Asianet Suvarna News Asianet Suvarna News

ಮೈಸೂರಷ್ಟೇ ಅಲ್ಲ ಈ ಜಿಲ್ಲೆಗಳಲ್ಲೂ ನಡೆಯುತ್ತೆ ದಸರಾ ದರ್ಬಾರ್!

ಮೈಸೂರಲ್ಲಿ ಮಾತ್ರವಲ್ಲ ಕರುನಾಡಿನ ಹಲವೆಡೆ ದಸರಾವನ್ನು ವಿಶಿಷ್ಚವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೆಲ ಆಚರಣೆಗಳಿಗೆ ನೂರಾರು ವರ್ಷಗಳ ಇತಿಹಾಸ ಇದ್ದರೆ, ಇನ್ನು ಕೆಲವೆಡೆ ಕಳೆದ ಹತ್ತೈವತ್ತು ವರ್ಷಗಳಿಂದ ಚಾಲ್ತಿಗೆ ಬಂದಂಥವು. ಅಂಥ ಒಂದಷ್ಟು ದಸರಾ ಮೆರುಗು ಕುರಿತು ಇಲ್ಲಿದೆ ಕಿರು ಮಾಹಿತಿ.

Durbar is held not only in Mysore but also in these districts rav
Author
First Published Oct 16, 2023, 6:12 AM IST

ಬೆಂಗಳೂರು: ಮೈಸೂರಲ್ಲಿ ಮಾತ್ರವಲ್ಲ ಕರುನಾಡಿನ ಹಲವೆಡೆ ದಸರಾವನ್ನು ವಿಶಿಷ್ಚವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೆಲ ಆಚರಣೆಗಳಿಗೆ ನೂರಾರು ವರ್ಷಗಳ ಇತಿಹಾಸ ಇದ್ದರೆ, ಇನ್ನು ಕೆಲವೆಡೆ ಕಳೆದ ಹತ್ತೈವತ್ತು ವರ್ಷಗಳಿಂದ ಚಾಲ್ತಿಗೆ ಬಂದಂಥವು. ಅಂಥ ಒಂದಷ್ಟು ದಸರಾ ಮೆರುಗು ಕುರಿತು ಇಲ್ಲಿದೆ ಕಿರು ಮಾಹಿತಿ.

250ಕ್ಕೂ ಅಧಿಕ ವರ್ಷದ ಇತಿಹಾಸ ಹೊಂದಿರುವ ಮಡಿಕೇರಿ ದಸರಾ

‘ಇರುಳನ್ನೇ ಬೆಳಕಾಗಿಸುವ ದಸರೆ’ ಎಂದೇ ಮಡಿಕೇರಿ ದಸರಾ ಖ್ಯಾತಿ ಗಳಿಸಿದೆ. ಈ ಐತಿಹಾಸಿಕ ದಸರಾ ಉತ್ಸವಕ್ಕೆ ಭಾನುವಾರ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಆರಂಭಿಸುವ ಮೂಲಕ ವೈಭವದ ಚಾಲನೆ ಸಿಗಲಿದೆ.

ಪ್ರಾಯೋಜಕತ್ವ ಮೂಲಕ ಈ ಬಾರಿ ಸಾಂಪ್ರದಾಯಿಕ ದಸರಾ

ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ಹಾಗೂ ಕೋಟೆ ಮಾರಿಯಮ್ಮ ದೇವತೆಗಳ ಕರಗವು ನಗರದ ಪಂಪಿನ ಕೆರೆಯಿಂದ ಸಂಜೆ 5ಕ್ಕೆ ಹೊರಡಲಿದ್ದು, 9 ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಲಿದೆ. ಮಡಿಕೇರಿ ದಸರಾ ಉತ್ಸವಕ್ಕೆ ಸುಮಾರು ಇನ್ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಕೊಡಗಿನಲ್ಲಿ ರಾಜರ ಆಳ್ವಿಕೆ ಕಾಲದಲ್ಲಿ ಮಡಿಕೇರಿ ಜನರನ್ನು ಸಾಂಕ್ರಾಮಿಕ ರೋಗವೊಂದು ಕಾಡಿತ್ತು. ಇದರಿಂದ ಅಪಾರ ಸಾವು-ನೋವು ಉಂಟಾಗಿತ್ತು. ಈ ಸಂದರ್ಭದಲ್ಲಿ ರಾಜರು ನಗರದಲ್ಲಿ 4 ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಿ ಕರಗ ಹೊರಡಿಸಿ ಪೂಜಿಸುತ್ತಿದ್ದರು. ಈ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ನಡೆಸಿದ ನಂತರ ಸಾಂಕ್ರಾಮಿಕ ರೋಗ ದೂರವಾಯಿತು ಎಂಬ ಐತಿಹ್ಯವಿದೆ.

