ದರ್ಶನ್‌ ಗ್ಯಾಂಗ್‌ ಜಾಮೀನಿಗೆ ನೀಡಿರುವ ಕಾರಣಗಳೇನು ಗೊತ್ತಾ?

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಣ ಮಾಡಿ ಕರೆತಂದು, ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಅರ್ಜಿದಾರರ ಮೇಲಿದೆ. 

Do you Know the Reasons Why Darshan Gang was Granted Bail gvd

ಬೆಂಗಳೂರು (ಡಿ.14): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್‌, ಆತನ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್‌ ಆರ್‌.ನಾಗರಾಜು, ದರ್ಶನ್‌ ಕಾರು ಚಾಲಕ ಎಂ.ಲಕ್ಷ್ಮಣ್‌, ಆಪ್ತರಾದ ಅನುಕುಮಾರ್‌, ಜಗದೀಶ್‌ ಮತ್ತು ಪ್ರದೋಷ್‌ ಎಸ್‌. ರಾವ್‌ ಅವರ ಜಾಮೀನು ಅರ್ಜಿಗಳನ್ನು ಪುರಸ್ಕರಿಸಿ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಪೀಠ ಶುಕ್ರವಾರ ತೀರ್ಪು ನೀಡಿತು. ಅರ್ಜಿದಾರ ಆರೋಪಿಗಳು ತಲಾ ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು. 

ಸಮಂಜಸ ಕಾರಣಗಳಿಲ್ಲದೆ ಹಾಗೂ ವಿಚಾರಣಾ ನ್ಯಾಯಾಲಯದ ಅನುಮತಿಯಿಲ್ಲದೆ ವಿಚಾರಣೆಗೆ ಗೈರಾಗುವಂತಿಲ್ಲ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಸಾಕ್ಷ್ಯಾಧಾರಗಳನ್ನು ತಿರುಚುವುದಕ್ಕೆ ಯತ್ನಿಸಬಾರದು. ಇಂತಹದ್ದೇ ಕೃತ್ಯದಲ್ಲಿ ಭಾಗಿಯಾಗಬಾರದು. ಪ್ರಕರಣವು ಇತ್ಯರ್ಥವಾಗುವವರೆಗೂ ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಅದರ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ಜಾಮೀನು ಮಂಜೂರಾತಿಗೆ ಹೈಕೋರ್ಟ್‌ ಷರತ್ತು ವಿಧಿಸಿದೆ. ಇದರಿಂದ ಬೆನ್ನುಹುರಿ ಸಮಸ್ಯೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ, ಆಸ್ಪತ್ರೆಗೆ ದಾಖಲಾಗಿರುವ ದರ್ಶನ್, ಚಿಕಿತ್ಸೆಯ ಬಳಿಕ ಮತ್ತೆ ಜೈಲಿಗೆ ಹೋಗುವ ಅಗತ್ಯ ಇಲ್ಲವಾಗಿದೆ. ಮತ್ತೊಂದೆಡೆ, ಕಳೆದ 6 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಪವಿತ್ರಾ ಗೌಡ ಇತರೆ ಅರ್ಜಿದಾರರಿಗೆ ಬಿಡುಗಡೆಯ ಭಾಗ್ಯ ಸಿಕ್ಕಂತಾಗಿದೆ.

ಸುಳ್ಳು ಸರ್ಜರಿ.. ಡ್ರಾಮಾ ಭರ್ಜರಿ.. ದರ್ಶನ್ ರಿವರ್ಸ್ ಸ್ಕ್ರೀನ್ ​ಪ್ಲೇ: ಹೈಕೋರ್ಟ್ ಎದುರು ಹೇಳಿದ ದಿನ ನಡೆಯಲಿಲ್ಲ ಸರ್ಜರಿ!

