ಅಭಿವೃದ್ಧಿ, ಹಿಂದುತ್ವ, ಯುವ ನಾಯಕತ್ವವೇ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಮಂತ್ರ
- ಮಂಗಳೂರಲ್ಲಿ ಸಚಿವ ಸುನಿಲ್ ಕುಮಾರ್
- ಹೂಗುಚ್ಛ ಸ್ವೀಕರಿಸದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ
- ಅಪಪ್ರಚಾರದ ಮೂಲಕ ಅಧಿಕಾರ ಹಿಡಿಯುವ ಆಸೆಯಲ್ಲಿದೆ ಕಾಂಗ್ರೆಸ್
ಮಂಗಳೂರು (ಜ. 29): ಅಭಿವೃದ್ಧಿ (Development ), ಹಿಂದುತ್ವ (Hindutva) ಹಾಗೂ ಯುವ ನಾಯಕತ್ವ ಈ ಮೂರು ವಿಚಾರ ಮುಂದಿಟ್ಟುಕೊಂಡು ಮುಂದಿನ ಅಸೆಂಬ್ಲಿ ಚುನಾವಣೆ (assembly election) ಎದುರಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಇಂಧನ (Energy Minister) ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ (V Sunil Kumar) ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಶುಕ್ರವಾರ ಮೊದಲ ಬಾರಿಗೆ ಮಂಗಳೂರಿನ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ವೇಳೆ ಅವರು ಪಕ್ಷದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಿಂದುತ್ವ ಪಕ್ಷದ ಪ್ರಮುಖ ಅಜೆಂಡಾ ಆಗಿದ್ದು, ಅದು ಇನ್ನಷ್ಟುಗಟ್ಟಿಗೊಳ್ಳಬೇಕು. ಯುವಕರು ದೊಡ್ಡ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕಬೇಕು. ಈ ಮೂಲಕ ರಾಜಕಾರಣದಲ್ಲಿ ಹೊಸ ಪರಿವರ್ತನೆ ಕಾಣಬೇಕು. ಇನ್ನು ಒಂದೂವರೆ ವರ್ಷದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಿ ಚುನಾವಣೆಗೆ ಸಜ್ಜುಗೊಳಿಸುವಲ್ಲಿ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಅವರು ಆಶಿಸಿದರು.
ಹಿಂದುತ್ವಕ್ಕೆ ಧಕ್ಕೆಯಾಗದಂತೆ ಆಡಳಿತ: ಕರ್ನಾಟಕದಲ್ಲಿ ಹಿಂದುತ್ವ ಪರವಾದ ಸರ್ಕಾರ ಇದೆ. ಹಾಗಾಗಿ ಗೋಹತ್ಯೆ ತಡೆ, ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದೇವೆ. ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಚಿಂತನೆ ನಡೆಸಲಾಗಿದೆ. ಹಿಂದುತ್ವ ವಿಚಾರಕ್ಕೆ ಧಕ್ಕೆ ಬಾರದಂತೆ ಆಡಳಿತ ನಡೆಸಲಾಗುತ್ತದೆ ಎಂದರು.
