ಕೃತಕ ಕಾಲಿನಲ್ಲಿ ಕ್ರಾಂತಿ, ಚಲಿಸುವ ಪಾದ ಆವಿಷ್ಕಾರ, ಕೇವಲ 700 ಗ್ರಾಂ ತೂಕವಿರುವ ಇದರ ಬೆಲೆ ತುಂಬಾ ಕಮ್ಮಿ!
ಮಹಾರಾಷ್ಟ್ರದ ಪುಣೆಯಲ್ಲಿರುವ ಸಶಸ್ತ್ರ ಸೇನಾ ವೈದ್ಯಕೀಯ ಕಾಲೇಜಿನ ಕೃತಕ ಕಾಲು ಕೇಂದ್ರವು 'ಪಿಯೊನಿಕ್ಸ್' ಎಂಬ ಹೊಸ ಕೃತಕ ಕಾಲನ್ನು ಅಭಿವೃದ್ಧಿಪಡಿಸಿದೆ. ಸ್ಪ್ರಿಂಗ್ ತಂತ್ರಜ್ಞಾನ ಬಳಸಿ ಕಣಕಾಲು ಚಲನೆ ಸಾಧ್ಯವಾಗಿಸುವ ಈ ಕೃತಕ ಕಾಲು ದೇಶದಲ್ಲೇ ಪ್ರಥಮ.

ಬೆಂಗಳೂರು (ಫೆ.14): ಮಹಾರಾಷ್ಟ್ರದ ಪುಣೆಯಲ್ಲಿರುವ ಸಶಸ್ತ್ರ ಸೇನಾ ವೈದ್ಯಕೀಯ ಕಾಲೇಜಿನ ಕೃತಕ ಕಾಲು ಕೇಂದ್ರ (ಆರ್ಟಿಫಿಷಿಯಲ್ ಲಿಂಬ್ ಸೆಂಟರ್) ‘ಪಿಯೊನಿಕ್ಸ್’ ಎಂಬ ಕೃತಕ ಕಾಲನ್ನು ಆವಿಷ್ಕರಿಸಿದ್ದು, ಸ್ಪ್ರಿಂಗ್ ತಂತ್ರಜ್ಞಾನದ ನೆರವಿನಿಂದ ಕೃತಕ ಕಾಲಿನಲ್ಲೂ ಪಾದದ (ಕಣಕಾಲು) ಚಲನೆ ಮಾಡಬಹುದಾಗಿದೆ. ಈ ರೀತಿ ಪಾದ ಚಲನೆ ಮಾಡಬಲ್ಲ ಕೃತಕ ಕಾಲು ದೇಶದ ಮೊದಲೆನಿಸಿದೆ.
ಇದನ್ನು ಕೇವಲ ಯುದ್ಧ, ಅಪಘಾತ, ವಿವಿಧ ಕಾರ್ಯಾಚರಣೆ, ಅನಾರೋಗ್ಯದಿಂದ ಕಾಲು ಕಳೆದುಕೊಂಡ ಸೇನಾ ಸಿಬ್ಬಂದಿ ಮಾತ್ರವಲ್ಲದೆ ಸಾರ್ವಜನಿಕರಿಗೂ ಒದಗಿಸಲು ಪುಣೆಯ ಆರ್ಟಿಫಿಷಿಯಲ್ ಲಿಂಬ್ ಸೆಂಟರ್ ಉದ್ದೇಶಿಸಿದೆ.
ಈ ಕೃತಕ ಕಾಲು ಎಲ್ಲಾ ಪರೀಕ್ಷೆಯನ್ನು ಪಾಸಾಗಿ ಉತ್ಪಾದನೆ ಹಂತದಲ್ಲಿದೆ. ಸದ್ಯದಲ್ಲೇ ಅಗತ್ಯವಿರುವವರಿಗೆ ಕೃತಕ ಕಾಲುಗಳ ಪೂರೈಕೆಯಾಗುತ್ತದೆ. ಮೊದಲಿಗೆ ಸೇನಾ ಸಿಬ್ಬಂದಿಯ ಅಗತ್ಯತೆ ಪೂರೈಸಿ ಸಾರ್ವಜನಿಕರಿಗೂ ಒದಗಿಸಲಾಗುವುದು. ಮೊದಲು ಕೇಂದ್ರದ ಜತೆ ನೋಂದಣಿ ಮಾಡಿಕೊಂಡಿರುವ ಸೇನಾ ಸಂಸ್ಥೆಗಳ ಸಿಬ್ಬಂದಿಗೆ ಆದ್ಯತೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ವೋಲ್ವೊದಿಂದ 1,400 ಕೋಟಿ ರೂ. ಹೂಡಿಕೆ; ಹೊಸಕೋಟೆ ಘಟಕ ವಿಸ್ತರಣೆ
ಅಲ್ಲದೆ, ಕೃತಕ ಕಾಲು ಮಾರುಕಟ್ಟೆಯಲ್ಲಿ ₹50000 ದಿಂದ ₹1 ಲಕ್ಷವರೆಗೆ ಬೆಲೆ ಇದ್ದು, ಎಎಲ್‌ಸಿಯು ಇದನ್ನು ಕೇವಲ ₹20000 ಬೆಲೆಯಲ್ಲಿ ಒದಗಿಸಲಿದೆ ಎಂದು ಎಲ್‌ಐಸಿ ಅಧಿಕಾರಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ.
