ಬೆಂಗಳೂರು :  ರಾಜ್ಯದ ಪರಿ​ಶಿಷ್ಟಜಾತಿ ಹಾಗೂ ಪಂಗ​ಡದ ಫಲಾ​ನು​ಭ​ವಿ​ಗ​ಳ ವಸತಿ ನಿರ್ಮಾಣ ಯೋಜ​ನೆ ಕಳೆದ ಐದು ತಿಂಗ​ಳಿ​ನಿಂದ ತಟ​ಸ್ಥ​ಗೊಂಡಿ​ದೆ. ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ (ಪರಿಶಿಷ್ಟಜಾತಿ ಮತ್ತು ಗಿರಿಜನ ಉಪಯೋಜನೆ) ಅನುದಾನದಡಿ ನಿರ್ಮಾಣಗೊಳ್ಳಬೇಕಿದ್ದ ಪರಿಶಿಷ್ಟಜಾತಿ ಹಾಗೂ ಪಂಗಡದ ಫಲಾನುಭವಿಗಳ ವಸತಿ ನಿರ್ಮಾಣ ಯೋಜನೆ ತಟ​ಸ್ಥ​ಗೊ​ಳ್ಳಲು ಕಾರಣ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಇಲಾಖೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ.

ಸಮಾಜ ಕಲ್ಯಾಣ ಇಲಾಖೆಯು 2015-16ರಿಂದ ಈವರೆಗೆ ವಿವಿಧ ಯೋಜನೆ ಹಾಗೂ ಘಟಕ ವೆಚ್ಚ ಹೆಚ್ಚಳದ 2,988.59 ಕೋಟಿ ರು. ಹಣವನ್ನು ವಸತಿ ಇಲಾಖೆಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ವಸತಿ ಇಲಾಖೆಯ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಹಣ ಬಿಡುಗಡೆ ವಿಳಂಬದಿಂದಾಗಿ, ನಿಗಮದಿಂದಲೇ 577.19 ಕೋಟಿ ರು. ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ. ಅನುದಾನದ ಕೊರತೆಯಿಂದ ಜೂ.12ರಿಂದ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡುವುದನ್ನು ತಡೆ ಹಿಡಿಯಲಾ​ಗಿದೆ.

ಹೀಗಾಗಿ ಕೂಡಲೇ ಎಸ್‌ಸಿಪಿ-ಟಿಎಸ್‌ಪಿ 2018-19ನೇ ಸಾಲಿನ ಆಯವ್ಯಯದ 629.86 ಕೋಟಿ ರು., ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆಯಡಿ 2018-19ನೇ ಸಾಲಿನ ಪೂರಕ ಆಯವ್ಯಯದಲ್ಲಿ ಸೂಚಿಸಿರುವ 600 ಕೋಟಿ ರು. ಹಾಗೂ ಅಂಬೇಡ್ಕರ್‌ ನಿವಾಸ್‌ ಯೋಜನೆಯಡಿ ಬಾಕಿ ಇರುವ 629.86 ಕೋಟಿ ರು. ಸೇರಿ 1,859.72 ಕೋಟಿ ರು.ಗಳನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದೆ.

ಆರ್ಥಿಕ ಸಮಸ್ಯೆ ಏನು: ಪರಿಶಿಷ್ಟಜಾತಿ ಹಾಗೂ ಪಂಗಡದ ಫಲಾನುಭವಿಗಳ ಮನೆಯ ಹೆಚ್ಚುವರಿ ನಿರ್ಮಾಣ ವೆಚ್ಚವನ್ನು ಎಸ್‌ಸಿಪಿ-ಟಿಎಸ್‌ಪಿ ನಿಧಿಯಿಂದ ಸಮಾಜ ಕಲ್ಯಾಣ ಇಲಾಖೆ ಭರಿಸಬೇಕು.

2017-18ನೇ ಆಯವ್ಯಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಎಸ್‌ಸಿ, ಎಸ್‌ಟಿಗಳ ಗ್ರಾಮೀಣ ಕುಟುಂಬಗಳಿಗೆ ಮನೆ ನಿರ್ಮಾಣ ವೆಚ್ಚವನ್ನು 1.50 ಲಕ್ಷಗಳಿಂದ 1.75 ಲಕ್ಷ ರು.ಗಳಿಗೆ ಹಾಗೂ ನಗರ ಪ್ರದೇಶದಲ್ಲಿ 1.80 ಲಕ್ಷ ರು.ಗಳಿಂದ 2 ಲಕ್ಷ ರು.ಗಳಿಗೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ.

ಒಟ್ಟಾರೆ 8,09,559 ಪರಿಶಿಷ್ಟಜಾತಿ, ಪಂಗಡದ ಫಲಾನುಭವಿಗಳಿಗೆ ಘಟಕ ವೆಚ್ಚ ಹೆಚ್ಚಿಸಿರುವ ಪರಿಣಾಮ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಹೆಚ್ಚುವರಿಯಾಗಿ 2,988.59 ಕೋಟಿ ರು. ಅನುದಾನ ನೀಡಬೇಕಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆಯು ಈವರೆಗೂ ಘಟಕ ವೆಚ್ಚ ಹೆಚ್ಚಳದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ವಸತಿ ಇಲಾಖೆ ಆರೋಪಿಸಿದೆ.

