ಚಿತ್ರದುರ್ಗ[ಡಿ.12]: ಜಿಲ್ಲಾ ವ್ಯಾಪ್ತಿಯಲ್ಲಿನ ಬೀದಿ ವ್ಯಾಪಾರಿಗಳು ಎಣ್ಣೆಯಲ್ಲಿ ಕರಿದ ಬಜ್ಜಿ, ಬೋಂಡಾ ಸೇರಿದಂತೆ ಆಹಾರ ಪದಾರ್ಥಗಳನ್ನು ಹಳೆಯ ದಿನಪತ್ರಿಕೆ (ಪ್ರಿಂಟೆಡ್‌)ಗಳಲ್ಲಿ ಪ್ಯಾಕ್‌ ಮಾಡಿ ನೀಡಬಾರದು. ನಿಯಮ ಉಲ್ಲಂಘಿಸಿದಲ್ಲಿ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು ಎಂದು ಚಿತ್ರದುರ್ಗ ಆಹಾರ ಮತ್ತು ಗುಣಮಟ್ಟಇಲಾಖೆ ಎಚ್ಚರಿಕೆ ನೀಡಿದೆ.

ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಪ್ರಿಂಟೆಡ್‌ ಪ್ಯಾಕ್‌ಗಳಲ್ಲಿ ಆಹಾರ ಪದಾರ್ಥ ಪ್ಯಾಕ್‌ ಮಾಡಿ ನೀಡುತ್ತಿರುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟಇಲಾಖೆಯ ಗಮನಕ್ಕೆ ಬಂದಿದೆ. ಈ ರೀತಿಯಿಂದ ಪ್ರಿಂಟೆಡ್‌ ಪೇಪರಿನಲ್ಲಿರುವ ಸೀಸ ಎಂಬ ರಾಸಾಯನಿಕವು ತಿಂಡಿ, ಪದಾರ್ಥಗಳ ಮೂಲಕ ಮನುಷ್ಯನ ದೇಹಕ್ಕೆ ಸೇರುತ್ತದೆ. ಇದರಿಂದ ಕ್ಯಾನ್ಸರ್‌ಕಾರಕ ರೋಗಗಳು ಬರುವ ಸಂಭವ ಇರುತ್ತದೆ ಎಂದು ಎಚ್ಚರಿಸಿದೆ.

ಮುಂದಿನ ದಿನಗಳಲ್ಲಿ ಯಾವುದೇ ವ್ಯಾಪಾರಿಗಳಾಗಲಿ ಕರಿದ ಎಣ್ಣೆ ಪದಾರ್ಥಗಳು ಅಥವಾ ಇತರೆ ಆಹಾರ ಪದಾರ್ಥಗಳನ್ನು ಪ್ರಿಂಟೆಡ್‌ ಪೇಪರಿನಲ್ಲಿ ನೀಡದೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕಾಯ್ದೆ 2006 ಸೆಕ್ಷನ್‌ 55, 56 ಮತ್ತು 59ರಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚಿತ್ರದುರ್ಗದ ಜಿಲ್ಲಾ ಅಂಕಿತ ಅಧಿಕಾರಿ, ಆಹಾರ ಮತ್ತು ಗುಣಮಟ್ಟಇಲಾಖೆ ತಿಳಿಸಿದ್ದಾರೆ.