ಪ್ರಕರಣ ರದ್ದು ಕೋರಿ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಸಂವಹನ ಮತ್ತು ಪ್ರಚಾರ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗೂ ಸಾಮಾಜಿಕ ಮತ್ತು ಡಿಜಿಟಲ್‌ ಮಾಧ್ಯಮದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ ನ್ಯಾ. ಎಂ.ನಾಗಪ್ರಸನ್ನ ಅವರ ಪೀಠ. 

ಬೆಂಗಳೂರು(ಜೂ.29): ಭಾರತ್‌ ಜೋಡೋ ಯಾತ್ರೆಯಲ್ಲಿ ಕೆಜಿಎಫ್‌-2 ಚಿತ್ರದ ಹಾಡು ಉಪಯೋಗಿಸಿಕೊಳ್ಳುವ ಮೂಲಕ ಹಕ್ಕು ಸ್ವಾಮ್ಯ ಉಲ್ಲಂಘಿಸಿದ ಆರೋಪದ ಮೇಲೆ ಯಶವಂತಪುರ ಠಾಣಾ ಪೊಲೀಸರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿ ಮೂವರು ಕಾಂಗ್ರೆಸ್‌ ಮುಖಂಡರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ರದ್ದು ಕೋರಿ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಸಂವಹನ ಮತ್ತು ಪ್ರಚಾರ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗೂ ಸಾಮಾಜಿಕ ಮತ್ತು ಡಿಜಿಟಲ್‌ ಮಾಧ್ಯಮದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾ. ಎಂ.ನಾಗಪ್ರಸನ್ನ ಅವರ ಪೀಠ ಬುಧವಾರ ಆದೇಶಿಸಿದೆ.

ಪ್ರಚೋದನಕಾರಿ ಭಾಷಣ: ಮುತಾಲಿಕ್‌ ವಿರುದ್ಧದ ಪ್ರಕರಣ ರದ್ದು

ಹಕ್ಕುಸ್ವಾಮ್ಯ ಉಲ್ಲಂಘನೆ- ಕೋರ್ಟ್‌:

ಪ್ರಕರಣದಲ್ಲಿ ಕೆಜಿಎಫ್‌-2 ಹಾಡಿನ ಸೋರ್ಸ್‌ ಕೋಡ್‌ ಅನ್ನು ಅರ್ಜಿದಾರರು ತಿರುಚಿರುವುದು (ಟ್ಯಾಂಪರ್‌) ಕಂಡು ಬಂದಿದ್ದು, ಅದನ್ನು ಬಳಕೆ ಮಾಡಿರುವುದು ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗಲಿದೆ. ದೂರುದಾರರ (ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ) ಹಕ್ಕು ಸ್ವಾಮ್ಯವನ್ನು ಲಘುವಾಗಿ ತೆಗೆದುಕೊಳ್ಳಲಾಗಿದೆ. ಈ ಎಲ್ಲ ವಿಚಾರಗಳು ತನಿಖೆಯಿಂದ ಹೊರಬರಬೇಕಿದೆ. ಆದ್ದರಿಂದ ಈ ಹಂತದಲ್ಲಿ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ರಾಹುಲ್‌ ಗಾಂಧಿ ನಡೆಸಿದ ಭಾರತ ಜೋಡೋ ಯಾತ್ರೆಯಲ್ಲಿ ಕಂಪನಿಯ ಅನುಮತಿ ಪಡೆಯದೆ ಕೆಜಿಎಫ್‌ ಸಿನಿಮಾ ಹಾಡು ಬಳಸಿಕೊಳ್ಳಲಾಗಿದೆ. ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೊ ಹಾಗೂ ಪೋಸ್ಟ್‌ ಹಾಕಲಾಗಿದೆ. ಈ ಮುಖಾಂತರ ಕಾಂಗ್ರೆಸ್‌ ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿ ಮುಂದುವರೆಸಲು ಹಾಗೂ ಪ್ರಚಾರಕ್ಕಾಗಿ ನಮ್ಮ ಹಕ್ಕು ಸ್ವಾಮ್ಯ ಹಾಗೂ ಬೌದ್ಧಿಕ ಆಸ್ತಿ ಹಕ್ಕನ್ನು ಉಲ್ಲಂಘಿಸಿದೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕೆಜಿಎಫ್‌-2 ಚಿತ್ರದ ಹಾಡುಗಳ ಹಕ್ಕುಸ್ವಾಮ್ಯ ಪಡೆದಿದ್ದ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ 2022ರ ನ.4ರಂದು ಯಶವಂತಪುರ ಠಾಣೆಗೆ ದೂರು ನೀಡಿತ್ತು. ಈ ದೂರು ಆಧರಿಸಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ಡಿ.12ರಂದು ರಾಹುಲ್‌ ಗಾಂಧಿ ಮತ್ತಿತರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.