ಶ್ರೀಗಳಿಗೆ ಮೊದಲು ಖರೀದಿಸಿದ್ದ ‘ಡಾಡ್ಜಿ’ ಕಾರೆಂದರೆ ಎಲ್ಲಿಲ್ಲದ ಪ್ರೀತಿ
1948ರಲ್ಲಿ ಖರೀದಿಸಿದ್ದ ಡಾಡ್ಜಿ ಕಾರು ಸ್ವಾಮೀಜಿಗೆ ಅಚ್ಚುಮೆಚ್ಚು. ಏಳು ದಶಕಗಳಿಂದಲೂ ಜತನವಾಗಿ ಕಾಪಾಡಿಕೊಂಡು ಬಂದಿರುವ ಕಾರು ಇಂದಿಗೂ ಶ್ರೀಗಳ ಕಾರಿನ ಗ್ಯಾರೇಜಿನಲ್ಲಿ (ಶೆಡ್) ಚೂರೂ ಮಾಸದ ಸ್ಥಿತಿಯಲ್ಲಿದೆ.
ತುಮಕೂರು : ನಡೆದಾಡುವ ದೇವರಿಗೆ ತ್ರಿವಿಧ ದಾಸೋಹ, ಗೋ ಸಾಕಾಣೆ ಜತೆ ಕಾರಿನ ಬಗ್ಗೆಯೂ ಆಸಕ್ತಿ ಇತ್ತು. ಕಳೆದ ಏಳು ದಶಕಗಳಿಂದ ಕಾರಿನಲ್ಲಿ ಸಂಚರಿಸುತ್ತಿರುವ ಅವರಿಗೆ 1948ರಲ್ಲಿ ಖರೀದಿಸಿದ್ದ ಡಾಡ್ಜಿ ಕಾರು ಅಚ್ಚುಮೆಚ್ಚು.
ಏಳು ದಶಕಗಳಿಂದಲೂ ಜತನವಾಗಿ ಕಾಪಾಡಿಕೊಂಡು ಬಂದಿರುವ ಕಾರು ಇಂದಿಗೂ ಶ್ರೀಗಳ ಕಾರಿನ ಗ್ಯಾರೇಜಿನಲ್ಲಿ (ಶೆಡ್) ಚೂರೂ ಮಾಸದ ಸ್ಥಿತಿಯಲ್ಲಿದೆ.
‘ಎಂವೈಟಿ -101’ ಇದೇ ನಂಬರ್‌ನ ಡಾಡ್ಜಿ ಕಾರಿನಲ್ಲಿ ಶ್ರೀಗಳು ಮೂರು ದಶಕಗಳ ಕಾಲ ಊರೂರು ಸಂಚರಿಸಿದ್ದರು. ಸುತ್ತೂರು ಮಠದಿಂದ ಹಿಡಿದು ಸಿದ್ಧಗಂಗಾ ಮಠಕ್ಕೆ ಆಪ್ತವಾಗಿರುವ ಎಲ್ಲಾ ಮಠಗಳಿಗೂ ಅನಾದಿ ಕಾಲದಿಂದಲೂ ಸಂಪರ್ಕ ಸೇತುವೆಯಾಗಿ ನಿಂತಿದ್ದು ಇದೇ ಕಾರು. ಹೀಗಾಗಿ ಅವರಿಗೆ ಈ ಕಾರೆಂದರೆ ಬಲು ಇಷ್ಟ. ಇದೇ ಕಾರಣದಿಂದ ಪ್ರತಿ ಹಬ್ಬಕ್ಕೂ ಈ ಕಾರಿಗೆ ವಿಭೂತಿ, ತಿಲಕ ತಿದ್ದಿ ವಿಶೇಷ ಪೂಜೆ ಮಾಡಲಾಗುತ್ತಿತ್ತು.
ತಿಳಿ ನೀಲಿ ಬಣ್ಣದಿಂದ ಕಂಗೊಳಿಸುತ್ತಿರುವ ಕಾರು ಹಾಗೂ ಇಂಜಿನ್ ಇಂದಿಗೂ ಸುಸ್ಥಿತಿಯಲ್ಲೇ ಇದೆ. ಅಲ್ಲದೆ, ಶ್ರೀಗಳು ಬಳಕೆ ಮಾಡಿದ ಆರೂ ಕಾರುಗಳೂ ಸುಸ್ಥಿತಿಯಲ್ಲೇ ಇರುವುದು ಮತ್ತೊಂದು ವಿಶೇಷ.
