ಮೊದಲ ಹಂತವಾಗಿ ನಗರದ ಸುಮಾರು 85,000 ಕುಟುಂಬಗಳ 4 ಲಕ್ಷ ಜನರಿಗೆ 4 ಕೋಟಿ ರು. ಮೌಲ್ಯದ ಆಯುರ್ವೇದೀಯ ಔಷಧಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ಕಿಟ್‌ ಸುಮಾರು 350 ರು. ಬೆಲೆಯುಳ್ಳದ್ದಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜು.28): ಕೊರೋನಾ ಸೋಂಕಿನ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಸುವ ಸಂಬಂಧ ನಗರದ ಪ್ರತಿ ಕುಟುಂಬದ ಪ್ರತಿ ವ್ಯಕ್ತಿಗೂ ಕೇಂದ್ರ ಸರ್ಕಾರದ ಆಯುಷ್‌ ಮಂತ್ರಾಲಯ ಶಿಫಾರಸು ಮಾಡಿರುವ ಆಯುರ್ವೇದೀಯ ಔಷಧಿಯನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಂಚಾಯತ್‌ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರ ಹೊರವಲಯದ ಪೇಸ್‌ ಕಾಲೇಜಿನಲ್ಲಿ ಸಂಗ್ರಹಿಸಿ, ವಿತರಣೆಗೆ ಸಿದ್ಧಪಡಿಸುತ್ತಿದ್ದ ಔಷಧಗಳ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಶಿವಮೊಗ್ಗದ ಕೋವಿಡ್‌ ಸುರಕ್ಷಾ ಪಡೆ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ದೇಶದಲ್ಲೇ ಅತೀ ಮಹತ್ವದ ಮತ್ತು ಮೊದಲ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

ಮೊದಲ ಹಂತವಾಗಿ ನಗರದ ಸುಮಾರು 85,000 ಕುಟುಂಬಗಳ 4 ಲಕ್ಷ ಜನರಿಗೆ 4 ಕೋಟಿ ರು. ಮೌಲ್ಯದ ಆಯುರ್ವೇದೀಯ ಔಷಧಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ಕಿಟ್‌ ಸುಮಾರು 350 ರು. ಬೆಲೆಯುಳ್ಳದ್ದಾಗಿದೆ. ಈ ಕಿಟ್‌ನಲ್ಲಿ ಸುಮಾರು 3 ರೀತಿಯ ಔಷಧಗಳಿದ್ದು, ಅವುಗಳ ಬಳಕೆಯ ಕುರಿತು ವಿವರ ಮಾಹಿತಿ ಕಿಟ್‌ನಲ್ಲಿ ನಮೂದಿಸಲಾಗಿದೆ. ಈ ಔಷಧದ ಕಿಟ್‌ ಪಡೆಯಲಿಚ್ಚಿಸುವ ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ. ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ಔಷಧಗಳನ್ನು ಪಡೆಯುವುದು ಹಾಗೂ ಎರಡೆರೆಡು ಬಾರಿ ಔಷಧ ಪಡೆಯವುದು ಅಸಾಧ್ಯವಾಗಲಿದೆ ಎಂದು ಹೇಳಿದರು.

ವೈದ್ಯ ಗಿರಿಧರ್‌ ಕಜೆ ಬಳಿ ಆಯುರ್ವೇದ ಮೆಡಿಸಿನ್‌ ತೆಗೆದುಕೊಂಡೆ: ಕೊರೋನಾ ಗೆದ್ದ ಸಚಿವ ಸಿ. ಟಿ. ರವಿ!

ಆಯುರ್ವೇದ ಔಷಧಗಳ ವಿತರಣಾ ಸಮಾರಂಭ ಜುಲೈ 29 ರಂದು ಬೆಳಿಗ್ಗೆ 11ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಉದ್ಘಾಟಿಸುವರು. ಔಷಧ ವಿತರಣೆಯ ಮೊದಲ ಕಾರ್ಯಕ್ರಮ ಅಂದು ಸಂಜೆ 4 ರಿಂದ ಡಾ. ಸಿ.ಎಲ್‌.ರಾಮಣ್ಣ ರಸ್ತೆಯಿಂದ ಆರಂಭಗೊಳ್ಳಲಿದೆ ಎಂದು ಹೇಳಿದರು.

ವಿಶೇಷವಾಗಿ ಈ ಕಿಟ್‌ನಲ್ಲಿ ಎರಡು ರೀತಿಯ ಗುಳಿಗೆಗಳು ಹಾಗೂ ಕಷಾಯ ಪುಡಿ ಇರಲಿದ್ದು, ಸುಮಾರು 4 ಕೋಟಿ ರು. ಮೌಲ್ಯದ ಈ ಔಷಧಗಳನ್ನು ನಗರದ ಎಲ್ಲರಿಗೂ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂ ಸೇವಕರಾಗಿ ಭಾಗವಹಿಸಲಿದ್ದಾರೆ. ಅಲ್ಲದೇ ಆರ್ಥಿಕವಾಗಿ ನೆರವು ನೀಡಲು ಬಂದಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ನೆರವಾಗುವ ಮನಸ್ಸಿರುವ ವ್ಯಕ್ತಿಗಳಿಂದ ನೆರವನ್ನು ಸ್ವೀಕರಿಸಲಾಗುವುದು ಎಂದು ನುಡಿದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ, ಮೇಯರ್‌ ಸುವರ್ಣ ಶಂಕರ್‌, ಸುರೇಖಾ ಮುರಳೀಧರ್‌, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್‌, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್‌.ಅರುಣ್‌, ಗಿರೀಶ್‌ ಕಾರಂತ್‌, ಗಿರೀಶ್‌ ಪಟೇಲ್‌, ನಾಗರಾಜ್‌, ಬಳ್ಳೆಕೆರೆ ಸಂತೋಷ್‌, ಜಗದೀಶ್‌ ಮುಂತಾದವರು ಇದ್ದರು.