Asianet Suvarna News Asianet Suvarna News

E-Sahamati: ವಿವಿ ವಿದ್ಯಾರ್ಥಿಗಳಿಗೆ ನೆರವಾಗುವ ‘ಇ-ಸಹಮತಿ’ ಆರಂಭ: ಸಚಿವ ಅಶ್ವತ್ಥ ನಾರಾಯಣ

ಉನ್ನತ ಶಿಕ್ಷಣದಲ್ಲಿ ಪರೀಕ್ಷಾಂಗ ವ್ಯವಸ್ಥೆ ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಿರುವ ‘ಇ-ಸಹಮತಿ’ ಎಂಬ ತಂತ್ರಾಂಶಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.

e Sahamati initiative to ensure authenticity of academic papers gvd
Author
Bangalore, First Published Jan 25, 2022, 6:14 AM IST

ಬೆಂಗಳೂರು (ಜ.25): ಉನ್ನತ ಶಿಕ್ಷಣದಲ್ಲಿ ಪರೀಕ್ಷಾಂಗ ವ್ಯವಸ್ಥೆ ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಿರುವ ‘ಇ-ಸಹಮತಿ’ (e-Sahamati) ಎಂಬ ತಂತ್ರಾಂಶಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ (CN Ashwath Narayan) ಅವರು ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.

ಬಳಿಕ ಈ ತಂತ್ರಾಂಶದ ಉಪಯೋಗವನ್ನು ವಿವರಿಸಿದ ಸಚಿವರು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ಯೋಜನೆಯಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ 24 ವಿಶ್ವವಿದ್ಯಾಲಯಗಳ ಪೈಕಿ ಎರಡು ವಿವಿಗಳು ಮಾತ್ರ ತಮ್ಮದೇ ಆದ ಪರೀಕ್ಷಾ ನಿರ್ವಹಣೆಯ ತಂತ್ರಾಂಶಗಳನ್ನು ಹೊಂದಿದ್ದರೆ, ಎಂಟು ವಿ.ವಿ.ಗಳಲ್ಲಿ ತಂತ್ರಾಂಶಗಳಿಲ್ಲ. ಇನ್ನುಳಿದ ವಿ.ವಿ.ಗಳು ಇದಕ್ಕೆಲ್ಲ ಹೊರಗುತ್ತಿಗೆಯನ್ನು ನೆಚ್ಚಿಕೊಂಡಿದ್ದವು. ಈಗ ಸರ್ಕಾರ ಅಭಿವೃದ್ಧಿಪಡಿಸಿರುವ ‘ಇ-ಸಹಮತಿ’ ಪರೀಕ್ಷಾ ನಿರ್ವಹಣಾ ತಂತ್ರಾಂಶದ ಮೂಲಕ ಡಿಜಿಟಲ್‌ ಮೌಲ್ಯಮಾಪನ, ಆನ್‌ಲೈನ್‌ ಮೂಲಕ ಪ್ರಶ್ನೆಪತ್ರಿಕೆ, ಪ್ರವೇಶಪತ್ರ, ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿ, ಪ್ರಯೋಗಾಲಯಗಳ ಬ್ಯಾಚ್‌ ನಿರ್ವಹಣೆ, ಅಂಕಪಟ್ಟಿಪೂರೈಕೆ ಮುಂತಾದವು ಸಾಧ್ಯವಾಗಲಿವೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

