಘಟನೆ ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿದೆ. ಸಿಎಎ-ವಿರೋಧಿ ಪ್ರತಿಭಟನೆ ಮತ್ತು ಆ ವೇಳೆ ನಡೆದ ದಂಗೆಗೆ ಹಣ ಪೂರೈಸಲು ಪಿಎಫ್‌ಐ ಮತ್ತು ಭೀಮ್‌ ಆರ್ಮಿ ನಡುವೆ ಅಕ್ರಮ ಹಣದ ವರ್ಗಾವಣೆ ನಡೆದಿದ್ದು, ಆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಇ.ಡಿ. ಕಳೆದ ತಿಂಗಳು ಹೇಳಿತ್ತು.