ಬೆಂಗಳೂರು(ಮೇ.14): ಕರ್ನಾಟಕದ ಏಳಿಗೆಗೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್‌ ಇಂಜಿನ್‌ ರೀತಿ ಕೆಲಸ ಮಾಡುತ್ತವೆ ಎಂದಿದ್ದರು. ಆದರೆ ಕೊರೋನಾ ನಿರ್ವಹಣೆ, ಆಕ್ಸಿಜನ್‌, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್‌ ಇಂಜಿನ್‌ಗಳು ಕೆಟ್ಟು ನಿಂತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದಲ್ಲಿ 24 ಮಂದಿ ಸಾವಿಗೆ ಸರ್ಕಾರವೇ ಹೊಣೆ ಎಂದು ಹೈಕೋರ್ಟ್‌ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಸಮಿತಿ ಈಗಾಗಲೇ ವರದಿ ನೀಡಿದೆ. ಇದಕ್ಕೆ ಸರ್ಕಾರದ ಯಾರು ಹೊಣೆಗಾರರು ಎಂದು ನೀವೇ ತೀರ್ಮಾನಿಸಿ. ಈ ಸಾವುಗಳಿಗೆ ಸರ್ಕಾರ ನೈತಿಕ ಹೊಣೆ ಹೊರಬೇಕು. ಲಸಿಕೆ ನೀಡಿಕೆಯಲ್ಲಿ ಆಗುತ್ತಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

"

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೌರಿಂಗ್‌ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಈಗ ಸುಮ್ಮನಾಗಿದ್ದಾರೆ. ಕೇಂದ್ರದಿಂದ ಎಷ್ಟುಪ್ರಮಾಣದಲ್ಲಿ ಲಸಿಕೆ ಬರುತ್ತಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲವೇ? ಲಸಿಕೆ ವಿತರಣೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಯಾಕೆ ಸುಮ್ಮನಿದೆಯೋ ಗೊತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರನ್ನು ದೇವರೇ ಕಾಪಾಡಬೇಕು. ಇವರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? ಜನರಿಗೆ ನೆರವಾಗಿದ್ದಾರಾ ಎಂದು ಪ್ರಶ್ನಿಸಿದರು.

ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದರು. 45 ವರ್ಷ ಮೇಲ್ಪಟ್ಟವರಲ್ಲಿ ಅನೇಕರಿಗೆ ಇನ್ನು ಮೊದಲ ಲಸಿಕೆ ನೀಡಿಲ್ಲ. ಎರಡನೇ ಡೋಸ್‌ ಕೂಡ ನೀಡಬೇಕು. ಈ ವಿಚಾರದಲ್ಲಿ ಸರ್ಕಾರದ ಬಳಿ ಪರಿಣಾಮಕಾರಿ ಯೋಜನೆ, ಸಿದ್ಧತೆ ಇಲ್ಲ. ಇದನ್ನು ನಿಭಾಯಿಸಲು ಅವರಿಗೆ ಆಗುತ್ತಿಲ್ಲ. 18-44ರ ವಯೋಮಾನದವರಿಗೆ ಲಸಿಕೆ ನೀಡುವುದಾಗಿ ಮೇ 1 ರಂದು ಉದ್ಘಾಟನೆ ಮಾಡಿದರು. ಆದರೆ ಏಕಾಏಕಿ ಸ್ಥಗಿತಗೊಳಿಸಿದರು ಎಂದು ಲೇವಡಿ ಮಾಡಿದರು.

10 ಸಾವಿರ ರು. ಪರಿಹಾರ ನೀಡಿ:

ಲಾಕ್‌ಡೌನ್‌ ಸಂತ್ರಸ್ತ ಪ್ರತಿ ಕುಟುಂಬಕ್ಕೆ 10 ಸಾವಿರ ರು. ನೆರವು ನೀಡಬೇಕು ಎಂಬುದು ನಮ್ಮ ಆಗ್ರಹ. ಗೊಬ್ಬರ ಬೆಲೆ ಕಡಿಮೆ ಮಾಡಬೇಕು. ತರಕಾರಿ, ಹೂ ಬೆಳೆದು ನಷ್ಟ ಆದವರಿಗೆ ಪರಿಹಾರ ನೀಡಬೇಕು. ಸಾಂಪ್ರದಾಯಿಕ ವೃತ್ತಿ ಆಧರಿಸಿದವರಿಗೆ ಜಿಮ್‌, ಸಿನಿಮಾ ತಂತ್ರಜ್ಞರಿಗೆ ನೆರವು ಸಿಗಬೇಕು ಎಂದು ಇದೇ ವೇಳೆ ಶಿವಕುಮಾರ್‌ ಒತ್ತಾಯಿಸಿದರು. ಸರ್ಕಾರ ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆದು ಬಡ್ಡಿ ಮನ್ನಾ ಮಾಡಬೇಕು. ಸಾಲದ ಕಂತು ಕಟ್ಟಲು ಕಾಲಾವಕಾಶ ನೀಡಬೇಕು. ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಜನರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona