Asianet Suvarna News Asianet Suvarna News

'ಕತ್ತೆ, ನಾಯಿ, ಮೀನು, ಕುದುರೆ, ಕೋಣಗಳಿರುವಾಗ ಪೂಜನೀಯ ಗೋವುಗಳನ್ನೇಕೆ ತಿನ್ನುತ್ತೀರಿ?'

ಮಾಂಸಾಹಾರದಿಂದ ಗ್ಲೋಬಲ್‌ ವಾರ್ಮಿಂಗ್‌ ಹೆಚ್ಚಳ: ಬಾಬಾ ರಾಮ್‌ದೇವ್‌| ಕತ್ತೆ, ನಾಯಿ, ಮೀನು, ಕುದುರೆ, ಕೋಣಗಳಿರುವಾಗ ಪೂಜನೀಯ ಗೋವುಗಳನ್ನೇಕೆ ತಿನ್ನುತ್ತೀರಿ ಎಂದು ಬಾಬಾ ಆಕ್ರೋಶ

Eating Non veg is the reason for global warming says baba ramdev
Author
Bangalore, First Published Nov 20, 2019, 10:35 AM IST

ಉಡುಪಿ[ನ.20]: ತುಳಸಿಯಿಂದ ಮೊಬೈಲ್‌ ರೆಡಿಯೇಶನ್‌ ಕಡಿಮೆಯಾಗುತ್ತದೆ ಎಂದು ಶನಿವಾರ ಹೇಳಿದ್ದ ಬಾಬಾ ರಾಮ್‌ದೇವ್‌, ಮಾಂಸಾಹಾರ ಸೇವನೆಯಿಂದ ಜಾಗತಿಕ ತಾಪಮಾನ ಹೆಚ್ಚುತ್ತದೆ ಎನ್ನುವ ವಾದವನ್ನು ಮಂಗಳವಾರ ಮಂಡಿಸಿದ್ದಾರೆ.

ಮಂಗಳವಾರ ಕೃಷ್ಣಮಠದಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ವಿಜ್ಞಾನಿಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ನಾನಾ ಕಾರಣಗಳನ್ನು ಕಂಡು ಹಿಡಿಯುತ್ತಿದ್ದಾರೆ. ಆದರೆ ನಿಜವಾದ ಕಾರಣ ಮಾಂಸಾಹಾರ ಹೆಚ್ಚಾಗಿರುವುದೇ ಕಾರಣ, ಇದನ್ನೇ ವಿಜ್ಞಾನಿಗಳು ಪತ್ತೆ ಮಾಡಿಲ್ಲ ಎಂದರು.

ಮಾಂಸವೇ ನಮ್ಮ ಆಹಾರ ಎನ್ನುವವರಿಗೆ ತಿನ್ನಬೇಡಿ ಎಂದು ನಾನು ಹೇಳುವುದಿಲ್ಲ. ಆದರೆ ನಿಮಗೆ ತಿನ್ನುವುದಕ್ಕೆ ಕುದುರೆ ಇದೆ, ಕತ್ತೆ ಇದೆ, ನಾಯಿ ಇದೆ, ಮೀನು ಇದೆ, ಕೋಣಗಳಿವೆ ಅವುಗಳನ್ನು ತಿನ್ನಿ, ಅವುಗಳನ್ನು ಬಿಟ್ಟು ನಾವು ಪೂಜಿಸುವ ಗೋವುಗಳನ್ನು ಯಾಕೆ ತಿನ್ನುತ್ತೀರಿ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.

ಹೆಚ್ಚು ಮಕ್ಕಳಿದ್ರೆ ಓಟ್‌ ಬೇಡ:

ಮಿತಿಗಿಂತ ಹೆಚ್ಚು ಮಕ್ಕಳನ್ನು ಹುಟ್ಟಿಸೋದೇನು ಶೂರತನದ ಕೆಲಸವಲ್ಲ ಎಂದ ಬಾಬಾ ರಾಮ್‌ದೇವ್‌, ಹೆಚ್ಚು ಮಕ್ಕಳನ್ನು ಹುಟ್ಟಿಸಿದವರಿಗೆ ಸರ್ಕಾರ ಶಿಕ್ಷಣ, ಉದ್ಯೋಗ, ಯಾವ ಸೌಲಭ್ಯವನ್ನೂ ನೀಡಬಾರದು, ಹೆಚ್ಚು ಮಕ್ಕಳನ್ನು ಹುಟ್ಟಿಸಿದವರೇ ಅವುಗಳ ಖರ್ಚನ್ನು ನೋಡಿಕೊಳ್ಳಲಿ, ಅಂತಹವರ ಮತ್ತು ಅವರ ಮಕ್ಕಳ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು ಎಂದು ಬಾಬಾ ಹೇಳಿದರು.

