ದಕ್ಷಿಣ ಕನ್ನಡ ಜಿಲ್ಲೆಯನ್ನು 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಒತ್ತಾಯಿಸಿದ್ದಾರೆ.

ಮಂಗಳೂರು (ಜುಲೈ.10): ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾಯಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಹೇಳಿದರು.

ಅವರು ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿಯ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯ ನಗರ ಅರಸರ ಕಾಲದಿಂದಲೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಇದ್ದ ಐತಿಹಾಸಿಕ ಹೆಸರು ಮಂಗಳೂರು ರಾಜ್ಯವಾಗಿತ್ತು. ಮಂಗಳೂರು ಹೆಸರನ್ನು ಇಡೀ ಜಿಲ್ಲೆಗೆ ಇಡಬೇಕು ಎಂದು ಪಕ್ಷಾತೀತವಾಗಿ ರಾಜಕಾರಣಿಗಳು ಸಾಮಾಜಿಕ ಚಿಂತಕರು ತುಳುವರು ಮತ್ತು ಧಾರ್ಮಿಕ ಮುಖಂಡರ ಬೇಡಿಕೆಯಾಗಿದೆ.

ಮಂಗಳೂರು ಬ್ರ್ಯಾಂಡ್‌ನಿಂದ ಮುಂದೆ ಉದ್ದಿಮೆಗಳು, ಐಟಿ ಕಂಪನಿಗಳು ಮತ್ತು ಇತರ ಯೋಜನೆಗೆ ಸಹಕಾರಿಯಾಗಲಿದೆ. ಜಿಲ್ಲೆಯ ಸಂಸದರು, ಶಾಸಕರು, ಎಂಎಲ್‌ಸಿಗಳು ಮಂಗಳೂರು ಹೆಸರಿನ ಕುರಿತು ಒಲವು ತೋರಿಸಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಮ್‌ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿಗೆ ನಿರ್ದಿಷ್ಟವಾದ ಅರ್ಥವನ್ನು ನೀಡುವುದಿಲ್ಲ. ಪೋರ್ಚ್‌ಗೀಸರು ಮತ್ತು ಬ್ರಿಟಿಷರು ನೀಡಿದ ಬಳುವಳಿ ಹೆಸರೇ ಕೆನರಾ. ಮುಂದೆ ಕೆನರಾ ವಿಭಜನೆಗೊಂಡು ನಾರ್ತ್‌ ಕೆನರಾ, ಸೌತ್‌ ಕೆನರಾ ಆಯಿತು. ಮುಂದೆ ಅಪಭ್ರಂಶವಾಗಿ ಕನ್ನಡವಾಗಿ ಬದಲಾಯಿತು. ಈಗ ಕಾಲ ಬದಲಾಗಿದೆ ಮಂಗಳೂರು ಎನ್ನುವ ಹೆಸರನ್ನು ಬ್ರ್ಯಾಂಡ್‌ ಆಗಿ ರೂಪಿಸಲು ಇದೊಂದು ಸಕಾಲ ಎಂದರು.

ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನು ಭೇಟಿಯಾಗುವ ಜತೆಗೆ ಮುಖ್ಯಮಂತ್ರಿಯ ಗಮನಕ್ಕೂ ತರಲಾಗುವುದು. ಇದರಲ್ಲಿ ಯಾವುದೇ ರಾಜಕೀಯ, ಜಾತಿಧರ್ಮ, ಜನಾಂಗ ಸೇರಿದಂತೆ ಯಾವುದೇ ಗೊಂದಲವಿಲ್ಲದೇ ಹಕ್ಕೊತ್ತಾಯ ಮಂಡಿಸಲಾಗುತ್ತದೆ ಎಂದರು.ಈ ಸಂದರ್ಭ ಮಾಜಿ ಶಾಸಕ ಬಿ.ಎ.ಮೊದ್ದೀನ್‌ ಬಾವಾ, ಪಾಲಿಕೆ ಮಾಜಿ ಸದಸ್ಯ ಕಿರಣ್‌ ಕುಮಾರ್‌ ಕೋಡಿಕಲ್‌, ಯುವ ಜನತಾದಳ ಅಧ್ಯಕ್ಷ ಅಕ್ಷಿತ್‌ ಸುವರ್ಣ, ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ವಿಎಚ್‌ಪಿಯ ಪ್ರದೀಪ್‌ ಸರಿಪಲ್ಲ, ಪ್ರಮುಖರಾದ ಪ್ರೇಮನಾಥ್‌, ರೋಶನ್‌ ರೊನಾಲ್ಡ್‌, ಶೈಲೇಶ್‌, ಉದಯ ಪೂಂಜ, ಮಹೀ ಮೂಲ್ಕಿ, ಭರತ್‌ ಬಳ್ಳಾಲ್‌ ಭಾಗ್‌, ಯೋಗೀಶ್‌ ಶೆಟ್ಟಿ, ರಾಜೇಶ್‌ ಆಳ್ವ ಮತ್ತಿತರರಿದ್ದರು.