Asianet Suvarna News Asianet Suvarna News

ಮೃತದೇಹದಿಂದ ಕೊರೋನಾ ಹರಡಲ್ಲ: ಅಗೌರವ ತೋರಿ ಮಾನವೀಯತೆ ಮರೆಯಬೇಡಿ!

ಮೃತದೇಹದಿಂದ ಕೊರೋನಾ ಹರಡಲ್ಲ| ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ|  ಶರೀರಕ್ಕೆ ಅಗೌರವ ತೋರಿ ಮಾನವೀಯತೆ ಮರೆಯಬೇಡಿ: ತಜ್ಞರು

Do Not Panic Dead bodies will not spread Coronavirus says Experts
Author
Bangalore, First Published Jul 29, 2020, 7:54 AM IST

ಬೆಂಗಳೂರುಜು.29): ಕೊರೋನಾ ಸೋಂಕಿತರ ಮೃತದೇಹದಿಂದ ಸೋಂಕು ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಲವು ಬಾರಿ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಈವರೆಗೂ ಮೃತದೇಹದಿಂದ ಸೋಂಕಿತರಾದ ಒಂದು ಪ್ರಕರಣವೂ ವರದಿಯಾಗಿಲ್ಲ. ಹೀಗಿದ್ದರೂ ರಾಜ್ಯದಲ್ಲಿ ಮೃತದೇಹವನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಪ್ರವೃತ್ತಿ ಮಾತ್ರ ಮುಂದುವರೆದಿದೆ.

ಮೃತದೇಹಗಳನ್ನು ಬಳ್ಳಾರಿಯಲ್ಲಿ ಅಮಾನವೀಯವಾಗಿ ಗುಂಡಿಗೆ ಎಸೆದರೆ, ಯಾದಗಿರಿಯಲ್ಲೂ ಅಗೌರವ ತೋರಲಾಗಿತ್ತು. ಅನೇಕ ಕಡೆ ಮೃತದೇಹಗಳಿಗೆ ಅಗೌರವ ತೋರುವುದು ಹಾಗೂ ಅವರ ಸಂಬಂಧಿಕರಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಲು ಬಿಡದೆ ಕಿರುಕುಳ ಕೊಡುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಅಷ್ಟೇ ಅಲ್ಲ, ಮೃತ ವ್ಯಕ್ತಿಯಿಂದ ಸೋಂಕು ಹರಡಬಹುದು ಎಂಬ ಭೀತಿಯಿಂದ ಸ್ವತಃ ಮೃತರ ರಕ್ತ ಸಂಬಂಧಿಗಳೇ ಪಾರ್ಥಿವ ಶರೀರ ಪಡೆಯಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನಗಳಲ್ಲಿ ಅಂತ್ಯ ಸಂಸ್ಕಾರ ನಡೆಸಲು, ಆಸ್ಪತ್ರೆಗಳಲ್ಲಿ ಮೃತರಾದವರ ದೇಹವನ್ನು ಊರಿಗೆ ವಾಪಸು ತಂದು ಮಣ್ಣು ಮಾಡಲೂ ಸಹ ಬಿಡದ ವಾತಾವರಣ ಉಂಟಾಗಿದೆ. ಇದಕ್ಕೆಲ್ಲವೂ ಮಾಹಿತಿ ಕೊರತೆ ಹಾಗೂ ಮೃತರಿಂದ ಸೋಂಕು ಹರಡುತ್ತದೆ ಎಂಬ ಮೂಢ ನಂಬಿಕೆಯೇ ಕಾರಣ ಎನ್ನುತ್ತಾರೆ ತಜ್ಞರು.

ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜು ಪ್ರಕಾರ, ‘ಮೃತ ಸೋಂಕಿತರ ದೇಹದಿಂದ ಸೋಂಕು ಹರಡುವುದಿಲ್ಲ. ಸಾಮಾನ್ಯವಾಗಿ ಕೊರೋನಾ ಸೋಂಕು ಜೀವಂತ ವ್ಯಕ್ತಿಗಳು ಕೆಮ್ಮು, ಸೀನಿನಿಂದ ಹೊರ ಹೊಮ್ಮುವ ದ್ರವಕಣಗಳಿಂದ ಹರಡುತ್ತದೆ. ಕೆಲವೊಮ್ಮೆ ಉಸಿರಾಟದಿಂದಲೂ ಹರಡಬಹುದು. ಮೃತ ವ್ಯಕ್ತಿ ಉಸಿರು ನಿಲ್ಲಿಸಿದ ಬಳಿಕ ವೈರಸ್‌ ಹೊರ ಬರಲು ಸಾಧ್ಯವಿಲ್ಲ. ಜತೆಗೆ ಮೃತನ ದೇಹದಲ್ಲೂ ಹೆಚ್ಚು ಕಾಲ ಬದುಕುಳಿಯುವುದಿಲ್ಲ. ಹೀಗಾಗಿ ನಾಗರೀಕರು ಆತಂಕ ಪಡುವ ಅಗತ್ಯವಿಲ್ಲ’ ಎನ್ನುತ್ತಾರೆ.

