ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಸುಮಾರು 14 ಬಾರಿ ಭೂಮಿ ಕಂಪಿಸಿದ್ದು, ನಿನ್ನೆಯಷ್ಟೇ 3.1 ತೀವ್ರತೆಯ ಭೂಕಂಪನ ದಾಖಲಾಗಿತ್ತು, ಇದು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ವಿಜಯಪುರ (ನ.5): ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ನಿನ್ನೆಯಷ್ಟೇ ಭೂಮಿ ಕಂಪಿಸಿತ್ತು, ಇದೀಗ ಮತ್ತೆ ಇಂದು ಬೆಳಿಗ್ಗೆ 9:12 ಗಂಟೆಗೆ ಭೂಮಿ ನಡುಗಿದ ಅನುಭವವಾಗಿ ಜನರು ಭಯಭೀತರಾಗಿ ಹೊರಗೆ ಓಡಿಬಂದ ಘಟನೆ ನಡೆದಿದೆ.

ಎಲ್ಲೆಲ್ಲಿ ಭೂಕಂಪನದ ಅನುಭವ?

ವಿಜಯಪುರ ನಗರ, ಶಿವಗಿರಿ, ಪಾನಿ ನಗರ, ತೊರವಿ, ಕನಕದಾಸ ಬಡಾವಣೆ ಮತ್ತು ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ವಿಶೇಷವಾಗಿ ನಗರದ ಕೇಂದ್ರ ಭಾಗಗಳಲ್ಲಿ ಜನರಿಗೆ ತೀವ್ರ ಕಂಪನ ಭಾಸವಾಗಿದ್ದು, ಕೆಲವರು 'ಭೂಮಿ ಕುಸಿಯುತ್ತಿದೆ' ಎಂದು ಕಿರುಚುತ್ತಾ ಮುಖ್ಯಬೀದಿಗೆ ಓಡೋಡಿ ಬಂದಿದ್ದಾರೆ.

ಕಳೆದೆರಡು ತಿಂಗಳಿಂದ ನಿರಂತರ ಕಂಪಿಸುತ್ತಿರುವ ಭೂಮಿ:

ಈಗಾಗಲೇ ಎರಡು ತಿಂಗಳುಗಳಲ್ಲಿ ಸುಮಾರು 14 ಬಾರಿ ಭೂಮಿ ಕಂಪಿಸಿದೆ. ನಿರಂತರವಾಗಿ ನಡೆಯುತ್ತಿರುವ ಈ ಭೂಕಂಪನಗಳು ವಿಜಯಪುರದ ಜನರನ್ನು ಕಂಗಾಲು ಮಾಡಿವೆ. ಜನರು ಭಯಭೀತರಾಗಿ ರಾತ್ರಿಯಂತೂ ನಿದ್ದೆ ಮಾಡದಂತಾಗಿದೆ.

ಮೊನ್ನೆಯಷ್ಟೇ ಭಾರೀ ಸದ್ದಿನೊಂದಿಗೆ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಸ್ಕೇಲ್‌ನಲ್ಲಿ 3.1 ತೀವ್ರತೆಯ ಈ ಭೂಕಂಪವೆಂದು ತೋರಿಸಿತ್ತು. ವಿಜಯಪುರ ನಗರ ಹೊರತಾಗಿ ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ ಮತ್ತು ಹೊನ್ನೂಟಗಿ ಸೇರಿದಂತೆ ವಿಜಯಪುರ ಮತ್ತು ತಿಕೋಟ ತಾಲೂಕುಗಳಲ್ಲಿ ಭೂಮಿ ನಡುಗಿತ್ತು. ನಗರದ ವಿವಿಧ ಸ್ಥಳಗಳ ಸಿಸಿಟಿವಿ ಕ್ಯಾಮರಾಗಳಲ್ಲಿ ಭೂಮಿ ನಡುಗುವುದು ಸೆರೆಯಾಗಿದೆ. ಜೊತೆಗೆ, 'Earthquake Network' ಮತ್ತು 'QuakeFeed ಭೂಕಂಪನ ಆಪ್‌ಗಳಲ್ಲಿ 3.1 ರಿಕ್ಟರ್ ತೀವ್ರತೆಯ ದಾಖಲೆ ದಾಖಲಾಗಿದ್ದು, ತಕ್ಷಣ ತುರ್ತು ಸಂದೇಶಗಳು ಬಳಕೆದಾರರಿಗೆ ಬಂದಿವೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಭೂಕಂಪನವಾಗಿದೆ. ಸ್ಥಳೀಯರು ಆತಂಕದಲ್ಲಿ ದಿನದೂಡುವಂತಾಗಿದೆ.