ಬೆಂಗಳೂರು(ಫೆ.24): ಕೋವಿಡ್‌ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಬಾರಿ ಮಾಚ್‌ರ್‍ 8ರಂದು ಎಂದಿನಂತೆ ರಾಜ್ಯದ ಬಜೆಟ್‌ ಮಂಡಿಸಲು ಸಜ್ಜಾಗಿದ್ದಾರೆ.

ಲಾಕ್‌ಡೌನ್‌ ಬಳಿಕ ಇತ್ತೀಚಿನ 3-4 ತಿಂಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ನಿರೀಕ್ಷೆ ಮೀರಿ ಹೆಚ್ಚಿನ ಆದಾಯ ಹರಿದು ಬಂದಿದ್ದು, ಕೋವಿಡ್‌ ಪರಿಣಾಮ ಈ ಬಾರಿ ಕಡಮೆ ಗಾತ್ರದ ಬಜೆಟ್‌ ಮಂಡಿಸಬೇಕಾಗಿ ಬರಬಹುದು ಎಂಬ ಆತಂಕ ದೂರವಾಗಿದೆ.

ನಿರೀಕ್ಷಿತ ಮಟ್ಟದ ಆದಾಯ ಸಂಗ್ರಹವಾಗದೇ ಇರುವುದರಿಂದ ಬಜೆಟ್‌ನ ಗಾತ್ರ ಸುಮಾರು 20ರಿಂದ 30 ಸಾವಿರ ಕೋಟಿ ರು.ಗಳಷ್ಟುಕಡಮೆಯಾಗಬಹುದು ಎಂಬ ಮಾತು ಕೆಲದಿನಗಳ ಹಿಂದೆ ಬಲವಾಗಿ ಕೇಳಿಬಂದಿತ್ತು. ಸ್ವತಃ ಯಡಿಯೂರಪ್ಪ ಅವರು ಹಲವು ಸಭೆ-ಸಮಾರಂಭಗಳಲ್ಲಿ ರಾಜ್ಯದ ಆದಾಯ ಕಡಮೆಯಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಹಣಕಾಸು ಇಲಾಖೆ ಅಧಿಕಾರಿಗಳು ಕೂಡ ಇದೇ ಅಭಿಪ್ರಾಯ ಹೊಂದಿದ್ದರು.

ಆದರೆ, ಸುದೀರ್ಘ ಲಾಕ್‌ಡೌನ್‌ ಬಳಿಕ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆಯೇ ವಾಣಿಜ್ಯ ಚಟುವಟಿಕೆಗಳೂ ಚಿಗುರಿದವು. ಹೀಗಾಗಿ, ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಿರೀಕ್ಷೆ ಮೀರಿ ಆದಾಯ ಸಂಗ್ರಹವಾಗಿದೆ. ಹೀಗಾಗಿ, ಕಳೆದ ಬಾರಿಗಿಂತ ಹೆಚ್ಚಿನ ಗಾತ್ರದ ಬಜೆಟ್‌ ಮಂಡಿಸಲು ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.

ಇದರ ಪರಿಣಾಮ ಈ ಬಾರಿ ಕಡಮೆ ಗಾತ್ರದ ಬಜೆಟ್‌ ಮಂಡಿಸಬೇಕಾಗುತ್ತದೆ ಎಂಬ ಆತಂಕದಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಣಕಾಸು ಇಲಾಖೆ ಅಧಿಕಾರಿಗಳು ಹರ್ಷಗೊಂಡಿದ್ದಾರೆ. ಉತ್ತಮ ಬಜೆಟ್‌ ಮಂಡಿಸುವತ್ತ ಭರದ ಸಿದ್ಧತೆ ಆರಂಭಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಬಜೆಟ್‌ ಪೂರ್ವಭಾವಿ ಸಭೆ ಅಂತ್ಯ:

ಹಣಕಾಸು ಖಾತೆಯನ್ನೂ ಹೊಂದಿರುವ ಯಡಿಯೂರಪ್ಪ ಅವರು ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದ ವಿವಿಧ ಇಲಾಖೆಗಳ ಪೂರ್ವಭಾವಿ ಸಭೆ ಮಂಗಳವಾರ ಅಂತ್ಯವಾಗಿದೆ.

ಎಲ್ಲ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಆಯಾ ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಬೇಡಿಕೆಗಳನ್ನು ಆಲಿಸಿದರು. ಇದೀಗ ಬುಧವಾರದಿಂದ ಬಜೆಟ್‌ನಲ್ಲಿ ಯಾವೆಲ್ಲ ಹೊಸ ಕಾರ್ಯಕ್ರಮಗಳನ್ನು ಸೇರಿಸಬೇಕು ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಹಣಕಾಸು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ರೂಪುರೇಷೆ ಸಿದ್ಧಪಡಿಸಲಿದ್ದಾರೆ ಎನ್ನಲಾಗಿದೆ.