ಜಾಮೀನಿಗೆ ನೀಡಿರುವ ಕಾರಣಗಳೇನು?: ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಣ ಮಾಡಿ ಕರೆತಂದು, ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಅರ್ಜಿದಾರರ ಮೇಲಿದೆ. ದಾಖಲೆಗಳನ್ನು ಪರಿಶೀಲಿಸಿದರೆ ಬೆಂಗಳೂರಿಗೆ ಬರುವ ಮುನ್ನ ರೇಣುಕಾಸ್ವಾಮಿ, ‘ತಾನು ತನ್ನ ಸ್ನೇಹಿತರೊಂದಿಗೆ ಇದ್ದೇನೆ. ಮಧ್ಯಾಹದ ಊಟಕ್ಕೆ ಮನೆಗೆ ಬರುವುದಿಲ್ಲ’ ಎಂದು ಪೋಷಕರಿಗೆ ತಿಳಿಸಿದ್ದಾರೆ. ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಮಾರ್ಗ ಮಧ್ಯೆ ಆರೋಪಿಗಳೊಂದಿಗೆ ಬಾರ್‌ ಮತ್ತು ರೆಸ್ಟೋರೆಂಟ್‌ಗೆ ಹೋಗಿ ಮದ್ಯ ಖರೀದಿ ಮಾಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಸ್ವಇಚ್ಛೆಯಿಂದ ಆರೋಪಿಗಳೊಂದಿಗೆ ಬೆಂಗಳೂರಿಗೆ ಬಂದಿರುವುದು ತಿಳಿಯುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ರೇಣುಕಾಸ್ವಾಮಿಯನ್ನು ಆರೋಪಿಗಳು ಕೈ-ಕಾಲುಗಳಿಂದ ಹೊಡೆದಿದ್ದಾರೆ. ಎರಡು ಮರದ ರೆಂಬೆ, ಮರದ ಲಾಠಿ ಮತ್ತು ನೈಲಾನ್‌ ದಾರದಲ್ಲಿ ಹಲ್ಲೆ ಮಾಡಿರುವುದು ದಾಖಲೆಯಿಂದ ಕಂಡುಬರುತ್ತದೆ. ಈ ಆಯುಧಗಳನ್ನು ನೋಡಿದರೆ, ಹಲ್ಲೆ ಮಾಡಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲು ಆರೋಪಿಗಳು ಸಿದ್ಧವಾಗಿದ್ದರು ಎಂದು ಹೇಳಲಾಗದು. ಅವರು ನಿಜವಾಗಿಯೂ ಕೊಲೆ ಮಾಡಲು ಉದ್ದೇಶಿಸಿದ್ದರೇ? ರೇಣುಕಾಸ್ವಾಮಿ ದೇಹದ ಮೇಲೆ 39 ಗಾಯಗಳಿರುವುದು, ಆತನ ರಕ್ತದ ಕಲೆಗಳು ಆರೋಪಿಗಳ ಬಟ್ಟೆ, ಶೂಗಳ ಮೇಲೆ ದೊರೆತಿರುವುದಕ್ಕೆ ಸಾಕ್ಷ್ಯಗಳೇನು? ಮರಣೋತ್ತರ ಪರೀಕ್ಷೆಯ ವರದಿಯ ಸತ್ಯಾಸತ್ಯೆಯು ವಿಚಾರಣಾ ನ್ಯಾಯಾಲಯದ ಪೂರ್ಣ ಪ್ರಮಾಣದ ವಿಚಾರಣೆಯಿಂದ ತಿಳಿಯಬೇಕಿದೆ. ಈ ಹಂತದಲ್ಲಿ ಹೈಕೋರ್ಟ್‌ ಮಿನಿ ಟ್ರಯಲ್‌ ಮಾಡಲಾಗದು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಇನ್ನು ಎಲ್ಲಾ ಅರ್ಜಿದಾರರಿಗೆ ಗಂಭೀರವಾದ ಅಪರಾಧ ಹಿನ್ನೆಲೆ ಇಲ್ಲ. ಅವರೆಲ್ಲರೂ ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ವ್ಯಕ್ತಿಗಳಾಗಿದ್ದಾರೆ. ಅರ್ಜಿದಾರರು ಕಳೆದ ಆರು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಾಸಿಕ್ಯೂಷನ್‌ ಪ್ರಕರಣದ ದೋಷಾರೋಪಟ್ಟಿಯಲ್ಲಿ 262 ಸಾಕ್ಷಿಗಳನ್ನು ತೋರಿಸಿದೆ. 13 ಸಂಪುಟಗಳಲ್ಲಿ 587 ದಾಖಲೆಗಳನ್ನು ನೀಡಿದೆ. ಶೀಘ್ರದಲ್ಲೇ ಪ್ರಕರಣದ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯ ಪೂರ್ಣಗೊಳಿಸುವ ಸಾಧ್ಯತೆ ಕಡಿಮೆಯಿದೆ. ಆದ್ದರಿಂದ ಎಲ್ಲಾ ಅರ್ಜಿದಾರರಿಗೆ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.