‘ಅಷ್ಟೇ ಅಲ್ಲದೆ ಆಸ್ಪತ್ರೆಯಲ್ಲೇ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಮೃತದೇಹವನ್ನು ಪ್ಯಾಕ್‌ ಮಾಡಲಾಗಿರುತ್ತದೆ. ಜತೆಗೆ ಅಂತ್ಯಕ್ರಿಯೆಯನ್ನು ಸುರಕ್ಷಿತವಾಗಿ ನಡೆಸಲು ಅಗತ್ಯ ಮಾರ್ಗಸೂಚಿಯನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಂತೆ 6 ರಿಂದ 8 ಅಡಿ ಆಳದಲ್ಲಿ ಮೃತದೇಹವನ್ನು ಮಣ್ಣು ಮಾಡಲಾಗುತ್ತದೆ. ಈ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಹೀಗಾಗಿ ಸ್ಮಶಾನದ ಸುತ್ತಮುತ್ತಲಿನ ಮನೆಯವರಿಗೆ ಹರಡುತ್ತದೆ ಎಂಬುದು ಸುಳ್ಳು; ಎಂದು ಹೇಳಿದರು.

ಡಬ್ಲುಎಚ್‌ಒದಿಂದಲೂ ಸ್ಪಷ್ಟನೆ:

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಕೂಡ ಎಬೊಲಾ ಸೇರಿ ಕೆಲ ಮಾರಣಾಂತಿಕ ಜ್ವರ ಹಾಗೂ ಕಾಲರಾ ಹೊರತುಪಡಿಸಿದರೆ ಮೃತದೇಹಗಳಿಂದ ಸೋಂಕು ಹರಡುವುದಿಲ್ಲ. ಸೋಂಕಿತ ಮೃತನ ಶವಪರೀಕ್ಷೆ ನಡೆಸುವ ವೇಳೆ ಶ್ವಾಸಕೋಶದ ಬಳಿ ಮಾತ್ರ ಎಚ್ಚರಿಕೆಯಿಂದ ಇರಬೇಕು. ಉಳಿದಂತೆ ಮೃತದೇಹದಿಂದ ಕೊರೋನಾ ಸೋಂಕು ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದಲ್ಲದೆ ಬೃಹತ್‌ ಮುಂಬೈ ಮಹಾನಗರ ಪಾಲಿಕೆಯು ಮಹಾರಾಷ್ಟ್ರ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲೂ ಮೃತದೇಹದಿಂದ ಸೋಂಕು ಹರಡಲ್ಲ ಎಂದು ಸ್ಪಷ್ಟಪಡಿಸಿದೆ.

ಮಾ.17 ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸೋಂಕಿತ ವ್ಯಕ್ತಿಯ ಮೃತದೇಹವನ್ನು ಕುಟುಂಬ ಸದಸ್ಯರು, ಸ್ನೇಹಿತರು ನೋಡಬಹುದು. ಆದರೆ ಮುಟ್ಟುವುದು, ತಬ್ಬಿಕೊಳ್ಳುವುದು, ಮುದ್ದು ಮಾಡುವುದು ಮಾಡುವಂತಿಲ್ಲ ಎಂದು ಹೇಳಿದೆ.

ಏಮ್ಸ್‌ನಿಂದ ಅಧ್ಯಯನ:

ಮೃತ ವ್ಯಕ್ತಿಯಿಂದ ಸೋಂಕು ಹರಡುವಿಕೆಯ ಬಗ್ಗೆ ಏಮ್ಸ್‌ ವೈದ್ಯರ ತಂಡವು ಅಧ್ಯಯನ ನಡೆಸಿದ್ದು, ಈ ವೇಳೆಯೂ ಸಾಮಾನ್ಯವಾಗಿ ಮೃತದೇಹದಿಂದ ಸೋಂಕು ಹರಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೊರೋನಾ ಸೋಂಕಿತನ ಮೃತದೇಹದಿಂದ ಸೋಂಕು ಹರಡುವುದಿಲ್ಲ. ಅನಗತ್ಯವಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅಮಾನವೀಯವಾಗಿ ನಡೆದುಕೊಳ್ಳಬಾರದು. ಮೃತದೇಹವನ್ನು ಗೌರವಯುತವಾಗಿ ಸಂಸ್ಕಾರ ಮಾಡಲು ಸಹಕರಿಸಬೇಕು​​.

- ಡಾ.ಸಿ.ಎನ್‌. ಮಂಜುನಾಥ್‌, ಜಯದೇವ ಆಸ್ಪತ್ರೆ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರದ ಕೊರೋನಾ ತಜ್ಞರ ಸಮಿತಿ ಸದಸ್ಯರು.

Follow Us:
Download App:
  • android
  • ios