10 ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಈ ಯೋಜನೆಯಡಿ 2021ರ ಆಗಸ್ಟ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಕ್ರಮವಾಗಿ ಪ್ರವೇಶಾತಿ ಮತ್ತು ಶೈಕ್ಷಣಿಕ ಹಾಗೂ ತರಗತಿ ನಿರ್ವಹಣೆ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಉಳಿದೆಲ್ಲಾ ವ್ಯವಸ್ಥೆಯನ್ನು ಮುಂದಿನ ಜೂನ್‌ ಹೊತ್ತಿಗೆ ಅಳವಡಿಸಲಾಗುವುದು. ಇದರಿಂದ ವಿ.ವಿ.ಗಳು ಪರೀಕ್ಷೆ ನಡೆಸಲು ಮತ್ತು ಅಂಕಪಟ್ಟಿಗಳನ್ನು ನೀಡಲು ಖರ್ಚು ಮಾಡುತ್ತಿದ್ದ ಸುಮಾರು 60 ಕೋಟಿ ರು. ಹಣ ಉಳಿತಾಯವಾಗಲಿದೆ. ಜೊತೆಗೆ, ನಕಲಿ ಅಂಕಪಟ್ಟಿಮತ್ತು ಪ್ರಮಾಣಪತ್ರಗಳ ದಂಧೆಗೂ ಕಡಿವಾಣ ಬೀಳಲಿದೆ. ಒಟ್ಟಾರೆ ಇದರಿಂದ ರಾಜ್ಯದ ಎಲ್ಲ ವಿವಿಗಳು ಮತ್ತು 3400 ಕಾಲೇಜುಗಳ 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವಾಗಲಿದೆ ಎಂದು ಹೇಳಿದರು.

E-Sahamati: ದಾಖಲಾತಿಗಳ ಕಾಗದರಹಿತ ಪರಿಶೀಲನೆಗೆ ಇ-ಸಹಮತಿ

ಈ ತಂತ್ರಾಂಶದ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಡೇಟಾವನ್ನು ರಾಷ್ಟ್ರೀಯ ಶೈಕ್ಷಣಿಕ ಸಾಧನಾ ಭಂಡಾರಕ್ಕೆ (ನ್ಯಾಷನಲ್‌ ಅಕಾಡೆಮಿಕ್‌ ಬ್ಯಾಂಕ್‌ ಆಫ್‌ ಕ್ರೆಡಿಟ್‌- ಎನ್‌ಎಬಿಸಿ) ಸೇರಿಸಲು ಹಾಗೂ ಉದ್ಯೋಗದಾತರ ಜತೆಗೆ ಅಂಕಪಟ್ಟಿಹಂಚಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಪ್ರತಿ ಸೆಮಿಸ್ಟರಿನ ಅಂಕಪಟ್ಟಿಗಳನ್ನು ನೇರವಾಗಿ ‘ಡಿಜಿಲಾಕರ್‌-ಎನ್‌ಎಡಿ’ಗೆ ವರ್ಗಾಯಿಸಬಹುದು. ಇದರಿಂದ ಭದ್ರತೆ ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ವಿವರಿಸಿದರು.

ಮಹಿಳಾ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ: ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಈ ಸಂಬಂಧ ಕೆಲವರು ಅನಗತ್ಯವಾಗಿ ಗುಲ್ಲೆಬ್ಬಿಸುತ್ತಿದ್ದಾರೆ. ಈ ವಿವಿಯನ್ನು ಮತ್ತಷ್ಟುವಿಸ್ತರಿಸುವ ಆಲೋಚನೆಯನ್ನು ಸರ್ಕಾರ ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಮಕಾಲೀನ ಜಗತ್ತಿನಲ್ಲಿ ಮಹಿಳೆಯರನ್ನು ಕುರಿತ ಅಧ್ಯಯನ ವಿಸ್ತೃತವಾಗಿ ನಡೆಯಬೇಕಾಗಿದೆ. ಇದಕ್ಕೆ ತಕ್ಕಂತೆ ರಾಜ್ಯದ ಏಕೈಕ ಮಹಿಳಾ ವಿವಿಯ ಚಟುವಟಿಕೆಗಳನ್ನು ಹೇಗೆ ವಿಸ್ತರಿಸಬೇಕು ಎನ್ನುವ ಕುರಿತು ಸಮಾಲೋಚಿಸಲಾಗುತ್ತಿದೆ. ಆದರೆ ಕೆಲವರು ವಿನಾಕಾರಣ ಈ ವಿವಿಯನ್ನು ಮುಚ್ಚುವ ಹುನ್ನಾರ ನಡೆದಿದೆ ಎಂದು ಗುಲ್ಲೆಬ್ಬಿಸುತ್ತಿರುವುದು ವಿಷಾದನೀಯ ಎಂದರು.