ಜೊತೆಗೆ, ಪಂಕಜ್‌ ಬನ್ಸಾಲ್‌ ಮತ್ತು ಪುರಕಾಯಸ್ಥ ಪ್ರಕರಣದಲ್ಲಿ ಸುಪ್ರೀ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಆರೋಪಿಗಳನ್ನು ಬಂಧನ ಮಾಡಿದ ಕೂಡಲೇ ಅವರನ್ನು ಏಕೆ ಬಂಧನ ಮಾಡಲಾಗಿದೆ ಎಂಬ ಕಾರಣ/ಆಧಾರಗಳನ್ನು (ಮೆಮೊ ಆಫ್‌ ಗ್ರೌಂಡ್ಸ್‌ ಆಫ್‌ ಅರೆಸ್ಟ್‌) ಒದಗಿಸಬೇಕು. ಪ್ರಕರಣದಲ್ಲಿ ಪವಿತ್ರಾಗೌಡ (ಎ-1), ದರ್ಶನ್‌ (ಎ-2), ನಾಗರಾಜು (ಎ-11), ಲಕ್ಷ್ಮಣ್‌ (ಎ-12), ಪ್ರದೋಷ್‌ (ಎ-14) ಅವರನ್ನು 2024ರ ಜೂ.11ರಂದು ಬಂಧಿಸಲಾಗಿದೆ. ಜಗದೀಶ್‌ (ಎ-6), ಅನುಕುಮಾರ್‌ (ಎ-7) ಅವರನ್ನು ಜೂ.14ರಂದು ಬಂಧಿಸಲಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದರೆ, ಆರೋಪಿಗಳನ್ನು ಬಂಧನ ಮಾಡಿದ ಕೂಡಲೇ, ಅವರಿಗೆ ಬಂಧನದ ಕಾರಣ/ಆಧಾರಗಳನ್ನು ಒದಗಿಸಿಲ್ಲ ಎಂಬುದು ಕಂಡುಬರುತ್ತದೆ. ಇನ್ನು ಆರೋಪಿಗಳ ಬಂಧನದ ವೇಳೆ ಕೋರ್ಟ್‌ ಸಾಕ್ಷಿಗಳು ಹಾಜರಿದ್ದು, ತಾವು ಏಕೆ ಬಂಧನ ಮೆಮೊಗೆ ಸಹಿ ಹಾಕಿದೆವು? ಎಂಬ ಬಗ್ಗೆ ತನಿಖಾಧಿಕಾರಿಗಳ ಮುಂದೆ ದಾಖಲಿಸಿರುವ ಹೇಳಿಕೆಯಲ್ಲಿ ಏನನ್ನೂ ಹೇಳಿಲ್ಲ. ಜತೆಗೆ ಸಾಕ್ಷಿಗಳ ಹೇಳಿಕೆಯನ್ನು ವಿಳಂಬವಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಪೀಠ ಹೇಳಿದೆ.