ಮೈಸೂರು ಮಾದರಿಯಲ್ಲೇ ಶಿವಮೊಗ್ಗ ದಸರಾ ವೈಭವ

ಮೈಸೂರು ಮಾದರಿಯಲ್ಲೇ ದಸರಾ ಆಚರಣೆಯಲ್ಲಿ ಶಿವಮೊಗ್ಗ ಕೂಡ ಹೆಸರುವಾಸಿ. ಕಳೆದೆರಡು ದಶಕಗಳಿಂದೀಚೆಗೆ ದಸರಾಕ್ಕೆ ಇಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ. ನಗರಸಭೆ ಉಸ್ತುವಾರಿಯಲ್ಲಿ ನಡೆಯುವ ಈ ಆಚರಣೆಗೆ ಸರ್ಕಾರ ಪ್ರತಿ ವರ್ಷ ವಿಶೇಷ ಅನುದಾನ ನೀಡುತ್ತಾ ಬಂದಿದೆ. ನಗರಸಭೆ ತನ್ನ ಆಯವ್ಯಯದಲ್ಲಿ ಇದಕ್ಕೆಂದೇ ಹೆಚ್ಚುವರಿ ಬಜೆಟ್ ನಿಗದಿಪಡಿಸಿದೆ. ಇದಕ್ಕಾಗಿ 9 ವಿವಿಧ ಸಮಿತಿ ರಚಿಸಲಾಗಿದ್ದು, ಮಕ್ಕಳ ದಸರಾ, ಯೋಗ ದಸರಾ, ಆಹಾರ ದಸರಾ, ರಂಗ ದಸರಾ, ಚಲನಚಿತ್ರ ದಸರಾ, ರೈತ ದಸರಾ, ಪರಿಸರ ದಸರಾ, ಮಹಿಳಾ ದಸರಾ, ಕಲಾ ದಸರಾ, ವಿದ್ಯಾರ್ಥಿಗಳಿಗಾಗಿ ಜ್ಞಾನ ದಸರಾ ವಿಭಾಗದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ವಿಜಯದಶಮಿಯಂದು ಅದ್ಧೂರಿ ದಸರಾ ಮೆರವಣಿಗೆ ನಡೆಯುತ್ತದೆ. ಚಾಮುಂಡೇಶ್ವರಿ ವಿಗ್ರಹ ಹೊತ್ತ ಸಕ್ರೆಬೈಲು ಆನೆಗಳ ತಂಡ ಎರಡೂವರೆ ಕಿ.ಮೀ. ಸಾಗಿ, ಅಂತಿಮವಾಗಿ ಫ್ರೀಡಂ ಪಾರ್ಕ್ ನಲ್ಲಿ ಬನ್ನಿ ಕಡಿಯುವ ಮೂಲಕ ಅಂತ್ಯಗೊಳ್ಳುತ್ತದೆ.