ಶ್ರೀಗಳು ಬಳಸಿದ್ದ ಕಾರುಗಳ ಮ್ಯೂಸಿಯಂಗೆ ಚಿಂತನೆ
ಶ್ರೀಗಳು ಮೊದಲು ಬಳಕೆ ಮಾಡಿದ ಡಾಡ್ಜಿ ಕಾರು ಸೇರಿದಂತೆ ಅಂಬಾಸಿಡರ್, ಶೆವರ್‌ಲೆಟ್, ನಿಸ್ಸಾನ್, ಮರ್ಸಿಡೀಸ್ ಬೆಂಜ್ ಕಾರುಗಳಲ್ಲಿ ಇತ್ತೀಚಿಗಿನ ಮರ್ಸಿಡೀಸ್ ಬೆಂಜ್ ಹೊರತುಪಡಿಸಿ ಉಳಿದೆಲ್ಲಾ ಕಾರುಗಳ ಪ್ರದರ್ಶನ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಮಠದ ಆವರಣದಲ್ಲಿರುವ ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಕೇಂದ್ರದಲ್ಲಿ ವಿಶೇಷ ಮ್ಯೂಸಿಯಂ ವ್ಯವಸ್ಥೆಗೆ ಚಿಂತಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಕಾರುಗಳ ನೋಂದಣಿ ಸಂಖ್ಯೆ 101
111 ವರ್ಷ ಜೀವಿಸಿ ಸಾರ್ಥಕ ಸೇವೆ ಮೆರೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಬಳಕೆ ಮಾಡಿರುವ ಎಲ್ಲಾ ಕಾರುಗಳ ನೋಂದಣಿ ಸಂಖ್ಯೆಯೂ ‘101’ ಆಗಿರುವುದು ಮತ್ತೊಂದು ವಿಶೇಷ. ತಮ್ಮ ಮೊದಲ ಕಾರು ಡಾಡ್ಜಿಯಿಂದ ಹಿಡಿದು ಇತ್ತೀಚಿನ ಕಾರಿನವರೆಗೆ ಎಲ್ಲ ಕಾರುಗಳ ನೋಂದಣಿ ಸಂಖ್ಯೆಯೂ ‘101’ ಅಥವಾ ‘1001’ ಇದೆ. ಅಂಬಾಸಿಡರ್ ಕಾರಿನ ಸಂಖ್ಯೆ ಮಾತ್ರ ಕೆ.ಎ.-06 ಎಂ-5266 ಇದೆ.
ಅಂಬಾಸಿಡರ್ ಕಾರು ಸ್ವಾಮೀಜಿ ಪಾಲಿಗೆ ಬೆಂಜ್
ಸ್ಥಳೀಯವಾಗಿ ಓಡಾಡಲು ಸ್ವಾಮೀಜಿ ಅವರು ಅತಿ ಹೆಚ್ಚು ಬಳಸುತ್ತಿದ್ದ ಕಾರು ಅಂಬಾಸಿಡರ್. ದೂರದ ಪ್ರಯಾಣಕ್ಕೆ ಮಾತ್ರ ಮರ್ಸಿಡೀಸ್ ಬೆಂಜ್ ಬಳಸುತ್ತಿದ್ದರು. ಚಾಲಕರ ಬಳಿ ಸ್ವಾಮೀಜಿಗಳು ಅಂಬಾಸಿಡರ್ ಕಾರನ್ನೇ ಬೆಂಜ್ ಕಾರೆಂದು ಕರೆಯುತ್ತಿದ್ದರು. 2006ರ ಮಾಡೆಲ್‌ನ ಅಂಬಾಸಿಡರ್ ಕಾರು ಶ್ರೀಗಳ ಕಾರಿನ ಶೆಡ್‌ಗೆ ಶೆವರ್ಲೆಟ್ ಹಾಗೂ ನಿಸಾನ್ ಕಾರುಗಳು ಬರುವ ವೇಳೆಗೆ 65 ಸಾವಿರ ಕಿ.ಮೀ. ಸಂಚರಿಸಿತ್ತು. ಸ್ವಾಮೀಜಿ ಅವರನ್ನು ಹೊರತುಪಡಿಸಿ ಕಾರಿನಲ್ಲಿ ಬೇರಾರೂ ಸಂಚರಿಸಿಲ್ಲ.
ಸ್ವಾಮೀಜಿ ಆಪ್ತ ಚಾಲಕರ ಬಳಗದ ಚಾಲಕರೊಬ್ಬರ ಪ್ರಕಾರ, ತಮ್ಮ ಸಂಗ್ರಹದಲ್ಲಿರುವ ಕಾರುಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಕಿ.ಮೀ. ಸಂಚರಿಸಿದ್ದಾರೆ. ಅದಕ್ಕೂ ಮೊದಲು ಅವರು ಕುದುರೆ ಏರಿ ಕ್ಷೇತ್ರ ಪರ್ಯಟನೆ ಮಾಡುತ್ತಿದ್ದರು.
ಮೊದಲು ಪುಟ್ಟಣ್ಣ, ಶಿವಣ್ಣ, ವಿಲ್ಲೀಸ್ ಚೀಫ್, ರಾಜಶೇಖರಯ್ಯ ಎಂಬ ಚಾಲಕರಿದ್ದರು. ಅವರ ಬಳಿಕ ಶ್ರೀಗಳು ಲಿಂಗೈಕ್ಯವಾಗುವವರೆಗೆ ಅವರಿಗೆ ಸಾರಥಿಯಾಗಿದ್ದವರು ಮಹದೇವಸ್ವಾಮಿ ಅವರು. ಅವರ ಅನುಪಸ್ಥಿತಿಯಲ್ಲಿ ಕಿರಿಯ ಶ್ರೀಗಳ ಸಾರಥಿಯಾಗಿರುವ ಸದಾಶಿವಯ್ಯ, ಶ್ರೀಗಳಿಗೆ ಚಾಲಕರಾಗಿ ತೆರಳುತ್ತಿದ್ದರು.
ವರದಿ : ಶ್ರೀಕಾಂತ್ ಎನ್. ಗೌಡಸಂದ್ರ