ತಾಪಮಾನ ಏರಿಕೆ; ಇನ್ನು ಹುಟ್ಟುವ ಮಕ್ಕಳಿಗೆ ಜೀವನವಿಡೀ ಆರೋಗ್ಯ ತೊಂದರೆ!

ನನ್ಮೇಲೆ ಸಾವಿರ ಕೇಸುಗಳಿವೆ:

ನಾನೇನೂ ತಪ್ಪು ಮಾಡದಿದ್ದರೂ ನನ್ನ ಮೇಲೆ ಈಗ ಸಾವಿರ ಕೇಸುಗಳಿವೆ, ಕಮ್ಯುನಿಷ್ಟರು, ತುಕ್ಡೆ ಗ್ಯಾಂಗಿನವರು, ಎಂ.ಎನ್‌.ಸಿ. ಅವರು ಕೇಸ್‌ ಹಾಕಿದ್ದು, ಅವುಗಳಿಗೆ ವಕೀಲರನ್ನಿಟ್ಟು ಹೋರಾಟ ಮಾಡಲು ತಿಂಗಳಿಗೆ 2 - 3 ಕೋಟಿ ರು. ಖರ್ಚಾಗುತ್ತಿದೆ ಎಂದು ಬಾಬಾ ಹೇಳಿದರು. ನಾನು ಪತಂಜಲಿ ಮೂಲಕ ಈಗಾಗಲೇ ದೇಶಾದ್ಯಂತ 1 ಲಕ್ಷಕ್ಕೂ ಅಧಿಕ ಗೋವುಗಳ ಸೇವೆ ಮಾಡುತಿದ್ದೇನೆ, ಈ ಕೇಸುಗಳಿಗೆ ಇಷ್ಟುಖರ್ಚು ಇಲ್ಲದಿದ್ದರೆ ಇನ್ನೂ ಅಷ್ಟುಗೋವುಗಳನ್ನು ಸಾಕುತ್ತಿದ್ದೆ ಎಂದು ಜೋರಾಗಿ ನಕ್ಕರು.

ಕೃಷ್ಣ ಕೂಡ ಒಬಿಸಿ ಅಲ್ವಾ:

ಸಾಮಾಜಿಕ ಜಾಲತಾಣಗಳಲ್ಲಿ ಈ ದೇಶದ ಬ್ರಾಹ್ಮಣರು ಹೊರಗಿನಿಂದ ಬಂದವರು, ಉಳಿದ ಹಿಂದುಳಿದ ವರ್ಗದವರು ಇಲ್ಲಿನ ಮೂಲ ನಿವಾಸಿಗಳು ಎಂದು ಪೆರಿಯಾರ್‌ನಂತಹ ಕೆಲವರು ವಾದಿಸುತ್ತಿದ್ದಾರೆ. ರಾಕ್ಷಸರನ್ನು ಪೂಜಿಸುವ ಅವರು ಬ್ರಾಹ್ಮಣರು ಪೂಜಿಸುವ ದೇವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎನ್ನುತ್ತಿದ್ದಾರೆ. ಹಾಗಿದ್ದರೆ ಅವರು, ಕೃಷ್ಣ ಕೂಡ ಗೊಲ್ಲ, ಹಿಂದುಳಿದ ಸಮುದಾಯದವ, ಆತನನ್ನು ಹೊಡೆಯುತ್ತಾರೇನು ಎಂದು ಬಾಬಾ ಹಾಸ್ಯ ಚಟಾಕಿ ಹಾರಿಸಿದರು.

Follow Us:
Download App:
  • android
  • ios