ಈ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗ್ತಾರಾ?

ತಮ್ಮನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೈ ಬಿಡಲಾಗುತ್ತದೆ ಎಂಬ ಊಹಾಪೋಹಗಳ ಕುರಿತು ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಪ್ರತಿಕ್ರಿಯೆ ನೀಡಿದ್ದಾರೆ.

District Incharge Minister MC Managuli Reaction Over Changing Ministry

ವಿಜಯಪುರ(ಜ.12): ತಮ್ಮನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೈ ಬಿಡಲಾಗುತ್ತದೆ ಎಂಬ ಊಹಾಪೋಹಗಳ ಕುರಿತು ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಪ್ರತಿಕ್ರಿಯೆ ನೀಡಿದ್ದಾರೆ.

ಉಸ್ತುವಾರಿ ಬದಲಾವಣೆ ವಿಚಾರ ತಮಗೇನೂ ಗೊತ್ತಿಲ್ಲ ಎಂದಿರುವ ಸಚಿವರು, ಸದ್ಯಕ್ಕೆ ತಾವೇ ಉಸ್ತುವಾರಿ ಸಚಿವ ಎಂಬುದನ್ನಷ್ಟೇ ಹೇಳಬಲ್ಲೇ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ನಮ್ಮ ನಾಯಕರಾದ ದೇವೇಗೌಡರು ಹಾಗೂ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ ಹಾಗೆ ಮಾಡುವುದಷ್ಟೇ ತಮ್ಮ ಕೆಲಸ ಎಂದು ಮನಗೂಳಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ನಮ್ಮ ರಾಜಕೀಯ ವೈರಿ ಬಿಜೆಪಿಯಾಗಿದ್ದು, ಆ ಪಕ್ಷವನ್ನು ಅಧಿಕಾರದಿಂದ ದೂರ  ಇಡಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.

ದೇವೇಗೌಡರು ಭಸ್ಮಾಸುರ ಎಂಬ ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ವಿರೋಧ ಪಕ್ಷದವರು ಹಾಗೇ ಹೇಳ್ತಾರೆ, ಬೇರೆ ಪಕ್ಷದವರು ಹಾಗೆ ಹೇಳದೆ ಮತ್ತೇನು ಪಪ್ಪಿ ಕೊಡ್ತಾರಾ ಎಂದು ಮರು ಪ್ರಶ್ನೆ ಹಾಕಿದರು.

ತೋಟಗಾರಿಕಾ ಇಲಾಖೆಯಲ್ಲಿ‌ ತಮ್ಮ ಮಕ್ಕಳ ಹಸ್ತಕ್ಷೇಪ ಸಮರ್ಥಿಸಿಕೊಂಡ ಮನಗೂಳಿ, ಯಾವ ಶಾಸಕ ಹಾಗೂ ಸಚಿವರ ಮಕ್ಕಳು ರಾಜಕೀಯದಲ್ಲಿ ಓಡಾಡುವುದಿಲ್ಲ ನೀವೇ ಹೇಳಿ ಎಂದು ಸವಾಲು ಹಾಕಿದರು.

ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಗೆ ಒಂದು ತೋಟಗಾರಿಕಾ ಕಾಲೇಜು ಸ್ಥಾಪಿಸುವಂತೆ ಸಿಎಂ ಗೆ ಮನವಿ‌ ಮಾಡಿದ್ದೇನೆ. ಕ್ಯಾಬಿನೆಟ್ ನಲ್ಲಿ ಮಂಜೂರು ಆದರೆ ಕಾಲೇಜು ಸಿಗಲಿದೆ ಎಂದು ಮನಗೂಳಿ ಭರವಸೆ ನೀಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಯಾರ ಇಲಾಖೆಯಲ್ಲಿ ಯಾರೂ ಹಸ್ತಕ್ಷೇಪ‌ ಮಾಡುತ್ತಿಲ್ಲ. ಎಲ್ಲ ಸಚಿವರೂ ತಮ್ಮ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಕುಮಾರಸ್ವಾಮಿ ಸೇರಿದಂತೆ ಎಲ್ಲರ‌ ಮೇಲೆ ಆರೋಪ‌ ಮಾಡ್ತಾರೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಇರಲಿದೆ ಎಂದು ಸಚಿವರು ಈ ವೇಳೆ ನುಡಿದರು.

Latest Videos
Follow Us:
Download App:
  • android
  • ios