ಸಂಸ್ಕೃತ ವಿವಿಗೆ ಕ್ಯಾಂಪಸ್‌: ಇದೇ ವೇಳೆ ಸಂಸ್ಕೃತ ವಿವಿ ಕ್ಯಾಂಪಸ್‌ ಕುರಿತ ಪ್ರಶ್ನೆಗೆ, ಸಂಸ್ಕೃತ ವಿವಿ ಕಳೆದ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಇದಕ್ಕೊಂದು ಸುಸಜ್ಜಿತ ಕ್ಯಾಂಪಸ್‌ ಇರಲಿಲ್ಲ. ನಮ್ಮ ಸರ್ಕಾರ ಕ್ಯಾಂಪಸ್‌ ನಿರ್ಮಾಣ ಮಾಡಲು ಮುಂದಾಗಿದೆ. ಈ ವಿಚಾರದಲ್ಲಿ ಹಿಂದಕ್ಕೆ ಸರಿಯುವುದಿಲ್ಲ. ಮುಲ್ಲರ್‌ ಭವನಕ್ಕೆ ಹೋಗಿ ನೋಡಿದರೆ ಸಂಸ್ಕೃತ ಅಧ್ಯಯನವನ್ನು ನಾವು ಏಕೆ ಮಾಡಬೇಕೆನ್ನುವುದು ಗೊತ್ತಾಗುತ್ತದೆ ಎಂದು ಸಂಸ್ಕೃತ ವಿರೋಧಿಗಳಿಗೆ ತಿರುಗೇಟು ನೀಡಿದರು.

Infrastructure ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಎವಿಜಿಸಿ ನೀತಿ, ಅಶ್ವತ್ಥನಾರಾಯಣ

ಕನ್ನಡ ಕಡ್ಡಾಯ ಕಲಿಕೆಗೆ ಸದ್ಯಕ್ಕೆ ತಡೆ: ಹೈಕೋರ್ಟ್‌ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುವುದನ್ನು ತಡೆ ಹಿಡಿಯಲಾಗಿದೆ. ಅಂತಿಮ ತೀರ್ಪು ಆಧರಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಇದೇ ವೇಳೆ ಸಚಿವ ಅಶ್ವತ್ಥನಾರಾಯಣ ಹೇಳಿದರು. ಹಾಗೆಯೇ ಹಂಪಿ ಕನ್ನಡ ವಿ.ವಿ.ಯಲ್ಲಿ ಕೋವಿಡ್‌ ಸಮಸ್ಯೆಯ ಹಿನ್ನೆಲೆಯಲ್ಲಿ ಪ್ರಸಾರಾಂಗ ಸ್ಥಗಿತವಾಗಿದೆ. 

ಇದರಿಂದಾಗಿ ಅವರಿಗೆ ವರ್ಷಕ್ಕೆ ಬರುತ್ತಿದ್ದ 4 ಕೋಟಿ ರು. ಆದಾಯ ನಿಂತುಹೋಗಿದೆ. ಆ ವಿವಿಗೆ ಅನುದಾನ ಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಆರ್ಥಿಕ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಒಟ್ಟು 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪ್ರಕ್ರಿಯೆಯ ಮುಂದಿನ ಹೆಜ್ಜೆಗಳನ್ನು ಇನ್ನು ಎರಡು ದಿನಗಳಲ್ಲಿ ಅಂತಿಮಗೊಳಿಸುವುದಾಗಿ ಹೇಳಿದರು.

Follow Us:
Download App:
  • android
  • ios