ತುಮಕೂರು[ಜ.24]: ಅಪಾರ ಜನದಟ್ಟಣೆಯ ಪರಿಣಾಮ ಮಂಗಳವಾರ ‘ನಡೆದಾಡುವ ದೇವರು’ ಡಾ.ಶಿವಕುಮಾರ ಸ್ವಾಮೀಜಿ ಅವರ ಪಾರ್ಥಿವ ಶರೀರ ದರ್ಶನ ಮಾಡಲಾಗದ ಸಾವಿರಾರು ಭಕ್ತರು ಇಡೀ ರಾತ್ರಿ ಚಳಿಯಲ್ಲೇ ಕುಳಿತು ಬೆಳಿಗ್ಗೆ ಗದ್ದುಗೆ ದರ್ಶನ ಮಾಡಿ ಭಕ್ತಿ ಮೆರೆದ ಘಟನೆಗೆ ಸಿದ್ಧಗಂಗೆ ಸಾಕ್ಷಿಯಾಯಿತು.

ಶ್ರೀಗಳು ಶಿವೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದಿಂದ ಈ ಭಕ್ತರು ಶ್ರೀಗಳ ದರ್ಶನಕ್ಕೆ ಬಂದಿದ್ದರು. ಆದರೆ ಅವರಿಗೆ ಶ್ರೀಗಳ ದರ್ಶನ ಆಗಲೇ ಇಲ್ಲ. ಅಷ್ಟುದೂರದಿಂದ ಬಂದ ಇವರಿಗೆ ಶ್ರೀಗಳ ದರ್ಶನ ಆಗದೇ ಇದ್ದುದ್ದರಿಂದ ಹಾಗೆ ವಾಪಸ್‌ ಆಗಲು ಮನಸ್ಸು ಬರಲಿಲ್ಲ. ಹೀಗಾಗಿ ಶಿವೈಕ್ಯ ಶ್ರೀಗಳ ಕ್ರಿಯಾವಿಧಿಯಾದ ಬಳಿಕ ಗದ್ದುಗೆ ನೋಡಲು ಬಿಡುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ರಾತ್ರಿ ಯಾರಿಗೂ ಗದ್ದುಗೆ ಬಳಿ ಬಿಡಲೇ ಇಲ್ಲ. ಹೀಗಾಗಿ ಕೊರೆಯುವ ಚಳಿಯಲ್ಲೇ ರಾತ್ರಿಯಿಡಿ ಗಡಗಡ ನಡುಗುತ್ತಾ ಬೆಳಿಗ್ಗೆ ಗದ್ದುಗೆ ದರ್ಶನ ಮಾಡಿ ಹೋಗಿದ್ದಾರೆ.

ಗದ್ದುಗೆ ನೋಡಲು ಅವಕಾಶ ಕೊಡುತ್ತಿದ್ದಂತೆ ಈ ಭಕ್ತರು ಶ್ರೀಗಳ ಕ್ರಿಯಾವಿಧಿ ನಡೆದ ಸಮಾಧಿ ಸ್ಥಳಕ್ಕೆ ಕೈ ಮುಗಿದರು, ಕಣ್ಣೀರಿಟ್ಟರು. ಸುಮಾರು ಅರ್ಧ ಗಂಟೆಗಳ ಕಾಲ ಹೊರಗೆ ಕುಳಿತು ಶ್ರೀಗಳನ್ನು ನೆನೆದು ಭಾವುಕರಾಗಿ ತಮ್ಮ ತಮ್ಮ ಊರುಗಳಿಗೆ ಪಯಣ ಬೆಳೆಸಿದರು.

ಶ್ರೀಮಠದಲ್ಲಿ ನೀರವತೆ:

ಸುಮಾರು 78 ವರ್ಷಗಳ ಕಾಲ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀಗಳು ಶಿವೈಕ್ಯರಾಗಿದ್ದರಿಂದ ಶ್ರೀ ಮಠದಲ್ಲಿ ನೀರವ ಮೌನ. ಎಲ್ಲ ಕೆಲಸವೂ ನಡೆಯುತ್ತಿದ್ದರೂ ಶ್ರೀಮಠದಲ್ಲಿ ಧೀಶಕ್ತಿಯಾಗಿದ್ದ ಶಿವಕುಮಾರ ಸ್ವಾಮೀಜಿ ಅವರ ಅನುಪಸ್ಥಿತಿ ಮಠದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಮೌನವಾಗಿಸಿತ್ತು.

