ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ದುಸ್ಸಾಹಸ ಬೇಡ: ಪೇಜಾವರ ಶ್ರೀ
ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಸ್ತಾಪದ ವಿರುದ್ಧ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ (ಜೂ.20): ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಸ್ತಾಪದ ವಿರುದ್ಧ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಉಂಟಾಗಿದ್ದ 2 ಪ್ರಮುಖ ಗೊಂದಲಗಳ ನಿವಾರಣೆಗೆ ಹಿಂದಿನ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಇಂದಿನ ಸರ್ಕಾರ ಅದನ್ನು ರದ್ದುಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಶ್ರೀಗಳು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಮತಾಂತರದ ಹಾವಳಿಯಿಂದಾಗಿ ತಂದೆ-ಮಕ್ಕಳು, ತಾಯಿ -ಮಕ್ಕಳು, ಗಂಡ -ಹೆಂಡತಿ ನಡುವೆ ವೈಮನಸ್ಸು ಉಂಟಾಗಿ ಕುಟುಂಬವೇ ಛಿದ್ರಗೊಂಡ ಪ್ರಸಂಗಗಳೂ ನಡೆದಿದ್ದವು. ಅದನ್ನು ತಪ್ಪಿಸುವುದಕೊಸ್ಕರ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಅನೇಕ ಕುಟುಂಬಗಳಲ್ಲಿ ಹಣ್ಣಮಕ್ಕಳು ನಾಲ್ಕು ಹಸುಗಳನ್ನು ಸಾಕಿಕೊಂಡು ಅವುಗಳ ಹಾಲು ಮಾರಿ ಬದುಕನ್ನು ಸಾಗಿಸುತ್ತಿವೆ. ಅದರೇ ರಾತ್ರೋರಾತ್ರಿ ಗೋಕಳ್ಳರು ನುಗ್ಗಿ ತಲವಾರು ಝಳಪಿಸಿ ಗೋವುಗಳನ್ನು ಕದ್ದೊಯ್ದ, ಆ ಕುಟುಂಬಕ್ಕೆ ಬದುಕನ್ನು ಸಾಗಿಸಲು ಯಾವ ಆಧಾರವೂ ಇಲ್ಲದಂತಾದ ಪ್ರಸಂಗಗಳೂ ನಡೆದಿವೆ. ಅದಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಿನ ಸರ್ಕಾರ ಜಾರಿಗೆ ತಂದಿತ್ತು.
Udupi: 40 ಅಡಿ ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ
ಆದರೆ, ಪ್ರಸ್ತುತ ಸರ್ಕಾರ ಈ ಎರಡೂ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಮಾಡಿದ್ದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ, ಜನಪ್ರತಿನಿಧಿಗಳೂ ನಿಮ್ಮವರೇ ಇದ್ದಾರೆ, ಅವರ ಮೂಲಕ ಈ ಕಾಯ್ದೆಗಳ ರದ್ದತಿಯ ಬಗ್ಗೆ ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ, ಅದರಂತೆ ಕಾಯ್ದೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ ಎಂದು ಶ್ರೀಗಳು ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ರದ್ದು ಬೇಡ: ಗೋಹತ್ಯೆ ನಿಷೇದ ಕಾಯ್ದೆ ವಾಪಸ್ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವುದು ಸೂಕ್ತ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಹೇಳಿದರು. ಪಟ್ಟಣದ ಹೊಳೇ ಆಂಜನೇಯಸ್ವಾಮಿ ದೇಗುಲದ ಪುನರ್ ಪ್ರತಿಷ್ಠಾಪನಾ ಕಾರ್ಯ ಕೈಗೊಂಡ ನಂತರ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಕುರಿತ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗೋವುಗಳು ಭಾರತೀಯ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿವೆ. ಇಂಥ ಗೋವುಗಳ ಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ರದ್ದುಪಡಿಸುವುದು ಸಮಂಜಸವಲ್ಲ. ಅದರ ಬದಲು ಕಾಯ್ದೆಗಳನ್ನು ಮತ್ತಷ್ಟುಕಠಿಣ ಮಾಡಿ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಬೇಕು. ಸರ್ಕಾರ ಯಾವುದೇ ಒಂದು ಕೋಮಿನ ಜನರನ್ನು ಓಲೈಸಲು ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಚಿಂತನೆ ನಡೆಸಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಈ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟಸಚಿವರು ಮರುಪರಿಶೀಲನೆ ನಡೆಸಬೇಕು ಎಂದರು.
ಬಿಜೆಪಿ ಮೊದಲು ಎಲ್ಲರ ಖಾತೆಗೆ 15 ಲಕ್ಷ ಹಾಕಿ ನಂತರ ನಮ್ಮ ವಿರುದ್ಧ ಪ್ರತಿಭಟಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ತಾಯಿ ಸ್ಥಾನದಲ್ಲಿ ಗೋವನ್ನಿಟ್ಟು ಪೂಜಿಸುತ್ತೇವೆ. ಆದರೆ, ಸಚಿವ ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋ ಕಳ್ಳಸಾಗಣೆ, ಸಾಮೂಹಿಕ ಗೋಹತ್ಯೆ ಮಾಡುವ ಕಸಾಯಿಖಾನೆಗಳು ತಲೆಎತ್ತಲಿವೆ. ಈ ಬಗ್ಗೆ ಸರ್ಕಾರ ಮುಂದಿನ ಸಾಧಕ-ಬಾಧಕಗಳ ಜೊತೆಗೆ ಸಾಧು-ಸಂತರ ಸಲಹೆ ಪಡೆದು ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.