ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು. ಯೋಜನೆಯ ನಿರ್ವಹಣಾ ವೆಚ್ಚಕ್ಕಾಗಿ ಕೆರೆಗಳನ್ನು ಮೀನುಗಾರಿಕೆಗೆ ಹರಾಜು ಹಾಕುವಂತೆ ಸಲಹೆ ನೀಡಿದ್ದು, ಕಾಂಗ್ರೆಸ್ ಕಚೇರಿಗೆ ಜಾಗ ನೀಡದವರ ವಿರುದ್ಧ ಎಐಸಿಸಿಗೆ ವರದಿ.

ಕೂಡ್ಲಿಗಿ (ನ.10): ಗಾಂಧಿ ಭಾರತದ ನೆನಪಿನಲ್ಲಿ 100 ಕಾಂಗ್ರೆಸ್ ಕಚೇರಿಗಳಿಗೆ ಕೆಲವರು ಸೈಟ್ ನೀಡಿಲ್ಲ. ಯಾರು ಸೈಟ್ ನೀಡಲ್ಲವೋ ಅವರ ವರದಿಯನ್ನು ದೆಹಲಿಯ ಎಐಸಿಸಿ ನಾಯಕರು ಕೇಳಿದ್ದಾರೆ. ವರದಿಯನ್ನು ಸದ್ಯದಲ್ಲಿಯೇ ಕೊಡುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜಯನಗರ, ಬಳ್ಳಾರಿ ಜಿಲ್ಲೆಯ ಶಾಸಕರು ಕಾಂಗ್ರೆಸ್ ಕಚೇರಿಗೆ ಸೈಟ್ ನೀಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೆರೆಗಳ ಹರಾಜು ಹಾಕಿ:

ಕೆರೆ ತುಂಬಿಸುವ ಯೋಜನೆಗೆ ₹800 ಕೋಟಿಗೂ ಹೆಚ್ಚು ಹಣ ಖರ್ಚಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಗೆ ನೀರು ತುಂಬಿಸಲು ಪ್ರತಿವರ್ಷ ₹80 ಲಕ್ಷ ವಿದ್ಯುತ್ ಬಿಲ್ ಬರುತ್ತದೆ. ಹೀಗಾಗಿ ಎಲ್ಲ ಕೆರೆಗಳನ್ನು ಹರಾಜಿಗೆ ಹಾಕಬೇಕು. ಆ ಮೂಲಕ ಮೀನು ಮರಿಗಳನ್ನು ಕೆರೆಯಲ್ಲಿ ಬಿಟ್ಟು ಅದರಿಂದ ಬಂದ ಆದಾಯದಿಂದ ವಿದ್ಯುತ್ ಬಿಲ್ ತುಂಬಬೇಕು ಎಂದರು.

ನಾನು ಹಾಗೂ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರ ತಂದೆ ಬೊಮ್ಮಣ್ಣ ಅವರು ಬಂಗಾರಪ್ಪ ಅವರ ಶಿಷ್ಯರಾಗಿದ್ದೆವು. ನಾನು ಕೂಡ್ಲಿಗಿಗೆ ಬಂದಾಗ ಬೊಮ್ಮಣ್ಣ ಅವರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದಿದ್ದರು. ಈಗ ಅವರ ಸುಪುತ್ರನ ಕಾಲದಲ್ಲಿ ಅದು ಈಡೇರಿದೆ ಎಂದು ಹೇಳಿದರು.