ಎಸ್‌ಸಿಪಿ-ಟಿಎಸ್‌ಪಿ ಅನುದಾನ ಇಲ್ಲ:  ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸ ಯೋಜನೆಯಡಿ 2018-19ನೇ ಸಾಲಿಗೆ 839.82 ಕೋಟಿ ರು. ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಇಲಾಖೆಗೆ ಒದಗಿಸಲಾಗಿದೆ. ಜತೆಗೆ ಪೂರಕ ಆಯವ್ಯಯದಲ್ಲಿ 600 ಕೋಟಿ ರು. ಒದಗಿಸಲಾಗಿದೆ. ಈ ಹಣ ವಸತಿ ಇಲಾಖೆಗೆ ಬಿಡುಗಡೆ ಮಾಡುವಂತೆ ವಸತಿ ಇಲಾಖೆ ಮನವಿ ಮಾಡಿದರೆ, 2018-19ನೇ ಸಾಲಿನಲ್ಲಿ ವಸತಿ ಇಲಾಖೆಗೆ ಎಸ್‌ಸಿಪಿ ಅಡಿ 940.42 ಕೋಟಿ ರು. ಹಾಗೂ ಟಿಎಸ್‌ಪಿ ಅಡಿ 269.36 ಕೋಟಿ ರು. ಹಂಚಿಕೆ ಮಾಡಿ ಸಮಾಜ ಕಲ್ಯಾಣ ಇಲಾಖೆಯಿಂದ ಹೆಚ್ಚುವರಿಯಾಗಿ ಅನುದಾನ ನೀಡಲು ಅನುದಾನ ಲಭ್ಯವಿಲ್ಲ. ಹೀಗಾಗಿ ವಸತಿ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನೇ ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ.

ಆದರೆ, ವಸತಿ ಇಲಾಖೆಗೆ ರಾಜ್ಯ ಸರ್ಕಾರವು ಎಸ್‌ಸಿಪಿ-ಟಿಎಸ್‌ಪಿ ಅಡಿ 839.82 ಕೋಟಿ ರು. ಮಾತ್ರ ಒದಗಿಸಿದೆ. ಉಳಿದಂತೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ (ನಗರ) 326 ಕೋಟಿ ರು. ಹಾಗೂ ಗ್ರಾಮೀಣ ಭಾಗದ ಯೋಜನೆಗೆ 507 ಕೋಟಿ ರು. ಅನುದಾನ ನೀಡಿದೆ. ಈ ಅನುದಾನವನ್ನು ಕೇಂದ್ರ ಸೂಚಿಸಿದ ಯೋಜನೆಗೆ ಹೊರತುಪಡಿಸಿ ಬೇರೆ ಯೋಜನೆಗೆ ಉಪಯೋಗಿಸುವಂತಿಲ್ಲ ಎಂದು ವಸತಿ ಇಲಾಖೆ ಸ್ಪಷ್ಟಪಡಿಸಿದೆ.

ಜತೆಗೆ ಘಟಕ ವೆಚ್ಚ ಹೆಚ್ಚಿಸಿರುವ 2,988.59 ಕೋಟಿ ರು. ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಆರ್ಥಿಕ ಸಮಸ್ಯೆ ಉಂಟಾಗಿದ್ದು, ಫಲಾನುಭವಿಗಳಿಗೆ ಸಹಾಯಧನ ನಿಲ್ಲಿಸಲಾಗಿದೆ. ಪ್ರಸ್ತುತ ಎಸ್‌ಸಿಪಿ ಮತ್ತು ಟಿಎಸ್‌ಪಿ 2018-19ನೇ ಸಾಲಿನ ಆಯವ್ಯಯದಲ್ಲಿ ಒದಗಿಸಲಾದ ಅನುದಾನ 839.82 ಕೋಟಿ ರು.ಗಳಲ್ಲಿ ಪ್ರಥಮ ತ್ರೈಮಾಸಿಕ ಕಂತಿನ ಅನುದಾನ 209.95 ಕೋಟಿ ರು.ಗಳನ್ನು ಬಿಡುಗಡೆ ಮಾಡಿದ್ದು, ಇನ್ನೂ 629.86 ಕೋಟಿ ರು. ಬಿಡುಗಡೆ ಮಾಡಬೇಕಿದೆ. ಜತೆಗೆ 2018-19ರ ಪೂರಕ ಆಯವ್ಯಯದ ಹೆಚ್ಚುವರಿ 600 ಕೋಟಿ ರು. ಸೇರಿ ಒಟ್ಟು 1,859.72 ಕೋಟಿ ರು. ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವಂತೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಣಕಾಸು ಸಮಸ್ಯೆ ಸ್ವಲ್ಪ ಇದೆ. ಆದರೆ, ವಸತಿ ಯೋಜನೆಗೆ ಸಮಸ್ಯೆ ಇಲ್ಲ. ಈ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅವರು ಅನುಮೋದಿಸಿದ ಕೂಡಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಿಂದ ಹಣ ಬಿಡುಗಡೆ ವಿಳಂಬವಾಗಿರುವುದು ನಿಜ. ಹೀಗಾಗಿ ಕೆಲ ತಿಂಗಳಿಂದ ಫಲಾನುಭವಿಗಳಿಗೆ ಹಣ ತಡೆದಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯು ಪ್ರಥಮ ತ್ರೈಮಾಸಿಕ ಕಂತಿನ 209.95 ಕೋಟಿ ರು. ಹಣವನ್ನು 20 ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದಾರೆ. ಖಜಾನೆಯ ಅನುಮೋದನೆ ದೊರೆತ ಬಳಿಕ ದೀಪಾವಳಿ ಒಳಗಾಗಿ ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ. ಇದರ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ನೀಡಲಾಗುವುದು.

- ವಿ.ಅನ್ಬುಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ


ವರದಿ : ಶ್ರೀಕಾಂತ್‌ ಎನ್‌. ಗೌಡ​ಸಂದ್ರ