ಹೆಲಿಕಾಲ್ ಸ್ಪ್ರಿಂಗ್ ಅಳವಡಿಕೆ ಮಾಡಿದ್ದು, ಎತ್ತರದ ಪ್ರದೇಶ ಅವರೋಹಣ ಮಾಡುವಾಗ, ಮೆಟ್ಟಿಲು ಹತ್ತುವಾಗ ಪಾದವು ಸ್ವಲ್ಪ ಮಟ್ಟಿಗೆ ಮಡಚಿಕೊಳ್ಳುವ ಚಲನೆ ಮಾಡಿಕೊಳ್ಳಬಹುದು. ತನ್ಮೂಲಕ ಈ ವೇಳೆ ಕಾಲಿನ ಮೇಲೆ ಒತ್ತಡ ಬೀಳದಂತೆ ಹಾಗೂ ಕಾಲಿಗೆ ನೋವಾಗದಂತೆ ತಡೆಯಬಹುದು.
ಕೇಂದ್ರದ ವಿಜ್ಞಾನಿ ಗುರುವಿಂದರ್ ಸಿಂಗ್ ಇದನ್ನು ಆವಿಷ್ಕರಿಸಿದ್ದು, ಹಗುರದ ಪಾಲಿಮರ್, ಸಗಿಟ್ಟಲ್ ಪಿನ್, ತೂಕ ತಡೆಯಲು ಸಿಂಗಲ್ ಆ್ಯಕ್ಸಿಸ್ ಲೋಡ್ ಬೇರಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಶೇಕಡ 100ರಷ್ಟು ಸ್ವದೇಶಿ ವಿನ್ಯಾಸವಾಗಿದ್ದು, ಬಳಕೆ ಮಾಡುವ ಸಂಪೂರ್ಣ ಸಲಕರಣೆಗಳು ಸ್ವದೇಶಿಯಾಗಿವೆ.
71000 ಮಂದಿ ನೋಂದಣಿ:
ಈ ಕೃತಕ ಕಾಲನ್ನು ವ್ಯಕ್ತಿಯ ತೂಕ ಹಾಗೂ ದೈಹಿಕ ಚಟುವಟಿಕೆಗಳಿಗೆ ತಕ್ಕಂತೆ ತಯಾರು ಮಾಡಬಹುದು. ಈಗಾಗಲೇ ಎಎಲ್‌ಸಿ ಜತೆ 71000 ಮಂದಿ ನೋಂದಣಿ ಮಾಡಿಕೊಂಡಿದ್ದು, ಬೇರೆ ಬೇರೆ ರೀತಿಯ ಕೃತಕ ಅಂಗಗಳನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಸರಾಸರಿ 800 ಮಂದಿ ಹೊಸದಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.
ಗಡಿಭದ್ರತಾ ಪಡೆ (ಬಿಎಸ್‌ಎಫ್), ಸಿಆರ್‌ಪಿಎಫ್, ಸಿಐಎಸ್‌ಎಫ್, ಅಸ್ಸಾಂ ರೈಫಲ್ಸ್, ಎಸ್‌ಎಸ್‌ಬಿ, ಐಟಿಬಿಪಿ, ಎನ್‌ಎಸ್‌ಜಿ ಇಂಡಿಯನ್ ಕೋಸ್ಟ್‌ಗಾರ್ಡ್, ಪೊಲೀಸ್ ಪಡೆ ಹಾಗೂ ನಾಗರಿಕರು ಸಹ ಈ ಕೃತಕ ಕಾಲಿನ ಸೇವೆ ಪಡೆಯಬಹುದು..
- ಕಣಕಾಲು (ಪಾದ) ಮಡಚಲು ಸ್ಪ್ರಿಂಗ್ ವ್ಯವಸ್ಥೆ.
- ಫೂಟ್ ಶೆಲ್‌ನೊಂದಿಗೆ ಸೇರಿ ಒಟ್ಟು ತೂಕ: 700 ಗ್ರಾಂ.
- 22 ರಿಂದ 28 ಸೆಂ.ಮೀ. ಬೇಕಾದ ಅಳತೆಯಲ್ಲಿ ತಯಾರಿ.

