ರಾಜಕಾರಣದಲ್ಲಿ ಜೈಕಾರ-ಧಿಕ್ಕಾರ ಸಾಮಾನ್ಯ. ಬಿಜೆಪಿ ಕಾರ್ಯಕರ್ತರು ನನಗೆ ಕೋರಿದ ಸ್ವಾಗತದಿಂದ ದೊಡ್ಡ ಶಕ್ತಿ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ/ಬೆಂಗಳೂರು (ಮಾ.29): ಸಾಂಬ್ರಾ ವಿಮಾನ ನಿಲ್ದಾಣದ ಬಳಿ ನನಗೆ ಪ್ರತಿಭಟನೆಯ ಸ್ವಾಗತ ಕೋರಿರುವವರಿಗೆ ಅಭಿನಂದನೆಗಳು. ರಾಜಕಾರಣದಲ್ಲಿ ಜೈಕಾರ-ಧಿಕ್ಕಾರ ಸಾಮಾನ್ಯ. ಬಿಜೆಪಿ ಕಾರ್ಯಕರ್ತರು ನನಗೆ ಕೋರಿದ ಸ್ವಾಗತದಿಂದ ದೊಡ್ಡ ಶಕ್ತಿ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಲೋಕಸಭಾ ಉಪ ಚುನಾವಣೆ ಪ್ರಚಾರಕ್ಕಾಗಿ ಭಾನುವಾರ ಬೆಳಗಾವಿಗೆ ಆಗಮಿಸಿದ್ದ ತಮ್ಮ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಕಾರ್ಯಕರ್ತರು ‘ಡಿಕೆಶಿ ಗೋ ಬ್ಯಾಕ್’ ಎಂದು ಸ್ವಾಗತ ನೀಡಿದ್ದಾರೆ. ಈ ಸ್ವಾಗತದಿಂದ ನಮಗೆ ದೊಡ್ಡ ಶಕ್ತಿ ಬರುತ್ತದೆ. ಎಲ್ಲವನ್ನೂ ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಬೆಳಗಾವಿ ಕ್ಷೇತ್ರದ ಮಹಾಜನತೆ ಎಲ್ಲವನ್ನೂ ನೋಡುತ್ತಿದ್ದಾರೆ’ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರಿಗೇ ರಕ್ಷಣೆ ಇಲ್ಲ ಅಂದ್ರೆ ಸಾಮಾನ್ಯ ಜನರ ಪಾಡೇನು?: ಸಿದ್ದರಾಮಯ್ಯ ...
‘ಚುನಾವಣೆಗೆ ಬಂದಿದ್ದೇವೆ. ಶಾಂತರೀತಿಯಿಂದ ಚುನಾವಣೆ ಮಾಡುತ್ತೇವೆ. ಮತದಾರರು ಇದನ್ನೆಲ್ಲ ನೋಡಿ ಬಿಜೆಪಿಯವರು ಹೇಗಿದ್ದಾರೆ ಅನ್ನುವುದನ್ನು ತಿಳಿದುಕೊಳ್ಳಲಿ. ಬಿಜೆಪಿಯವರು ಈ ರೀತಿ ಮಾಡಿದಷ್ಟುನಮಗೆ ಒಳ್ಳೆಯದು. ವಿಮಾನ ನಿಲ್ದಾಣದ ಹೊರಗೆ ರಮೇಶ ಜಾರಕಿಹೊಳಿ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಯಾವ ಘನಕಾರ್ಯಕ್ಕೆ ನನಗೆ ಸ್ವಾಗತ ನೀಡುತ್ತಿದ್ದಾರೆ. ಅವರು ಮಾಡಿರುವ ಘನಕಾರ್ಯಕ್ಕೆ ನನಗೆ ಇಂಥ ಸ್ವಾಗತವೇ?’ ಎಂದು ವ್ಯಂಗ್ಯವಾಡಿದರು.
ಬೇರೆಯವರ ಮೇಲೆ ಗೂಬೆ ಕೂರಿಸಲು ಯತ್ನ: ಡಿಕೆಶಿ
ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಸಿ.ಡಿ. ಪ್ರಕರಣದಲ್ಲಿ ಬೇರೆಯವರ ಮೇಲೆ ಗೂಬೆ ಕೂರಿಸಲು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಯಾರಾರಯರಿಂದಲೋ ಹೇಳಿಕೆ ಕೊಡಿಸುತ್ತಿದ್ದಾರೆ. ಕನಿಷ್ಠ ಪೊಲೀಸರಾದರೂ ತಮ್ಮ ಗೌರವ ಕಾಪಾಡಿಕೊಳ್ಳಬೇಕು’ ಎಂದರು.
‘ಯಾರು ಏನು ಮಾಡಿದರೂ ಕಾನೂನು ತನ್ನ ಕೆಲಸ ಮಾಡುತ್ತದೆ. ಯುವತಿ ಬಗ್ಗೆ, ಪೋಷಕರ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ವಿಜಯಪುರದಲ್ಲಿದ್ದ ಅವರ ಪೋಷಕರನ್ನು ಬೆಳಗಾವಿಗೆ ಯಾರು ಕರೆಸಿಕೊಂಡರು ಎಂಬ ಬಗ್ಗೆಯೂ ಮಾತನಾಡುವುದಿಲ್ಲ. ಬೆಳಗಾವಿಗೆ ಹೋಗುತ್ತಿದ್ದರೂ ನನಗೆ ಯಾವ ಭದ್ರತೆಯೂ ಬೇಡ. ಭದ್ರತೆಯೊಂದಿಗೆ ಹೋಗುವ ಕೆಲಸವನ್ನು ನಾನೇನೂ ಮಾಡಿಲ್ಲ. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಮುತ್ತು ರತ್ನಗಳನ್ನು ಇಟ್ಟುಕೊಂಡು ಘನ ಕಾರ್ಯ ಮಾಡಿದ್ದಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಾರಾ? ಪ್ರತಿಭಟನೆ ಮಾಡುವುದಾದರೆ ಮಾಡಲಿ’ ಎಂದಿದ್ದರು.