ಅಖಂಡ ಸಿದ್ಧಗಂಗೆಯ ಬೆಟ್ಟಗುಡ್ಡ, ಕಲ್ಲು ಬಂಡೆ, ಮಠದ ಆವರಣ, ಗೋಸಲ ಸಿದ್ಧೇಶ್ವರ ವೇದಿಕೆ, ಅಡುಗೆ ಕೋಣೆ, ಹಾಸ್ಟೆಲ್‌ಗಳು, ಸಾಮೂಹಿಕ ಪ್ರಾರ್ಥನಾ ಪ್ರಾಂಗಣ ಹೀಗೆ ಎಲ್ಲಿ ನೋಡಿದರೂ ಶಿವೈಕ್ಯ ಶ್ರೀಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇನ್ನು ಸಿದ್ಧಗಂಗಾ ಕಿರಿಯ ಶ್ರೀಗಳು ಕೂಡ ಹಿರಿಯ ಗುರುಗಳ ಅನುಪಸ್ಥಿತಿಯಿಂದ ಇನ್ನೂ ಹೊರ ಬಂದಂತೆ ಕಾಣುತ್ತಿರಲಿಲ್ಲ. ಸಿದ್ಧಗಂಗೆ ಬೆಟ್ಟದ ಬುಡದಲ್ಲಿ ಉದ್ದಾನ ಶಿವಯೋಗಿಗಳ ಗದ್ದುಗೆ ಪಕ್ಕದಲ್ಲೇ ನಿರ್ಮಾಣವಾಗಿರುವ ಶಿವಕುಮಾರ ಸ್ವಾಮೀಜಿ ಅವರ ಸಮಾಧಿ ಸ್ಥಳವನ್ನು ಭಕ್ತರೆಲ್ಲರೂ ಮೌನವಾಗಿ ವೀಕ್ಷಿಸುತ್ತಾ, ಕೈ ಮುಗಿಯುತ್ತಾ, ಕಣ್ಣೀರು ಹಾಕುತ್ತಾ ಭಾರದ ಹೆಜ್ಜೆಯಲ್ಲಿ ಹೊರಗೆ ಹೋಗುತ್ತಿದ್ದ ದೃಶ್ಯ ಮನಃಕರಗುವಂತಿತ್ತು.

ಇನ್ನು ಶ್ರೀಗಳು ಸದಾ ಕಾಲ ಇರಲು ಇಷ್ಟಪಡುತ್ತಿದ್ದ ಹಳೆ ಮಠದಲ್ಲೂ ಇದೇ ವಾತಾವರಣ. ಈಗ್ಗೆ ಎರಡೂವರೆ ತಿಂಗಳ ಹಿಂದೆಯಷ್ಟೆ ಶ್ರೀಗಳು ತಾವೇ ನಡೆದುಕೊಂಡು ಹಳೇಮಠದಿಂದ ತಮ್ಮ ಕಚೇರಿ ಎದುರಿಗಿರುವ ಗದ್ದುಗೆ ಮೇಲೆ ಕುಳಿತು ಭಕ್ತರಿಗೆ ದರ್ಶನ ಕೊಡುತ್ತಿದ್ದನ್ನು ನೆನಪಿಸಿಕೊಂಡು ಎಲ್ಲರೂ ದುಃಖಿತರಾಗುತ್ತಿದ್ದರು. ಶಿವಕುಮಾರ ಸ್ವಾಮೀಜಿ ಅವರ ಕಾರಿನ ಡ್ರೈವರ್‌, ಹಳೆಮಠದಲ್ಲಿ ಅಡುಗೆ ಮಾಡಿಕೊಡುತ್ತಿದ್ದ ಸಿಬ್ಬಂದಿ, ಆಡಳಿತ ಕಚೇರಿಯವರು ಮುಖ್ಯವಾಗಿ ವಿದ್ಯಾರ್ಥಿಗಳೆಲ್ಲಾ ಮೌನಕ್ಕೆ ಜಾರಿದ್ದರು.

ಅನಾರೋಗ್ಯಕ್ಕೆ ಒಳಗಾಗುವ ಮೊದಲು ಪ್ರತಿ ದಿನ ಶ್ರೀಗಳು ವಿದ್ಯಾರ್ಥಿಗಳು ನಡೆಸಿಕೊಡುತ್ತಿದ್ದ ಸಾಮೂಹಿಕ ಪ್ರಾರ್ಥನೆಯನ್ನು ತಪ್ಪಿಸುತ್ತಲೇ ಇರಲಿಲ್ಲ. ಅಲ್ಲದೇ ಅನಾರೋಗ್ಯಕ್ಕೆ ಒಳಗಾದಾಗಲೂ ಶ್ರೀಗಳು ಆಗಾಗ ಬಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಕುಳಿತು ಮಕ್ಕಳು ಹಾಡುವ ವಚನಗಳನ್ನು ಕಿವಿ ತುಂಬಿಕೊಳ್ಳುತ್ತಿದ್ದರು.

-ಉಗಮ ಶ್ರೀನಿವಾಸ್‌