ಶಾರದೆ ಮಡಿಲಲ್ಲಿ ಶರನ್ನವರಾತ್ರಿ ಉತ್ಸವ

ಪಶ್ಚಿಮಘಟ್ಟದ ತಪ್ಪಲು, ತುಂಗೆ ತೀರದಲ್ಲಿರುವ ಶಕ್ತಿ ದೇವತೆ ಶಾರದಾಂಬೆಯ ತವರೂರು ಶೃಂಗೇರಿಯಲ್ಲಿ ನೂರಾರು ವರ್ಷಗಳಿಂದಲೂ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. 1336ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾಗಿದ್ದ ಶ್ರೀ ಶಾರದಾ ಪೀಠದ 12ನೇ ಪೀಠಾಧಿಪತಿ ಶ್ರೀ ವಿದ್ಯಾರಣ್ಯರು ನವರಾತ್ರಿ ಉತ್ಸವಕ್ಕೆ ಹೊಸ ಆಯಾಮ ನೀಡಿದ್ದರು. ನಂತರದಲ್ಲಿ ಈ ಪೀಠದ ಎಲ್ಲಾ ಜಗದ್ಗುರುಗಳು ನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸುತ್ತಾ ಬಂದಿದ್ದಾರೆ. ಶೃಂಗೇರಿಯಲ್ಲಿ 9 ದಿನ ಕಾಲ ಶರನ್ನವರಾತ್ರಿ ಉತ್ಸವ ವೈಭವದಿಂದ ನಡೆಯುತ್ತದೆ. ನವರಾತ್ರಿ ಉತ್ಸವದ 11ನೇ ದಿನ ರಥ ಬೀದಿಯಲ್ಲಿ ಶ್ರೀ ಶಾರದಾಂಭಾ ಮಹಾ ರಥೋತ್ಸವ ಹಾಗೂ ಜಗುದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 1885ರಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಇಲ್ಲಿಗೆ ಭೇಟಿ ನೀಡಿದ್ದಾಗ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಮಹಾರಾಜರಿಗೆ ರತ್ನ ಖಚಿತ ಕಿರೀಟ ಸಮರ್ಪಿಸಿದ್ದರು. ಈ ಕಿರೀಟಕ್ಕೆ ಈಗಲೂ ಮೈಸೂರು ಅರಸರ ಖಾಸಗಿ ದರ್ಬಾರ್‌ನಲ್ಲಿ ಪೂಜೆ ಸಲ್ಲುತ್ತದೆ.

ಕುದ್ರೋಳಿಯಲ್ಲಿ ವೈಭವದ ‘ಮಂಗಳೂರು ದಸರಾ’

ಮಂಗಳೂರಿನ ಕುದ್ರೋಳಿಯ ಶ್ರೀಗೋಕರ್ಣನಾಥ ಕ್ಷೇತ್ರದ ಸಾನ್ನಿಧ್ಯದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವ ‘ಮಂಗಳೂರು ದಸರಾ’ ಎಂದೇ ಪ್ರಸಿದ್ಧಿ. ಮೈಸೂರು ಹೊರತುಪಡಿಸಿದರೆ ಸರ್ವಧರ್ಮ ಸಮನ್ವಯದಿಂದ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ವೈಶಿಷ್ಟ್ಯ. ನವರಾತ್ರಿಯಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುತ್ತದೆ. ಮಂಗಳೂರು ದಸರಾಗೆ ಕಳೆ ತರುವುದೇ ವೈಭವದ ಮೆರವಣಿಗೆ. ನವರಾತ್ರಿಯ ಕೊನೇದಿನ ನವದುರ್ಗೆಯರು, ಶಾರದೆ ಸಹಿತ ದಸರಾ ಮೆರವಣಿಗೆ ಮುಸ್ಸಂಜೆ ಹೊತ್ತಿಗೆ ಆರಂಭಗೊಳ್ಳುತ್ತದೆ. ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ದಸರಾ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಕುದ್ರೋಳಿಯಿಂದ ವಿಭಿನ್ನ ಟ್ಯಾಬ್ಲೋಗಳೊಂದಿಗೆ ಹೊರಡುವ ಬೃಹತ್‌ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಮರುದಿನ ಮುಂಜಾನೆ ದೇಗುಲದ ಕೆರೆಯಲ್ಲಿ ವಿಗ್ರಹಗಳ ಜಲಸ್ತಂಭನದೊಂದಿಗೆ ಮುಕ್ತಾಯವಾಗುತ್ತದೆ.