ರಾಜ್ಯ ಸರ್ಕಾರದ ಆರು ತಿಂಗಳ ಕಾರ್ಯವೈಖರಿಯನ್ನು ಜನತೆ ಮೆಚ್ಚಿಕೊಂಡಿದೆ. ಅನೇಕ ಜನಪರ ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ ( Basavaraj Bommai ) ಅವರನ್ನು ಅಭಿನಂದಿಸುತ್ತೇನೆ. ಎರಡು ವರ್ಷಗಳಲ್ಲಿ ಕೋವಿಡ್‌ನ ಪ್ರತಿಕೂಲ ಸಮಯ ಹಾಗೂ ಪ್ರಾಕೃತಿಕ ತೊಂದರೆ ಎದುರಿಸಿಯೂ ಅಭಿವೃದ್ಧಿ ಕಾರ್ಯಕ್ಕೆ ವೇಗ ದೊರೆತಿದೆ. ಶಾಸಕರು ಕೂಡ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್‌ಗೆ ಭ್ರಮೆ: ಕಾಂಗ್ರೆಸ್‌ಗೆ ಅಧಿಕಾರ ಇಲ್ಲದೆ ಒಂದು ರೀತಿಯ ಭ್ರಮೆ ಉಂಟಾಗಿದೆ. ಮೇಕೆದಾಟು, ನಾರಾಯಣಗುರು ವಿಚಾರವನ್ನು ವಿವಾದ ಮಾಡಲು ಹೊರಟಿದೆ. ಅಪಪ್ರಚಾರ ಮೂಲಕ ಅಧಿಕಾರ ಗಳಿಸುವ ಕಾಂಗ್ರೆಸ್‌ನ ಹುನ್ನಾರ ಈಡೇರದು. ಬಿಜೆಪಿಯಲ್ಲಿ ಮೂಲ, ವಲಸಿಗರು ಎಂಬ ಭೇದಭಾವ ಇಲ್ಲ, ಎಲ್ಲರೂ ಒಂದೇ. ಆದರೆ ಕಾಂಗ್ರೆಸ್‌ನಲ್ಲಿ ಡಿಕೆಶಿ, ಸಿದ್ದು, ಖರ್ಗೆ, ಪರಮೇಶ್ವರ್, ಹರಿಪ್ರಸಾದ್ ಈ ನಾಯಕರ ಗುಂಪುಗಾರಿಕೆ ಇದೆ. ಬಿಜೆಪಿ ಒಗ್ಗಟ್ಟಿನ ಪಕ್ಷವಾಗಿದ್ದು, ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿಜಯಧ್ವಜ ಹಾರಿಸಲಿದೆ ಎಂದರು.
ಸಚಿವ ಸುನಿಲ್ ಕುಮಾರ್ ಅವರು ಕದ್ರಿ ಶ್ರೀಮಂಜುನಾಥ ದೇವಸ್ಥಾನ, ಶ್ರೀಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನ ಹಾಗೂ ಕಾರ್‌ಸ್ಟ್ರೀಟ್ ಶ್ರೀವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ನೆರವೇರಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಪ್ರತಾಪ್‌ಸಿಂಹ ನಾಯಕ್, ದ.ಕ. ಪ್ರಭಾರಿ ಭರತೇಶ್, ಸಹಪ್ರಭಾರಿ ರಾಜೇಶ್ ಕಾವೇರಿ, ಮೇಯರ್ ಪ್ರೇಮಾನಂದ ಶೆಟ್ಟಿಇದ್ದರು.
ವಾರದಲ್ಲಿ ಎರಡು ದಿನ ದ.ಕ.ದಲ್ಲಿ: ಜಿಲ್ಲಾ ಉಸ್ತುವಾರಿ ಸಚಿವನಾಗಿ (Minister In-charge for Dakshina Kannada) ವಾರದಲ್ಲಿ ಎರಡು ದಿನ ದ.ಕ.ಜಿಲ್ಲೆಯಲ್ಲಿ ಇರಲು ಪ್ರಯತ್ನಿಸುತ್ತೇನೆ. ಉಳಿದ ದಿನಗಳಲ್ಲಿ ಸ್ವಕ್ಷೇತ್ರ ಕಾರ್ಕಳ, ಉಡುಪಿ ಜಿಲ್ಲೆಯ ಅಭಿವೃದ್ಧಿಗೂ ಶ್ರಮಿಸಲಿದ್ದೇನೆ. ಅಲ್ಲದೆ ನನ್ನಲ್ಲಿರುವ ಎರಡು ದೊಡ್ಡ ಇಲಾಖೆಗಳ ಅಭಿವೃದ್ಧಿಗೂ ಸಮಯ ನೀಡಬೇಕಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಹೂಗುಚ್ಛ ಸ್ವೀಕರಿಸೋದಿಲ್ಲ: ಸಚಿವ ಸುನಿಲ್ ಕುಮಾರ್ ಅವರು ಹೂಗುಚ್ಛ ಸ್ವೀಕರಿಸುವುದಿಲ್ಲ. ಅವರಿಗಾಗಿ ಯಾರೂ ಹೂಗುಚ್ಛ ತರಬಾರದು. ಅದರ ಬದಲು ಪುಸ್ತಕ ನೀಡಬಹುದು ಎಂದು ಸಮಾರಂಭದ ನಿರೂಪಕ ರಾಮದಾಸ್ ಬಂಟ್ವಾಳ್ ಪ್ರಕಟಿಸಿದರು.