ಬೆಂಗಳೂರು [ಮಾ.01]:  ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಖಡ್ಗ ಮತ್ತು ಬಂದೂಕು ಹಿಡಿದು ಹೋರಾಡಿದ್ದರು. ಬ್ರಿಟಿಷರಿಂದ ಬಂಧನಕ್ಕೊಳಗಾದ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಪ್ಪು ಮಾಡಿರುವುದಾಗಿ ಹೇಡಿಯಂತೆ ಪತ್ರ ಬರೆದು ಕ್ಷಮೆಯಾಚಿಸಿದ್ದರು.  ಅಂತಹವರೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್.ದೊರೆಸ್ವಾಮಿ ತಿಳಿಸಿದ್ದಾರೆ.

ನಗರದ ಶಾಸಕರ ಭವನದ ಸಭಾಂಗಣದಲ್ಲಿದಿವ್ಯಚಂದ್ರ ಪ್ರಕಾಶನ ಶನಿವಾರ ಹಮ್ಮಿಕೊಂಡಿದ್ದ ಎನ್ .ಪದ್ಮನಾಭರಾವ್ ಅವರ ‘ಸ್ವಾತಂತ್ರ್ಯ ಹೋರಾಟದ ಕರ್ನಾಟಕದ ಕಣ್ಮಣಿಗಳು’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಸಾವಿರಾರು ಜನ ಶ್ರಮಿಸಿದ್ದಾರೆ. ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಬಾಲಗಂಗಾಧರನಾಥ ತಿಲಕ್ ಸೇರಿದಂತೆ ಹಲವರು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಹೋರಾಡಿದ್ದರು. ಅಂತಹ ನಾಯಕರಿಗೆ ಮತ್ತೊಬ್ಬರನ್ನು ಹೊಲಿಕೆ ಮಾಡುವುದು ಸರಿಯಲ್ಲ. ಗಾಂಧಿಗೆ ಮತ್ಯಾರೂ ಸಾಟಿಯಿಲ್ಲ. ಅದೇ ರೀತಿ ನಾನು ಎಂದೆಂದಿಗೂ ದೊರೆ ಸ್ವಾಮಿಯೇ ವಿನಃ ನನ್ನನ್ನು ಸಾವರ್ಕರ್‌ರ ಜೊತೆ ಹೋಲಿಕೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಗಾಂಧೀಜೀಯವರ ಹೇಳಿಕೆಗಳು ಸಾವಿರಾರು ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲು ಪ್ರೇರಣೆ ನೀಡಿದ್ದವು. ಅದರಲ್ಲಿ ನನ್ನಂತಹ ಹಲವರು ಭಾಗಿಯಾಗಿದ್ದರು. ಎಲ್ಲ ಹೋರಾಟಗಾರರಿಗೂ ಅವರದ್ದೇ ಆದ ಸ್ಥಾನ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ನನ್ನದೂ ಅಳಿಲು ಸೇವೆಯಿದೆ. ಹಾಗಂತ ಇತರರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

ದೊರೆಸ್ವಾಮಿ ವಿರುದ್ಧ ಹೇಳಿಕೆ: ಯತ್ನಾಳ್ ಬೆನ್ನಿಗೆ ನಿಂತ ಬಿಜೆಪಿ...

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ದೊರೆಸ್ವಾಮಿ ಅವರ ಬಗ್ಗೆ ಅಗೌರವ ತೋರುವಂತಹ ಹೇಳಿಕೆ ನೀಡುವವರನ್ನು ಸಹಿಸಬಾರದು. ಅವರಿಂದ ತಪ್ಪೊಪ್ಪಿಗೆ ಪಡೆದುಕೊಳ್ಳಬೇಕು. ಸುಳ್ಳು ಹೇಳಿಕೆ ನೀಡುವವರನ್ನು ಸಹಿಸಿಕೊಳ್ಳವುದು ಸಹಾ ತಪ್ಪು ಮಾಡಿದಂತೆ ಆಗುತ್ತದೆ. ಆದ್ದರಿಂದ ದೊರೆಸ್ವಾಮಿ ವಿರುದ್ಧದ ಹೇಳಿಕೆ ನೀಡುವವರು ಕ್ಷಮೆ ಕೇಳುವಂತೆ ಮಾಡಬೇಕು ಎಂದರು. 

ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ

ಇದು ತಮ್ಮನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪಾಕಿಸ್ತಾನದ ಏಜೆಂಟ್ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೀಡಿರುವ ತಿರುಗೇಟು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ಎಂದಷ್ಟೇ ಹೇಳಬಲ್ಲೆ. ಇದಕ್ಕಿಂತ ಹೆಚ್ಚೇನೂ ಹೇಳಲು ಇಚ್ಚಿಸುವುದಿಲ್ಲ ಎಂದು ತಿಳಿಸಿದರು. 

ನನ್ನನ್ನು ನಕಲಿ ಹೋರಾಟಗಾರ ಎಂದು ಹೇಳುತ್ತಾರೆ. ಅದಕ್ಕೆ ಸಾಕ್ಷ್ಯ ಬೇಕು. ಆದರೆ, ಕೆಲವರು ಯಾವುದೇ ಪುರಾವೆ ಇಲ್ಲದೆ ಇಂತಹ ಹೇಳಿಕೆಗಳನ್ನು  ನೀಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕುರಿತು ಸಾಮಾನ್ಯ ಜ್ಞಾನವಿಲ್ಲದವರೂ ಮಾತನಾಡತೊಡಗಿದ್ದಾರೆ. ಇಂತಹವರು ಮೌಢ್ಯದಲ್ಲಿ ಮುಳುಗಿಹೋಗಿದ್ದಾರೆ. ಅವರ ಬಗ್ಗೆ ನನಗೆ ಯಾವುದೇ ಕೋಪ ಇಲ್ಲ. ಅನುಕಂಪ ಇದೆ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.