ಹೊಸಪೇಟೆಯ ಧರ್ಮ ಗುಡ್ಡದಲ್ಲಿ ವಿಜೃಂಭಣೆಯ ದೇವರ ಬನ್ನಿ ಉತ್ಸವ

ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ಹಂಪಿ ಪ್ರದೇಶದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈಗಿನ ಮೈಸೂರು ದಸರೆಗೂ ಹಂಪಿ ನೆಲವೇ ಪ್ರೇರಣೆ. ಹೊಸಪೇಟೆ ಭಾಗದಲ್ಲಿ ಆ ಪರಂಪರೆಯನ್ನು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಸೋಲರಿಯದ 7 ಸಾವಿರ ಸೈನಿಕರುಳ್ಳ ಬೇಡರ ಪಡೆಯಿತ್ತು. ಆ ಬೇಡರ ವಂಶಸ್ಥರೇ ಇಂದಿಗೂ ದಸರಾ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಧರ್ಮ ಗುಡ್ಡದಲ್ಲಿ ದೇವರ ಬನ್ನಿ ಮುಡಿಯಲಾಗುತ್ತದೆ. ಹೊಸಪೇಟೆಯ ಏಳುಕೇರಿ, ಕಮಲಾಪುರದ ಏಳುಕೇರಿ ಮತ್ತು ನಾಗೇನಹಳ್ಳಿ, ಬಸವನದುರ್ಗ ಸೇರಿ ವಿವಿಧ ಹಳ್ಳಿಗಳಲ್ಲಿ ಶಕ್ತಿ ದೇವತೆಗಳನ್ನು ದೇವರ ಗುಡಿಗಳಲ್ಲಿ ಪ್ರತಿಷ್ಠಾಪಿಸಿ 9 ದಿನದವರೆಗೆ ಪೂಜಿಸಲಾಗುತ್ತದೆ. ನಂತರ ನಗರಕ್ಕೆ ಆಗಮಿಸಿ ಇಡೀ ದಿನ ಭಜನೆ, ಕೋಲಾಟ ನಡೆಯುತ್ತದೆ. ಮಾರನೇ ದಿನ ‘ಊರಬನ್ನಿ’ ನಡೆಯುತ್ತದೆ. ಆಯುಧ ಪೂಜೆದಿನ ಧರ್ಮದಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ‘ದೇವರ ಬನ್ನಿ’ ಉತ್ಸವ ಆಚರಣೆಯಲ್ಲಿದೆ.

 

ಮೈಸೂರು ಶಾಂತಿ ಕಾಪಾಡಿದ ಚಾಮುಂಡೇಶ್ವರಿ ದೇವಿ: ಮಹಿಷ ದಸರವೂ ಇಲ್ಲ, ಚಾಮುಂಡಿ ಬೆಟ್ಟ ಚಲೋನೂ ಇಲ್ಲ!

ಯಾದಗಿರಿ ಬೆಟ್ಟದಲ್ಲಿ ಸಂಭ್ರಮದ ನಾಡಹಬ್ಬ

ಯಾದಗಿರಿಯ ಭುವನೇಶ್ವರಿ ದೇವಿ ಮಂದಿರ ಟ್ರಸ್ಟ್‌ನಿಂದ 42 ವರ್ಷಗಳಿಂದ ಇಲ್ಲಿನ ಐತಿಹಾಸಿಕ ಬೆಟ್ಟದಲ್ಲಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ಬೆಟ್ಟದಲ್ಲಿರುವ ಭುವನೇಶ್ವರಿ ದೇವಿ ಗುಡಿಯಲ್ಲಿ ನಾಡಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಇಡೀ ಬೆಟ್ಟಕ್ಕೆ ವರ್ಣರಂಜಿತ ಲೈಟುಗಳಿಂದ ಸಿಂಗರಿಸಲಾಗುತ್ತದೆ. ಅ.15ರ ಭಾನುವಾರದಿಂದ ಇಲ್ಲಿ 42ನೇ ವರ್ಷದ ಆಚರಣೆಗೆ ಘಟಸ್ಥಾಪನೆ, ಧ್ವಜಾರೋಹಣ, ಮಾಲಾ ಧಾರಣಾ ಸೇರಿದಂತೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ನವರಾತ್ರಿಯ 9 ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ದೇವಿ ಆರಾಧಕರಾಗಿರುವ ಮಲ್ಲಣ್ಣ ಶಿವರಾಮ ಕಟ್ಟೀಮನಿ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತವೆ.

