ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯವಿಲ್ಲ: ಉಲ್ಟಾ ಹೊಡೆದರೇ ಸಿಎಂ ಸಿದ್ದರಾಮಯ್ಯ
ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳಲ್ಲಿ ಯಾವುದೇ ವಸ್ತ್ರಸಂಹಿತೆ ಕಡ್ಡಾಯವಿಲ್ಲ. ಭಕ್ತಾದಿಗಳು ತಮ್ಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಬರಬಹುದು.
ಬೆಂಗಳೂರು (ಜ.31): ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳಲ್ಲಿ ಯಾವುದೇ ವಸ್ತ್ರಸಂಹಿತೆ ಕಡ್ಡಾಯವಿಲ್ಲ. ಭಕ್ತಾದಿಗಳು ತಮ್ಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಬರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರವೀಂದ್ರಕಲಾ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಬಗ್ಗೆ ನಾವು ಯಾವುದೇ ನಿರ್ಬಂಧ ಹೇರಿಲ್ಲ. ರಾಜ್ಯದ ದೇವಸ್ಥಾನ ಪ್ರವೇಶಕ್ಕೆ ಇಂತದೇ ವಸ್ತ್ರಗಳನ್ನು ಧರಿಸಿ ಬರಬೇಕೆಂದು ನಾವು ಎಲ್ಲೂ ಹೇಳಲಿಲ್ಲ. ದೇವರು ಏನು ಇಂಥದ್ದೇ ಬಟ್ಟೆ ಹಾಕಿಕೊಂಡು ಬಾ ಅಂತ ಹೇಳಿಲ್ಲ. ಭಕ್ತಾದಿಗಳು ತಮ್ಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಬರಬಹುದು. ಶುದ್ಧವಾದ ಭಕ್ತಿ ಇರಬೇಕು ಅಷ್ಟೇ ಎಂದು ಹೇಳಿದರು.
ಹೊಸಪೇಟೆ: ಹಂಪಿಯಲ್ಲಿ ದೇವರ ದರ್ಶನಕ್ಕೂ ಬಂತು ಡ್ರೆಸ್ ಕೋಡ್..!
ಇತ್ತೀಚೆಗೆ ವಿಶ್ವ ಪ್ರಸಿದ್ಧ ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಚೆಡ್ಡಿ, ಬರ್ಮೋಡಾ, ಹರಿದ ಜೀನ್ಸ್ ಪ್ಯಾಂಟ್‌ಗಳನ್ನು ಧರಿಸಿ ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತಾದಿಗಳಿಗೆ ಜಿಲ್ಲಾಡಳಿತದಿಂದ ವಸ್ತ್ರ ಸಂಹಿತೆ ಜಾರಿ ಮಾಡಲಾಗಿತ್ತು. ಈ ಕುರಿತು ರಾಜ್ಯ ವಾರ್ತಾ ಇಲಾಖೆಯಿಂದ ವಿರುಪಾಕ್ಷೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಲಾಗಿದೆ ಎಂಬ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇನ್ನು ಸ್ಥಳೀತ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಕೂಡ ದೇವಸ್ಥಾನಕ್ಕೆ ಚೆಡ್ಡಿಗಳನ್ನು ಧರಿಸಿ ಬಂದವರಿಗೆ ಪಂಚೆ, ಶಲ್ಯವನ್ನು ಕೊಟ್ಟು ಡ್ರೆಸ್ ಕೋಡ್ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ದೇವಸ್ಥಾನಗಳಲ್ಲಿ ಯಾವುದೇ ವಸ್ತ್ರ ಸಂಹಿತೆ ಜಾರಿಗೊಳಿಸಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಸರ್ಕಾರದ ತೀರ್ಮಾನದ ಬಗ್ಗೆ ಉಲ್ಟಾ ಹೊಡೆದಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾರ್ಷಿಕ ಪ್ರಶಸ್ತಿ ಪ್ರದಾನದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇಂದು ಜೀವಮಾನ ಪ್ರಶಸ್ತಿ ಪಡೆದ ಎಲ್ಲರಿಗೂ ಶುಭಾಶಯಗಳು. ಪ್ರಶಸ್ತಿ ಪಡೆದ ಎಲ್ಲರೂ ಅವರ ಅವರ ಕ್ಷೇತ್ರಗಳಲ್ಲಿ ಮತಷ್ಟು ಸಾಧನೆ ಮಾಡಲಿ. ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರ ಪ್ರಶಸ್ತಿ ಕೊಡುತ್ತಾ ಬಂದಿದೆ. ಆದ್ರೆ ಕಳೆದ ಸರ್ಕಾರ ಈ ಪ್ರಶಸ್ತಿ ಕಾರ್ಯಕ್ರಮ ನಡೆಸಲಿಲ್ಲ ಅದು ಏಕೆ ಅಂತ ಗೊತ್ತಿಲ್ಲ. ಇನ್ನು ಮುಂದೆ ಆಯಾ ವರ್ಷದ ಪ್ರಶಸ್ತಿ ಅದೇ ವರ್ಷ ಕೊಡಬೇಕು ಅಂತ ಸೂಚಿಸಿದ್ದೀನಿ ಎಂದರು.
ಹಂಪಿ ಉತ್ಸವ 2024ಕ್ಕೆ ನಟ ದರ್ಶನ್, ಡಾಲಿ ಧನಂಜಯ್, ರವಿಚಂದ್ರನ್ ಸೇರಿ ಸ್ಟಾರ್ ನಟರ ಆಗಮನ
ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದ್ದವರನ್ನ ಗುರುತಿಸಿವುದು ಸರ್ಕಾರದ ಕೆಲಸ. ನಮ್ಮ ಸರ್ಕಾರ ಪ್ರಶಸ್ತಿ ಕೊಡುವ ಸಂಪ್ರದಾಯವನ್ನ ಮುಂದುವರೆಸಲಿದೆ. ನಾನು ಎಂದೂ ಯಾವುದೇ ಪ್ರಶಸ್ತಿ ಆಯ್ಕೆಯಲ್ಲಿ ಮಧ್ಯಪ್ರವೇಶ ಮಾಡಿಲ್ಲ. ರವೀಂದ್ರ ಕಲಾಕ್ಷೇತ್ರವನ್ನ ನವೀಕರಣ ಮಾಡಬೇಕು ಅಂತ ಮರುಳಸಿದ್ದಪ್ಪ ಹೇಳಿದ್ದಾರೆ. ಈ ಹಿಂದೆ ಇರುವ ಬಯಲು ಮಂದಿರವನ್ನ ಸ್ವಲ್ಪ ಸರಿಮಾಡಬೇಕು ಅಷ್ಟೇ. ರವೀಂದ್ರ ಕಲಾಕ್ಷೇತ್ರ ಅಭಿವೃದ್ಧಿಗೆ 34 ಕೋಟಿ ರೂ. ಖರ್ಚು ಮಾಡಲು ಇನ್ನೂ ಅನುಮೋದನೆ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.