ಆರೋಪಿಗಳನ್ನು ಬಂಧಿಸಿದ ಕೂಡಲೇ ಬಂಧನದ ಆಧಾರದ ಮೆಮೊವನ್ನು ಒದಗಿಸಲಾಗಿದೆ ಎಂಬ ಪ್ರಾಸಿಕ್ಯೂಷನ್‌ ವಾದ ತೀರ ಸಂಶಯಾಸ್ಪದವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ವಿವಿಧ ದಿನಾಂಕದಲ್ಲಿ ಬಂಧಿಸಲಾಗಿದೆ. ಬಂಧನಕ್ಕೆ ನೀಡಲಾಗಿರುವ ಕಾರಣಗಳು ಮಾತ್ರ ಒಂದೇ ತರಹ ಇವೆ. ಅದು ಸೈಕ್ಲೋಸ್ಟೈಲ್‌ ಕಾಪಿಯಾಗಿದೆ. 2023ರ ಅ.3ರ ನಂತರ ಆರೋಪಿಯನ್ನು ಬಂಧಿಸಿದ ಕೂಡಲೇ ಬಂಧನ ಆಧಾರದ ಮೆಮೊವನ್ನು ಒದಗಿಸುವುದು ಕಡ್ಡಾಯ. ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್‌ ) ಈ ನಿಯಮ ಪಾಲನೆ ಮಾಡದಿರುವುದರಿಂದ ಅರ್ಜಿದಾರರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಂತಿಮವಾಗಿ ಆರೋಪಿಗಳಿಗೆ ಒದಗಿಸುವುದಕ್ಕಾಗಿ ಏಕರೂಪ ಮೆಮೊ ಮಾದರಿಯನ್ನು ಸಿದ್ಧಪಡಿಸಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಕೂಡಲೇ ಕ್ರಮ ಜರುಗಿಸಬೇಕು. ಅದನ್ನು ಆರೋಪಿಯ ರಿಮಾಂಡ್‌ಗೆ ಕೋರಿ ಸಲ್ಲಿಸುವ ವೇಳೆ ರಿಮಾಂಡ್‌ ವರದಿಯೊಂದಿಗೆ ಲಗತ್ತಿಸಬೇಕು. ಅದನ್ನು ಮ್ಯಾಜಿಸ್ಟ್ರೇಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳು ತಪ್ಪದೇ ದಾಖಲೆಗೆ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿರುವ ಹೈಕೋರ್ಟ್‌, ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಮ್ಯಾಜಿಸ್ಟ್ರೇಟ್‌ ಹಾಗೂ ಜಿಲ್ಲಾ ನ್ಯಾಯಾಲಯಗಳಿಗೆ ಕಳುಹಿಸಬೇಕು ಎಂದು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಯಾರ್‍ಯಾರಿಗೆ ಜಾಮೀನು?: ನಟ ದರ್ಶನ್‌, ಆತನ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್‌ ಆರ್‌.ನಾಗರಾಜು, ದರ್ಶನ್‌ ಕಾರು ಚಾಲಕ ಎಂ.ಲಕ್ಷ್ಮಣ್‌, ಆಪ್ತರಾದ ಅನುಕುಮಾರ್‌, ಜಗದೀಶ್‌, ಪ್ರದೋಷ್‌ ಎಸ್‌. ರಾವ್‌.

ಖಾಸಗಿ ವಿಮಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡ ದಳಪತಿ ವಿಜಯ್-ತ್ರಿಷಾ: ಅಸಲಿಗೆ ಇವರಿಬ್ಬರು ಹೋಗಿದ್ದೆಲ್ಲಿಗೆ?

ಏನೇನು ಷರತ್ತು?: ಆರೋಪಿಗಳು ತಲಾ 1 ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು. ಸಮಂಜಸ ಕಾರಣಗಳಿಲ್ಲದೆ ವಿಚಾರಣೆಗೆ ಗೈರಾಗುವಂತಿಲ್ಲ. ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಸಾಕ್ಷ್ಯಾಧಾರ ತಿರುಚುವುದಕ್ಕೆ ಯತ್ನಿಸಬಾರದು. ಇಂತಹದ್ದೇ ಕೃತ್ಯದಲ್ಲಿ ಭಾಗಿಯಾಗಬಾರದು. ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಅದರ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ.

Latest Videos
Follow Us:
Download App:
  • android
  • ios