ನಾಡಹಬ್ಬಕ್ಕೆ ಹೇಮಗುಡ್ಡ ದಸರೆಯೇ ಪ್ರೇರಣೆ

ಮೈಸೂರು ದಸರಾ ಪ್ರಾರಂಭವಾಗಿದ್ದೇ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ನಡೆಯುತ್ತಿದ್ದ ಅದ್ದೂರಿ ದಸರೆಯ ಪ್ರೇರಣೆಯಿಂದ ಎನ್ನುವುದು ಇತಿಹಾಸ. ಕುಮ್ಮಟ ದುರ್ಗದ ಅರಸರಾದ ಕಂಪಿಲರಾಯ, ಕುಮಾರರಾಮರ ಕಾಲದಲ್ಲಿ ಹೇಮಗುಡ್ಡದಲ್ಲಿ ದುರ್ಗಾಪರಮೇಶ್ವರಿ ಸ್ಥಾಪಿಸಿ ದಸರಾ ಆಚರಣೆ ಆರಂಭಿಸಿದರು. ಇದಾದ ನಂತರ ಚಿನ್ನದ ಅಂಬಾರಿ ಮೈಸೂರು ಸೇರಿತು ಎಂಬ ಐತಿಹ್ಯವಿದೆ. ಗಂಗಾವತಿ ನಗರದಿಂದ 11 ಕಿ.ಮೀ.ದೂರದ ಹೇಮಗುಡ್ಡದಲ್ಲಿ ದಸರಾ ಉತ್ಸವಕ್ಕೆ ಸಿದ್ಧತೆ ನಡೆದಿದ್ದು, 9 ದಿನ ಕಾಲ ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೇಮಗುಡ್ಡದ ಕಲ್ಯಾಣ ಮಂಟಪದಲ್ಲಿ ವೇದಿಕೆ ಸಿದ್ಧಗೊಂಡಿದೆ. 39 ವರ್ಷದಿಂದ ದಸರಾ ಉತ್ಸವ ನಡೆಯುತ್ತಿದ್ದು, ಅ.15ರಿಂದ 24ರ ವರೆಗೆ ಶರನ್ನವರಾತ್ರಿ ಕಾರ್ಯಕ್ರಮ ನಡೆಯಲಿದೆ.

ಧಾರವಾಡದಲ್ಲೂ ದಸರಾ ಸಂಭ್ರಮ

ಮೈಸೂರು ದಸರಾ ಉತ್ಸವಕ್ಕೆ ಸಂವಾದಿಯಾಗಿ ಧಾರವಾಡ ಜಂಬೂ ಸವಾರಿ ಉತ್ಸವ 18 ವರ್ಷಗಳಿಂದ ನಡೆಯುತ್ತಿದೆ. ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ದಸರಾ ಮೆರವಣಿಗೆ ಅ.23ರಂದು ಮಧ್ಯಾಹ್ನದ ಹೊತ್ತಿಗೆ ಈಶ್ವರ ದೇವಸ್ಥಾನ ಬಳಿ ಮುಖ್ಯ ವೇದಿಕೆಯಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಗಾಂಧಿನಗರ ಬಂಡೆಮ್ಮ ದೇವಸ್ಥಾನದಲ್ಲಿ ದೇವಿಗೆ ಹಾಗೂ ಅಂಬಾರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಎರಡು ಆನೆಗಳು ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರೆ, ಮುಂದಿನ ಸಾಲಿನಲ್ಲಿ ಸಾಗುವ ನಾನಾ ತಂಡಗಳ ಕಲಾ ಪ್ರದರ್ಶನ ಮೆರವಣಿಗೆಯ ವೈಭವ ಹೆಚ್ಚಿಸುತ್ತದೆ.

Follow Us:
Download App:
  • android
  • ios