ಚಾಮರಾಜನಗರ[ಫೆ.17]: ‘ಜಾತಿ, ಜಾತಿ ಎನ್ನುವ ಕೊಳಕು ಮನಸ್ಥಿತಿಯಿಂದ ನಾನು ಮತ್ತೇ ಮುಖ್ಯಮಂತ್ರಿ ಆಗುವುದನ್ನು ತಡೆದರು. ನನ್ನ ವಿರೋಧಿಸುವರು ಮನೆಯಲ್ಲಿ ಅನ್ನಭಾಗ್ಯದ ಅಕ್ಕಿ ಅನ್ನ ತಿನ್ನುತ್ತಿಲ್ಲವೇ?’ ಎಂದು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಶನಿವಾರ ನಡೆದ ಸಂಸದ ಆರ್‌.ಧ್ರುವನಾರಾಯಣರ ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಯಾವುದೇ ಜಾತಿ ಹೆಸರೆತ್ತದೆ ಜಾತಿಯ ಅಸಮಾನತೆ ಬಗ್ಗೆ ಅವರು ಮಾತನಾಡಿದರು.

4 ಕೋಟಿ ಮಂದಿಗೆ ಪಡಿತರ ಚೀಟಿ ನೀಡಿದ್ದೇನೆ. ಜಾತಿಯಿಂದಾಗಿ ನನ್ನ ವಿರೋಧಿಸುವರ ಮನೆಯಲ್ಲಿ ಅನ್ನ ತಿನ್ನುವುದಿಲ್ಲವೇ? ಜಾತಿಯ ಒಂದೇ ಕಾರಣಕ್ಕೆ ಅನ್ನ ತಿಂದು ವಿರೋಧಿಸುತ್ತಾರೆ ಎಂದರು. ಎಲ್ಲರಿಗೂ ಸಾಲಮನ್ನಾ ಮಾಡಿದ್ದೀನಿ, ಇದರಿಂದ ನನ್ನ ವಿರೋಧ ಮಾಡುವವರಿಗೇ ಜಾಸ್ತಿ ಅನೂಕೂಲವಾಗಿರುವುದು. ಹಾಲಿಗೆ ಸಬ್ಸಿಡಿ ಕೊಟ್ಟೆ, ನನ್ನ ವಿರೋಧ ಮಾಡುವವರೇ ಹೆಚ್ಚು ಹಾಲು ಕರೆಯುವವರು. ನೋಡಿ ಹೇಗಿದೆ ವ್ಯವಸ್ಥೆ? ಆದ್ದರಿಂದಲೇ ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಬಲಾಢ್ಯರ, ಮೇಲ್ವರ್ಗದವರ ಕೈಯಲ್ಲಷ್ಟೆಇರಬಾರದು ಎಂದು ಬಾಬಾಸಾಹೇಬರು ಹೇಳಿದ್ದಾರೆ ಎಂದರು.